ADVERTISEMENT

ಬೆಳಗಾವಿ | ಉಂಡಿ ತಿಂದು, ಜೋಕಾಲಿ ಜೀಕಿದ ಜನ

ನಾಗಶಿಲೆ, ನಾಗಪ್ಪನ ಮೂರ್ತಿಗೆ ಹಾಲು ಎರೆದು ಭಕ್ತಿ ಸಮರ್ಪಣೆ, ಹುತ್ತಗಳಿಗೂ ಹಾಲೆರೆದು ಪೂಜೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 2:00 IST
Last Updated 30 ಜುಲೈ 2025, 2:00 IST
ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಮಂಗಳವಾರ ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು
ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಮಂಗಳವಾರ ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು   

ಬೆಳಗಾವಿ: ಹೆಣ್ಣುಮಕ್ಕಳ ಸಡಗರದ ಹಬ್ಬ ನಾಗಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶ್ರದ್ಧೆ– ಭಕ್ತಿಯಿಂದ ನಾಗಪ್ಪನಿಗೆ ಹಾಲೆರೆದ ವನಿತೆಯರು ತವರಿನ ಆಸೆಗಳು ಈಡೇರಲಿ ಎಂದು ಪ್ರಾರ್ಥಿಸಿದರು. ಬೆಳಿಗ್ಗೆಯೇ ದೇವಸ್ಥಾನಗಳಲ್ಲಿ ಜನಜಂಗುಳಿ ಕಂಡುಬಂದರೆ, ಹಳ್ಳಿಗಳಲ್ಲಿ ಜನ ಹುತ್ತಗಳನ್ನು ಹುಡುಕಿಕೊಂಡು ಹೋಗಿ ಹಾಲೆದರು.

‘ನಾಗರಪಂಚಮಿ’ ಪ್ರಯುಕ್ತ ಕೆಲವರು ಸೋಮವಾರವೇ ನಾಗಶಿಲೆಗೆ ಹಾಲು ಎರೆದು ಪೂಜೆ ಸಲ್ಲಿಸಿದ್ದರು. ಇನ್ನೂ ಕೆಲವರು ಮಂಗಳವಾರ ಶ್ರದ್ಧೆಯಿಂದ ವಿವಿಧ ಧಾರ್ಮಿಕ ಆಚರಣೆ ಕೈಗೊಂಡರು.

ಬೆಳಗಾವಿಯಲ್ಲಿ ಬೆಳಿಗ್ಗೆಯಿಂದಲೇ ತುಂತುರು ಮಳೆ ಸುರಿಯುತ್ತಿದೆ. ಇದರ ಮಧ್ಯೆಯೂ ವಿವಿಧ ದೇವಸ್ಥಾನಗಳತ್ತ ಭಕ್ತಿಯಿಂದ ಮುಖಮಾಡಿದ ಭಕ್ತರು, ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಇಷ್ಟಾರ್ಥ ಈಡೇರಿದ ಹಿನ್ನೆಲೆಯಲ್ಲಿ ವಿವಿಧ ಹರಕೆ ತೀರಿಸಿದರು. ಅಲ್ಲದೆ, ತಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ದೇವರಿಗೆ ವಿವಿಧ ಕಾಣಿಕೆ ಅರ್ಪಿಸಿದರು.

ADVERTISEMENT

ಇಲ್ಲಿನ ಶಹಾಪುರದ ಕಪಿಲೇಶ್ವರ ದೇವಸ್ಥಾನ ಭಕ್ತರಿಂದ ಕಿಕ್ಕಿರಿದು ತುಂಬಿತ್ತು. ಬೆಳಗಾವಿ ನಗರ ಮಾತ್ರವಲ್ಲದೆ; ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ನಾಗಶಿಲೆ ಮತ್ತು ಶಿವಲಿಂಗಕ್ಕೆ ಹಾಲು ಎರೆದು ಭಕ್ತಿ ಸಮರ್ಪಿಸಿದರು.

‘ಶ್ರಾವಣ ಮಾಸ ಮತ್ತು ನಾಗರಪಂಚಮಿ ಪ್ರಯುಕ್ತ ದೇವಸ್ಥಾನದಲ್ಲಿ ರುದ್ರಾಭಿಷೇಕ ಮತ್ತಿತರ ಧಾರ್ಮಿಕ ವಿಧಿವಿಧಾನ ಕೈಗೊಂಡೆವು. ಬೆಳಿಗ್ಗೆಯಿಂದ ತಡರಾತ್ರಿಯವರೆಗೂ ಭಕ್ತರು ಆಗಮಿಸುತ್ತಿದ್ದಾರೆ. ಸುಲಭವಾಗಿ ದರ್ಶನ ಅವರಿಗೆ ವ್ಯವಸ್ಥೆ ಮಾಡಿದ್ದೇವೆ’ ಎಂದು ಕಪಿಲೇಶ್ವರ ದೇವಸ್ಥಾನದ ಟ್ರಸ್ಟಿ ರಾಕೇಶ ಕಲಘಟಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಗರ ಪಂಚಮಿ ಅಂಗವಾಗಿ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಭಕ್ತರ ಸಂಖ್ಯೆ ಹೆಚ್ಚಿತ್ತು
ಚಿಕ್ಕೋಡಿ ಪಟ್ಟಣದ ಹೊರವಲಯದ ತೋಟವೊಂದರಲ್ಲಿ ನಾಗರ ಪಂಚಮಿ ಅಂಗವಾಗಿ ಮಹಿಳೆಯರು ಮರಕ್ಕೆ ಜೋಕಾಲಿ ಕಟ್ಟಿ ಜೀಕಿ ಖುಷಿಪಟ್ಟರು ಪ್ರಜಾವಾಣಿ ಚಿತ್ರ: ಚಂದ್ರಶೇಖರ ಎಸ್.ಚಿನಕೇಕರ

ಗಮನ ಸೆಳೆದ ಧಾರ್ಮಿಕ ಆಚರಣೆಗಳು ನಾಗಶಿಲೆಗೆ ಹಾಲೆರೆದು ಭಕ್ತಿ ಸಮರ್ಪಣೆ

ಉಂಡಿ ತಿಂಡಿ ತಂಬಿಟ್ಟು... ಪಂಚಮಿ ಬಂದರೆ ಸಾಕು ಭರಪೂರ ಉಂಡಿಗಳ ರುಚಿ ನಾಲಿಗೆ ಮೇಲೇರುತ್ತದೆ. ಎಲ್ಲರ ಮನೆಗಳಲ್ಲೂ ಈಗ ಬಗೆಬಗೆಯ ಉಂಡಿಗಳು ತಿಂಡಿಗಳು ತಂಬಿಟ್ಟಿನಂಥ ಸಿಹಿಖಾದ್ಯಗಳದ್ದೇ ಸಡಗರ. ಉಂಡಿಗಳನ್ನು ತಿನ್ನು ಚಿಣ್ಣರು ಜೋಕಾಲಿ ಆಡಿ ನಲಿಯುವುದೇ ಈ ಹಬ್ಬದ ಇನ್ನೊಂದು ವಿಶೇಷ. ಗ್ರಾಮೀಣ ಪ್ರದೇಶಗಳಲ್ಲಿ ಮರಗಳಿಗೆ ಜೋಕಾಲಿ ಕಟ್ಟಿ ವನಿತೆಯರು ಸಂಭ್ರಮ ಪಡುವುದು ಕಂಡುಬಂತು. ರವೆ ಉಂಡಿ ಸಕ್ಕರೆ ಉಂಡಿ. ಪುಟಾಣಿ ಉಂಡಿ ತಂಬಿಟ್ಟಿನ ಉಂಡಿ ಅಳ್ಳಿಟ್ಟಿನ ಉಂಡಿ ಚುಣುಮುರಿ ಉಂಡಿ ಬೇಸನ್‌ ಉಂಡಿ ಶೇಂಗಾ ಉಂಡಿ ಬೂಂದಿ ಉಂಡಿ ಕಾರದಾಣೆ ಉಂಡಿ ಕೊಬ್ಬರಿ ಉಂಡಿ ಗೋಂಧಿ ಉಂಡಿ... ಅಬ್ಬಬ್ಬಾ ಒಂದೇ ಎರಡೇ ತಹರೇವಾರು ಉಂಡಿಗಳನ್ನು ಜನ ತಿಂದು ನಲಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.