ಬೆಳಗಾವಿ: ‘ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಿ, ಅನುದಾನ ತಂದವರು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ. ಆದರೆ, ಇದಕ್ಕೆಲ್ಲ ತಾವೇ ಕಾರಣ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿಕೊಳ್ಳುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದ ವ್ಯಕ್ತಿ. ಕನಿಷ್ಠ ಸಾಮಾನ್ಯ ಜ್ಞಾನವಾದರೂ ಇರಬೇಕಿತ್ತು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ದೂರಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಇವರು ಸಂಸದರಾದ ತಕ್ಷಣ ಒಂದು ಪತ್ರ ಕೊಟ್ಟರಂತೆ, ಅದಕ್ಕೆ ಅನುದಾನ ಬಂದಿದೆ ಅಂತೆ. ಇವರ ಪತ್ರಕ್ಕೆ ಯಾರಾದರೂ ನೂರಾರು ಕೋಟಿ ಕೊಟ್ಟುಬಿಡುತ್ತಾರೆಯೇ? ಬಾಯಿ ಇದೆ ಎಂದು ಏನೇನೋ ಮಾತನಾಡಬಾರದು. ಅವರಿಗೆ ತಾಕತ್ತಿದ್ದರೆ ಜಿಲ್ಲೆಯಲ್ಲಿ ಸಾಕಷ್ಟು ದೇವಸ್ಥಾನಗಳಿವೆ, ಅನುದಾನ ತಂದು ಅಭಿವೃದ್ಧಿ ಮಾಡಿ ತೋರಿಸಲಿ’ ಎಂದು ಸವಾಲು ಹಾಕಿದರು.
‘ಸವದತ್ತಿ ಯಲ್ಲಮ್ಮ ಎಚ್.ಕೆ.ಪಾಟೀಲ ಅವರ ಮನೆದೇವರು. ಅಭಿವೃದ್ಧಿಗೆ ಯೋಜನೆ ರೂಪಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಸಾಕಷ್ಟು ಪ್ರಯತ್ನಿಸಿದ್ದಾರೆ. ಅವರ ಪ್ರಯತ್ನದಿಂದ ಅನುದಾನ ಬಂದಿದೆ. ಅದರ ಸಂಪೂರ್ಣ ಶ್ರೇಯಸ್ಸು ಎಚ್.ಕೆ.ಪಾಟೀಲ ಅವರಿಗೆ ಸಲ್ಲಬೇಕು ವಿನಾ ಶೆಟ್ಟರ್‌ಗೆ ಅಲ್ಲ’ ಎಂದೂ ಹೇಳಿದರು.
ಮೃಣಾಲ್ ಶುಗರ್ಸ್‌ಗೆ ಸಂಬಂಧವಿಲ್ಲ:
‘ಹಿಡಕಲ್ ಜಲಾಶಯದಿಂದ ಧಾರವಾಡದ ಕೈಗಾರಿಕೆ ಪ್ರದೇಶಕ್ಕೆ ನೀರು ಒಯ್ಯುವ ಯೋಜನೆಗೂ, ನಾವು ಧಾರವಾಡದಲ್ಲಿ ತೆರೆಯುತ್ತಿರುವ ‘ಮೃಣಾಲ್ ಶುಗರ್ಸ್’ಗೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ ಇದನ್ನು ನನ್ನ ತಲೆಗೆ ಕಟ್ಟುತ್ತಿದ್ದಾರೆ’ ಎಂದು ಲಕ್ಷ್ಮೀ ಸ್ಪಷ್ಟಪಡಿಸಿದರು.
‘ಹಿಡಕಲ್ ಜಲಾಶಯದಿಂದ ನೀರು ಯಾರು ಒಯ್ಯುತ್ತಿದ್ದಾರೆ? ಏಕೆ ಒಯ್ಯುತ್ತಿದ್ದಾರೆ? ನನಗೆ ಗೊತ್ತಿಲ್ಲ. ಇದಕ್ಕೆ ನಮ್ಮ ಹೆಸರನ್ನು ತಳುಕು ಹಾಕುವುದನ್ನು ಕೇಳಿ ನನಗೆ ಆಶ್ಚರ್ಯವಾಗಿದೆ. ನಮ್ಮ ಸಕ್ಕರೆ ಕಾರ್ಖಾನೆಗೆ ಈ ನೀರು ಅಗತ್ಯವೂ ಇಲ್ಲ. ನಮಗೆ ಹತ್ತಿರದಲ್ಲಿ ಹಳ್ಳವಿದೆ. ಬೇಕಾದಷ್ಟು ಕೊಳವೆ ಬಾವಿಗಳನ್ನೂ ತೋಡಿಸಿದ್ದೇವೆ. ನಮಗೆ ಹಿಡಕಲ್ ನೀರಿನ ಅವಶ್ಯಕತೆ ಇಲ್ಲ’ ಎಂದರು.
‘ಬೆಳಗಾವಿ ಜನರ ಭಾವನೆಗಳಿಗೆ ವಿರುದ್ಧವಾಗಿ ನಾನು ಯಾವತ್ತೂ ನಡೆದುಕೊಳ್ಳುವುದಿಲ್ಲ. ಹಿಡಕಲ್ ಜಲಾಶಯದ ನೀರನ್ನು ಧಾರವಾಡಕ್ಕೆ ಒಯ್ಯುವ ಯೋಜನೆ ಸಚಿವ ಸಂಪುಟದ ಮುಂದೆ ಬಂದೂ ಇಲ್ಲ. ಇದು ಯಾವ ಕಾಲದಲ್ಲಿ ಮಂಜೂರಾಗಿದೆ ಎನ್ನುವುದೂ ಗೊತ್ತಿಲ್ಲ. ನಾವಂತೂ ಒಪ್ಪಿಗೆ ಕೊಟ್ಟಿಲ್ಲ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆಯನ್ನೂ ಕೊಟ್ಟಿದ್ದಾರೆ. ನಾನೂ ಅವರೊಂದಿಗೆ ಚರ್ಚಿಸಿ, ಸೂಕ್ತವಾಗಿ ಸ್ಪಂದಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಶಕ್ತಿ’ ತುಂಬುವ ವಿಶ್ವಾಸವಿದೆ:
‘ಸರ್ಕಾರಕ್ಕೆ ಈಗ ಎರಡು ವರ್ಷ ತುಂಬಿದೆ. ನಾವು ಚುನಾವಣೆಗೆ ಮುನ್ನ ನೀಡಿದ ಎಲ್ಲ ವಾಗ್ದಾನಗಳನ್ನೂ ಈಡೇರಿಸಿದ್ದೇವೆ. ಗೃಹಲಕ್ಷ್ಮೀ ಯೋಜನೆಯ 19 ಕಂತು ಈಗಾಗಲೇ ಹಾಕಲಾಗಿದೆ. ಶೀಘ್ರವೇ 20ನೇ ಕಂತನ್ನೂ ಹಾಕುತ್ತೇವೆ. ಮಾರ್ಚ್ ತಿಂಗಳದ್ದು ಸ್ವಲ್ಪ ತಾಂತ್ರಿಕ ಸಮಸ್ಯೆಯಾಗಿದೆ. ಏಪ್ರಿಲ್ ಹಣ ಇಷ್ಟರಲ್ಲೇ ಜಮಾ ಆಗಲಿದೆ’ ಎಂದು ಸಚಿವೆ ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಪಕ್ಷಕ್ಕೆ ಹೈಕಮಾಂಡ್ ಇದೆ. ಅವರು ಎಲ್ಲ ಶಾಸಕರ ಅಭಿಪ್ರಾಯ ಪಡೆದು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧಳಾಗಿ ನಡೆದುಕೊಳ್ಳುವವಳು’ ಎಂದರು.
ದೇವಸ್ಥಾನ ಜೀರ್ಣೋದ್ಧಾರಕ್ಕೆ
ಅನುದಾನ ಬೆಳಗಾವಿ ಗ್ರಾಮೀಣ ಕ್ಷೇತ್ರದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನಾಲ್ಕು ಗ್ರಾಮಗಳ ದೇವಸ್ಥಾನಗಳ ಟ್ರಸ್ಟ್ ಕಮಿಟಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಂಗಳವಾರ ಚೆಕ್‌ಗಳನ್ನು ಹಸ್ತಾಂತರಿಸಿದರು. ಕುಕಡೊಳ್ಳಿ ಗ್ರಾಮದ ಕಲ್ಮೇಶ್ವರ ದೇವಸ್ಥಾನಕ್ಕೆ ₹13.33 ಲಕ್ಷ ವಾಘವಾಡೆ ಗ್ರಾಮದ ರವಳನಾಥ್ ಮಂದಿರಕ್ಕೆ ₹6.66 ಲಕ್ಷ ಸಾಂಬ್ರಾ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ₹4 ಲಕ್ಷ ಉಚಗಾಂವ ಗ್ರಾಮದ ವಿಠ್ಠಲ ರುಕ್ಮಿಣಿ ದೇವಸ್ಥಾನಕ್ಕೆ ₹10 ಲಕ್ಷ ಅನುದಾನ ನೀಡಿದರು.
‘ಪರಿಸರವಾದಿಗಳು ಸಹಕಾರ ಕೊಡಲಿ’
‘ಮಹದಾಯಿ ಯೋಜನೆ ವಿರುದ್ಧ ಪರಿಸರವಾದಿಗಳು ಈಗ ಹೋರಾಟ ನಡೆಸುತ್ತಿದ್ದಾರೆ. ಬಹಳ ವರ್ಷಗಳ ಹೋರಾಟದ ಫಲವಾಗಿ ಮಹದಾಯಿ ಯೋಜನೆ ನಿರ್ಣಾಯಕ ಹಂತಕ್ಕೆ ಬಂದಿದೆ. ಇದು ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ಪರಿಸರವಾದಿಗಳು ಅಡ್ಡಿಪಡಿಸಬಾರದು. ಜನರ ಹಗೂ ಜಾನುವಾರುಗಳ ಜೀವದ ಪ್ರಶ್ನೆ ಇದರಲ್ಲಿದೆ. ದಯಮಾಡಿ ಅಡ್ಡಿಪಡಿಸಬೇಡಿ’ ಎಂದು ಲಕ್ಷ್ಮೀ ಹೆಬ್ಬಾಳಕರ ಮನವಿ ಮಾಡಿದರು. ‘ಪರಿಸರವಾದಿಗಳ ಹೋರಾಟ ಗೋವಾ ಪ್ರಾಯೋಜಿತ ಎನ್ನುವ ಆರೋಪದ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಷಯ ಮಾತನಾಡುವುದಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.