ADVERTISEMENT

ಮೂಡಲಗಿ: ಗುಳ್ಳವ್ವನ ಮೂರ್ತಿ ‘ಹೋಂ ಡೆಲಿವರಿ’

ಮಾರಾಟಕ್ಕೆ ಹೊಸ ದಾರಿ ಕಂಡುಕೊಂಡ ಶಿವಾನಂದ

ಬಾಲಶೇಖರ ಬಂದಿ
Published 14 ಜುಲೈ 2020, 19:30 IST
Last Updated 14 ಜುಲೈ 2020, 19:30 IST
ಗುಳ್ಳವ್ವನ ಹಬ್ಬದ ಕೊನೆಯ ವಾರವಾದ ಮಂಗಳವಾರದಂದು ಮೂಡಲಗಿಯ ಶಿವಾನಂದ ಕುಂಬಾರ ಗುಳ್ಳವ್ವನ ಮಣ್ಣಿನ ಮೂರ್ತಿಗಳನ್ನು ಬೈಕ್‌ನಲ್ಲಿ ತಂದಿದ್ದರು
ಗುಳ್ಳವ್ವನ ಹಬ್ಬದ ಕೊನೆಯ ವಾರವಾದ ಮಂಗಳವಾರದಂದು ಮೂಡಲಗಿಯ ಶಿವಾನಂದ ಕುಂಬಾರ ಗುಳ್ಳವ್ವನ ಮಣ್ಣಿನ ಮೂರ್ತಿಗಳನ್ನು ಬೈಕ್‌ನಲ್ಲಿ ತಂದಿದ್ದರು   

ಮೂಡಲಗಿ: ಆಷಾಢದಲ್ಲಿ ಪ್ರಾರಂಭಗೊಳ್ಳುವ ಗುಳ್ಳವ್ವನ ಹಬ್ಬವನ್ನ ಉತ್ತರ ಕರ್ನಾಟದಲ್ಲಿ ವಿಶೇಷವಾಗಿ ಆಚರಿಸುತ್ತಾರೆ. ಒಂದು ಕಾಲದಲ್ಲಿ ಕುಂಬಾರಣ್ಣನ ಮನೆಗೆ ತೆರಳಿ ತಿರಗಣಿಯನ್ನು ತಿರುಗಿಸಿದ ನಂತರ ಗುಳ್ಳವ್ವನ ಮೂರ್ತಿ ಕೈಗಿಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಇಲ್ಲಿಯ ಶಿವಾನಂದ ಕುಂಬಾರ ಮೂರ್ತಿಗಳನ್ನು ಬೈಕ್‌ನಲ್ಲಿ ತಂದು ಮನೆಗಳಿಗೆ ತಲುಪಿಸುವ ಮೂಲಕ ಗಮನಸೆಳೆದರು.

ನೂರಕ್ಕೂ ಅಧಿಕ ಮೂರ್ತಿಗಳನ್ನು ಇಡಲು ಬೈಕ್‌ನ ಹಿಂಭಾಗದಲ್ಲಿ ಸ್ಟೀಲ್‌ ಡಬ್ಬಿ ಮಾಡಿಸಿದ್ದಾರೆ. ಮನೆ ಮನೆಗೆ ತಿರುಗಿ ಮಾರಾಟ ಮಾಡುತ್ತಿದ್ದಾರೆ. ನಾಲ್ಕು ಮಂಗಳವಾರಗಳ ಹಬ್ಬಕ್ಕೆ ಪ್ರತಿ ವಾರ 800ರಿಂದ ಸಾವಿರದವರೆಗೆ ಗುಳ್ಳವ್ವ ಮೂರ್ತಿಗಳು ಮಾರಾಟವಾಗುತ್ತವೆ ಎನ್ನುತ್ತಾರೆ ಅವರು.

ಮನೆಗೆ ಬಂದು ಒಯ್ದರೆ ₹ 10 ದರವಿದೆ. ಹೋಮ್‌ ಡಿಲಿವರಿಗೆ ₹ 12 ದರ ನಿಗದಿಪಡಿಸಿದ್ದಾರೆ.

ADVERTISEMENT

‘ಮನೆ ಹತ್ತಿರ ಹೋದಾಗ ಹಬ್ಬ ಮತ್ತು ಸಂಪ್ರದಾಯ ನೆನಪಿಸಿಕೊಂಡು ಒಬ್ಬರಿಂದ ಒಬ್ಬರು ಕಂಡು ಖರೀದಿಸುತ್ತಾರ್ರೀ. ಕಾರಹುಣ್ಣಿಮೆಗೆ ಬಸವಣ್ಣನ ಮೂರ್ತಿ ನಂತರ ಆಷಾಢದಲ್ಲಿ ಗುಳ್ಳವ್ವನ ಮೂರ್ತಿ ಅದಾದ ನಂತರ ನಾಗರ ಪಂಚಮಿಗೆ ಮಣ್ಣಿನ ನಾಗಪ್ಪನ ಮೂರ್ತಿಗಳನ್ನು ಮಾಡತ್ತೀವ್ರೀ’ ಎಂದು ತಿಳಿಸಿದರು.

ಅವರು ಮನೆಯ ಕಸುಬು ಬಿಡಬಾರದೆಂದು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಂಪ್ರದಾಯಕ್ಕೆ ತಕ್ಕಂತೆ ಆಯಾ ಹಬ್ಬಕ್ಕೆ ಮಣ್ಣಿನಲ್ಲಿ ಮೂರ್ತಿಗಳನ್ನು ಸಿದ್ಧಗೊಳಿಸಿ ಜನರ ಮನೆಗೆ ತಲುಪಿಸಿ ಹಬ್ಬ ಹರಿದಿನಗಳ ಪರಂಪರೆಯನ್ನು ಮುಂದುರಿಸಲು ಸಹಕರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.