ಮೂಡಲಗಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಶಿವಾಪುರ (ಹ) ಗ್ರಾಮದ ಅಡವಿಸಿದ್ಧೇಶ್ವರ ಶಾಖಾ ಮಠದಿಂದ ಅಡವಿಸಿದ್ದರಾಮ ಸ್ವಾಮೀಜಿ ಅವರನ್ನು ಬಹಿಷ್ಕಾರ ಹಾಕಿದ್ದನ್ನು ಗ್ರಾಮದ ಬಹುತೇಕ ಜನರು ಖಂಡಿಸಿದರು.
‘ಮಠದಲ್ಲಿ ಮಹಿಳೆಯೊಬ್ಬರನ್ನು ಉಳಿಸಿಕೊಂಡಿದ್ದಾರೆ’ ಎಂದು ಆರೋಪಿಸಿ ಗ್ರಾಮದ ಕೆಲವರು ಭಾನುವಾರ ಸ್ವಾಮೀಜಿಯವರನ್ನು ಮಠದಿಂದ ಹೊರಹಾಕಿದ್ದರು.
ಗೋಕಾಕದ ಶೂನ್ಯ ಸಂಪಾದನಾ ಮಠದಲ್ಲಿ ಆಶ್ರಯ ಪಡೆದಿರುವ ಸ್ವಾಮೀಜಿಯವರನ್ನು ಸೋಮವಾರ ಭೇಟಿಯಾದ ಗ್ರಾಮಸ್ಥರು, ‘ಷಡ್ಯಂತ್ರ ನಡೆದಿದೆ. ನಾವು ನಿಮ್ಮೊಂದಿಗೆ ಇದ್ದೇವೆ. ನೀವು ಮಠಕ್ಕೆ ಬರಬೇಕು’ ಎಂದು ಕೋರಿದರು.
‘ಶ್ರೀಗಳ ಮೇಲೆ ಸುಳ್ಳು ಆಪಾದನೆ ಮಾಡಿ, ಮಠದಿಂದ ಹೊರ ಹಾಕುವ ಕುತಂತ್ರ ನಡೆದಿದೆ. ಇದರ ಸತ್ಯಾಸತ್ಯತೆ ಹೊರಬರಬೇಕು. ಈ ಕೃತ್ಯದ ಹಿಂದೆ ಯಾರ ಕೈವಾಡ ಇದೆ ಎಂಬುದು ಗೊತ್ತಾಗಬೇಕು. ಮಠದ ಮೇಲೆ ದಾಳಿ ಮಾಡಿದ ಆರೋಪಿಗಳಿಗೆ ಶಿಕ್ಷೆಯಾಗಬೇಕು’ ಎಂದು ಮಹಿಳೆಯರು ಒತ್ತಾಯಿಸಿದರು.
‘ಶನಿವಾರ ಮಹಿಳೆ ಮತ್ತು ಅವರ 15 ವರ್ಷದ ಪುತ್ರಿ ಮಠಕ್ಕೆ ಬಂದಿದ್ದರು. ರಾತ್ರಿಯಾದ ಕಾರಣ ದೂರದ ಊರಿನ ಪ್ರಯಾಣ ಕಷ್ಟವೆಂದು ಭಾವಿಸಿ, ಮಠದಲ್ಲಿ ಅವರಿಗೆ ಆಶ್ರಯ ಕೊಟ್ಟಿದ್ದೆ. ನಾನು ಏನೂ ತಪ್ಪು ಮಾಡಿಲ್ಲ’ ಎಂದು ಸ್ವಾಮೀಜಿ ಹೇಳಿದರು.
ಈ ವಿಷಯವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮ್ಮುಖದಲ್ಲಿಯೇ ಬಗೆಹರಿಸಬೇಕು ಎಂದು ನಿರ್ಧರಿಸಿದ ಗ್ರಾಮದ ಜನ, ಗೋಕಾಕದ ಎನ್‌ಎಸ್ಎಫ್ ಸಂಸ್ಥೆಯ ಆವರಣದಲ್ಲಿ ಬೀಡು ಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.