ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಬೈನಕವಾಡಿ ಗ್ರಾಮ ಸೌಹಾರ್ದ, ಸಹಬಾಳ್ವೆಗೆ ಹೆಸರಾಗಿದೆ. ಈ ಊರಿನಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಕೂಡ ಇಲ್ಲ. ಆದರೂ, ಪ್ರತಿವರ್ಷ ಮೊಹರಂ ಆಚರಿಸುತ್ತಾರೆ. ಈ ಬಾರಿ ಕೂಡ ಗ್ರಾಮದ ಮುರಸಿದ್ಧೇಶ್ವರ ಹಾಗೂ ಮಹಾದೇವ ದೇವಸ್ಥಾನದಲ್ಲಿ ಪಂಜಾ ಪ್ರತಿಷ್ಠಾಪಿಸಿದ್ದಾರೆ.
ಸದಲಗಾ ಪುರಸಭೆ ವ್ಯಾಪ್ತಿಯ ಬೈನಕವಾಡಿಯಲ್ಲಿ ಲಿಂಗಾಯತರು, ಮರಾಠರು, ಜೈನರು, ಕ್ಷತ್ರಿಯರು, ಕುರುಬರು ಸೇರಿದಂತೆ ವಿವಿಧ ಸಮುದಾಯದ 200ಕ್ಕೂ ಹೆಚ್ಚು ಕುಟುಂಬಗಳಿವೆ. ಯುಗಾದಿ, ದೀಪಾವಳಿ, ಮಹಾನವಮಿಯಷ್ಟೇ ಶ್ರದ್ಧೆ–ಭಕ್ತಿಯಿಂದ ಮೊಹರಂ ಇಲ್ಲಿ ಆಚರಿಸಲಾಗುತ್ತದೆ. ಈ ಭಾವೈಕ್ಯ ನಾಲ್ಕು ತಲೆಮಾರುಗಳಿಂದ ಮುಂದುವರಿದುಕೊಂಡು ಬಂದಿದೆ.
ಪ್ರವಾದಿ ಮೊಹಮ್ಮದ್ ಪೈಗಂಬರ ಅವರ ಮೊಮ್ಮಕ್ಕಳಾದ ಇಮಾಮ್‌ಹಸನ್ ಹಾಗೂ ಇಮಾಮ್‌ಹುಸೇನ್ ಅವರ ಬೆಳ್ಳಿಯ ಪಂಜಾಗಳನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ದೇವಸ್ಥಾನದ ಅರ್ಚಕ ಮುರಾರಿ ಕುರಬೆಟ್ಟ ಮುರಸಿದ್ಧೇಶ್ವರ ದೇವರ ಪೂಜೆಯೊಂದಿಗೆ ಪಂಜಾಗಳಿಗೂ ಪೂಜೆ ಮಾಡುತ್ತಾರೆ. ಮಲ್ಲಣ್ಣವರ ತೋಟದ ವಸತಿ ಪ್ರದೇಶದ ಸುಭಾಷ ಕಮತೆ ಅವರ ಮನೆಯಲ್ಲಿ ಇನ್ನೊಂದು ಪಂಜಾ ಪ್ರತಿಷ್ಠಾಪಿಸಲಾಗುತ್ತದೆ. ಅದನ್ನು ಅಜಿತ ಗಾವಡೆ ಅವರು ಹೊತ್ತುಕೊಳ್ಳುತ್ತಾರೆ.
ಹಸನ್ ದೇವರನ್ನು ಮಹಾಂತೇಶ ದೇಸಾಯಿ, ಹುಸೇನ್ ದೇವರನ್ನು ಜಯರಾಂ ಜಾಧವ ಹೊತ್ತುಕೊಂಡು ಪ್ರತಿ ಮನೆಗೆ ತೆರಳಿ ನೈವೇದ್ಯ ಪಡೆಯುವುದು ಇಲ್ಲಿನ ರೂಢಿ. ಈ ಬಾರಿ ಜುಲೈ 16ರಂದು ಎರಡೂ ಪಂಜಾಗಳ ಭೆಟ್ಟಿ, 17ರಂದು ಹೊಳೆಗೆ ಕಳುಹಿಸುವ ಆಚರಣೆ ಸಿದ್ಧತೆ ನಡೆದಿದೆ.
ಐದು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ, ಅಲಾಯಿ ದೇವರುಗಳ ಕುಣಿತ, ವಾದ್ಯಮೇಳಗಳ ಸಡಗರ, ಗ್ರಾಮೀಣ ಕ್ರೀಡಾಕೂಟ, ಸಿಹಿ ಖಾದ್ಯಗಳ ಭೋಜನ ಎಲ್ಲ ಕಾರ್ಯಕ್ರಮಗಳಲ್ಲಿ ಎಲ್ಲರೂ ಒಮ್ಮತದಿಂದ ಪಾಲ್ಗೊಳ್ಳುವುದೇ ಈ ಊರಿನ ವಿಶೇಷ.
ದೇವಸ್ಥಾನದಲ್ಲಿ ಅಲಾಯಿ ದೇವರನ್ನು ಪ್ರತಿಷ್ಠಾಪಿಸುವುದನ್ನು ಮುತ್ತಜ್ಜನ ಕಾಲದಿಂದ ನೋಡಿದ್ದೇನೆ. ಹಿರಿಯರು ಹಾಕಿಕೊಟ್ಟ ಹಾದಿಯಲ್ಲೇ ಯುವಜನರೂ ನಡೆದಿದ್ದೇವೆ–ರಾಹುಲ ಕಾಟೆ ಬೈನಕವಾಡಿ ನಿವಾಸಿ
ನಮ್ಮೂರಲ್ಲಿ ದರ್ಗಾ ಮಸೀದಿ ಇಲ್ಲ. ಹಾಗೆಂದ ಮಾತ್ರಕ್ಕೆ ಪಂಜಾಗಳನ್ನು ಪ್ರತ್ಯೇಕ ಶಾಮಿಯಾನ ಮಾಡಿ ಪ್ರತಿಷ್ಠಾಪಿಸಿಲ್ಲ. ದೇವಸ್ಥಾನದಲ್ಲೇ ಇಡುವುದು ನಮಗೆ ಹೆಮ್ಮೆ–ಯುವರಾಜ ಖೋತ ಬೈನಕವಾಡಿ ನಿವಾಸಿ
ಹಿಂದೂ– ಮುಸ್ಲಿಂ ಸಂಘರ್ಷ ನಡೆದ ಕಾಲದಿಂದಲೂ ಬೈನಕವಾಡಿಯಲ್ಲಿ ಸೌಹಾರ್ದ ಬದುಕು ಇದೆ. ಭಕ್ತಿ ತೋರುವವರಿಗೆ ಧರ್ಮದ ಪರಿಧಿ ಇಲ್ಲ ಎಂದು ಹಿರಿಯರು ಹೇಳಿದ್ದನ್ನು ಪಾಲಿಸುತ್ತಿದ್ದೇವೆ–ಸುಭಾಷ ಕಮತೆ ಭಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.