ADVERTISEMENT

ಹಿಡಕಲ್‌ ಜಲಾಶಯದಿಂದ ಹೆಚ್ಚಿನ ನೀರು ಎತ್ತಲು ತೀರ್ಮಾನ

ಬೆಳಗಾವಿಗೆ ಕುಡಿಯುವ ನೀರು ಪೂರೈಕೆ;

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 11:28 IST
Last Updated 18 ಜೂನ್ 2019, 11:28 IST
ಬೆಳಗಾವಿಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಬೆಳಗಾವಿಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.   

ಬೆಳಗಾವಿ: ‘ನಗರದ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸಲು ಹಿಡಕಲ್‌ ಜಲಾಶಯದಿಂದ ಹೆಚ್ಚಿನ ನೀರು ಎತ್ತಲು ತೀರ್ಮಾನಿಸಲಾಗಿದೆ. ಪ್ರಸ್ತುತ 12 ಎಂಜಿಡಿ ( ದಿನವೊಂದಕ್ಕೆ ದಶಲಕ್ಷ ಗ್ಯಾಲನ್‌) ನೀರು ಪಡೆಯಲಾಗುತ್ತಿದ್ದು, ಇದನ್ನು 18 ಎಂಜಿಡಿಗೆ ಹೆಚ್ಚಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಂಗಳವಾರ ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಗತಿ ಪರಿಶೀಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ಮುಂಗಾರು ಮಳೆ ಆರಂಭ ವಿಳಂಬವಾಗಿದ್ದರೂ, ಬೆಳಗಾವಿಗೆ ಕುಡಿಯುವ ನೀರಿನ ಕೊರತೆಯಿಲ್ಲ. ನಗರಕ್ಕೆ ಪ್ರಮುಖವಾಗಿ ಹಿಡಕಲ್‌ ಜಲಾಶಯ ಹಾಗೂ ರಕ್ಕಸಕೊಪ್ಪ ಜಲಾಶಯದಿಂದ ನೀರು ಪೂರೈಸಲಾಗುತ್ತಿತ್ತು. ಈಗ ರಕ್ಕಸಕೊಪ್ಪ ಜಲಾಶಯದಲ್ಲಿ ನೀರು ಕಡಿಮೆಯಾಗಿದೆ. ಹೀಗಾಗಿ, ಈ ಕೊರತೆಯನ್ನು ಹಿಡಕಲ್‌ ಜಲಾಶಯದಿಂದ ತುಂಬಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ನೀರು ಇದ್ದರೂ, ನಗರದ ಎಲ್ಲ ಪ್ರದೇಶಗಳಿಗೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ 24x7 ನಿರಂತರ ಕುಡಿಯುವ ನೀರು ಯೋಜನೆಯಡಿ ಎಲ್ಲೆಡೆ ನೀರು ಪೂರೈಸಲು ಕ್ರಮಕೈಗೊಳ್ಳಲಾಗುವುದು. ಪ್ರಸ್ತುತ ನಗರದ 10 ವಾರ್ಡ್‌ಗಳಲ್ಲಿ ಮಾತ್ರ ಈ ಯೋಜನೆಯಿದ್ದು, ಇನ್ನುಳಿದ ಎಲ್ಲ ವಾರ್ಡ್‌ಗಳಿಗೂ ವಿಸ್ತರಿಸಲಾಗುವುದು. ಸುಮಾರು 430 ಕೋಟಿ ವೆಚ್ಚದಲ್ಲಿ ವಿಸ್ತರಣೆ ಯೋಜನೆಗೆ ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಟೆಂಡರ್‌ ಪ್ರಕ್ರಿಯೆ ಕೂಡ ಮುಗಿದಿದೆ. ಸದ್ಯದಲ್ಲಿಯೇ ಕೆಲಸ ಪ್ರಾರಂಭಗೊಳ್ಳಲಿದೆ’ ಎಂದು ಹೇಳಿದರು.

‘ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳು ಆರಂಭವಾಗಿ, ಎರಡೂವರೆ ವರ್ಷಗಳು ಕಳೆದಿವೆ. ಸುಮಾರು ಶೇ 60ರಷ್ಟು ಕಾಮಗಾರಿಗಳು ಮುಗಿದಿವೆ. ಇನ್ನುಳಿದ ಕಾಮಗಾರಿಗಳನ್ನು ಮುಂಬರುವ ಎರಡೂವರೆ ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.