ADVERTISEMENT

ಬಾಯಿ ಮುಚ್ಚಿಕೊಂಡಿರಬೇಕು: ಯತ್ನಾಳ್‌ಗೆ ನಿರಾಣಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 13:17 IST
Last Updated 3 ಏಪ್ರಿಲ್ 2021, 13:17 IST
ಮುರೇಗೇಶ್‌ ನಿರಾಣಿ
ಮುರೇಗೇಶ್‌ ನಿರಾಣಿ    

ಬೆಳಗಾವಿ: ‘ನಾಲಾಯಕ್ ಇದ್ದರೆ ಅದು ವಿಜಯಪುರದವ. ಪಕ್ಷದವರನ್ನು ಟೀಕಿಸಲೇಬೇಕು ಎಂದಿದ್ದರೆ ರಾಜೀನಾಮೆ ಕೊಟ್ಟು ಹೊರಗಡೆ ಹೋಗಿ ಏನಾದರೂ ಮಾತನಾಡಿಕೊಳ್ಳಲಿ’.

– ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಅವರು ವಿಜಯಪುರದ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೆಸರು ಪ್ರಸ್ತಾಪಿಸಿದೆ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು ಹೀಗೆ.

ಇಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯತ್ನಾಳ ಹೆಸರು ಪ್ರಸ್ತಾಪಿಸುತ್ತಿದ್ದಂತೆಯೇ ಕೆಂಡಾಮಂಡಲವಾದರು.

ADVERTISEMENT

‘ಆತ ಬಹಳ ಹಿರಿಯ. ಎಲ್ಲಾ ಮೂಲಗಳಿಂದ ಏನೇನೋ ಸಿಗುತ್ತಿದೆ. ನಮ್ಮ ಪಕ್ಷದಲ್ಲಿದ್ದುಕೊಂಡು ನಮ್ಮ ಪಕ್ಷದವರನ್ನೆ ಟೀಕಿಸುವುದು ಎಷ್ಟು ಸರಿ? ಪಕ್ಷದ ಚಿಹ್ನೆ ಮತ್ತು ನಮ್ಮ ನಾಯಕರ ಫೋಟೊಗಳನ್ನು ಹಾಕಿಕೊಂಡು ಆಯ್ಕೆಯಾಗಿ ಬಂದಿದ್ದಾರೆ. ಈಗ ಪಕ್ಷಕ್ಕೆ ಅನ್ಯಾಯ ಮಾಡುವುದು ಉಂಡ ಮನೆಗೆ ದ್ರೋಹ ಬಗೆದಂತಾಗುತ್ತದೆ. ಇನ್ಮುಂದೆ ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು’ ಎಂದು ಎಚ್ಚರಿಕೆ ನೀಡಿದರು.

‘ಏನೆಂದು ತಿಳಿದುಕೊಂಡಿದ್ದಾನೆ? ಸುಧಾರಿಸಿಕೊಳ್ಳಲಿ ಎಂದು ಹೈಕಮಾಂಡ್ ಸುಮ್ಮನಿದೆ. ಮುಂದೆಯೂ ಸುಧಾರಿಸದಿದ್ದಲ್ಲಿ ಕ್ರಮ ತೆಗೆದುಕೊಳ್ಳುತ್ತದೆ. ಇದೆಲ್ಲವನ್ನೂ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ’ ಎಂದು ಹೇಳಿದರು. ಭಾವೋದ್ವೇಗಕ್ಕೆ ಒಳಗಾದ ಅವರನ್ನು ಪಕ್ಕದಲ್ಲಿದ್ದ ಸಚಿವ ಉಮೇಶ ಕತ್ತಿ ಸಮಾಧಾನಪಡಿಸಿದರು.

ಉಪ ಚುನಾವಣೆ ಉಸ್ತುವಾರಿಯನ್ನು ಹುಬ್ಬಳ್ಳಿ ನಾಯಕರಿಗೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಕತ್ತಿ, ‘ಹುಬ್ಬಳ್ಳಿ–ಧಾರವಾಡದವರು ಪಾಕಿಸ್ತಾನ ಅಥವಾ ಅಮೆರಿಕದವರಲ್ಲ. ನಮ್ಮವರೆ. ಚುನಾವಣೆ ಬಳಿಕ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಅವಕಾಶ ಕೊಟ್ಟರೆ ಜಿಲ್ಲಾ ಉಸ್ತುವಾರಿ ಸಚಿವ ಆಗುತ್ತೇನೆ. ಬೆಳಗಾವಿಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲ್ಲು ಖರ್ಚಿನ ಅಗತ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.