ADVERTISEMENT

ಚನ್ನಮ್ಮನ ಕಿತ್ತೂರು | ಕಲುಷಿತಗೊಂಡ ಒಡಲು: ಕೇಳುವವರಿಲ್ಲ ಕೆರೆಗಳ ಗೋಳು

ಪ್ರದೀಪ ಮೇಲಿನಮನಿ
Published 20 ನವೆಂಬರ್ 2023, 6:12 IST
Last Updated 20 ನವೆಂಬರ್ 2023, 6:12 IST
ಚನ್ನಮ್ಮನ ಕಿತ್ತೂರಿನ ಅರಿಷಿಣ ಕೆರೆಯ ತಟ ಆಕ್ರಮಿಸಿಕೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯ
ಚನ್ನಮ್ಮನ ಕಿತ್ತೂರಿನ ಅರಿಷಿಣ ಕೆರೆಯ ತಟ ಆಕ್ರಮಿಸಿಕೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯ   

ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣ ‘ಕೆರೆಗಳ ಊರು’ ಎಂದೇ ಪ್ರಸಿದ್ಧ. ಸುತ್ತಲೂ ಅಷ್ಟೊಂದು ಕೆರೆಗಳು ಈ ಊರನ್ನು ಆವರಿಸಿವೆ. ಆದರೆ, ಹಿಂದಿನ ಕಾಲದಲ್ಲಿ ಜನ–ಜಾನುವಾರುಗಳ ಅವಶ್ಯಕತೆ ಮತ್ತು ದಾಹ ನೀಗಿಸುತ್ತಿದ್ದ ಪ್ರಮುಖ ಜಲಮೂಲಗಳ ‘ಮೂಕರೋದನ’ ಇಂದು ಯಾರಿಗೂ ಕೇಳದಾಗಿದೆ.

ಬಳಸಲು, ಬಟ್ಟೆ ತೊಳೆಯಲು, ಜನ–ಜಾನುವಾರಗಳ ದಾಹ ನೀಗಿಸಲು ಬಳಸುತ್ತಿದ್ದ ಕೆರೆಗಳ ಒಡಲಿಗೆ ಈಗ ‘ಮಲ’ಪ್ರವಾಹ ಹರಿಯುತ್ತಿದೆ. ಚರಂಡಿ, ಶೌಚದ ನೀರಿನಿಂದಾಗಿ ಯಾವೊಂದು ಕೆರೆಯ ಒಡಲೂ ಶುಚಿಯಾಗಿ ಉಳಿದಿಲ್ಲ. ಕೆರೆ ತಟದಲ್ಲಿ ಪ್ಲಾಸ್ಟಿಕ್ ರಾಶಿಯೇ ಕಾಣಸಿಗುತ್ತದೆ. ಯಾವುದೇ ಕೆರೆ ಸಮೀಪ ಹೋದರೆ ಸಾಕು. ಗಬ್ಬೆದ್ದು ನಾರುತ್ತವೆ. ಬೊಗಸೆ ನೀರು ತೆಗೆದುಕೊಂಡು ಮುಖ ತೊಳೆದುಕೊಂಡೇನು ಎಂಬ ಧೈರ್ಯ ಯಾರಿಗೂ ಇಲ್ಲದಂತಾಗಿದೆ.

‘ಮುಂದಾಲೋಚನೆ, ಕಾಳಜಿ ಇಲ್ಲದೆ ನಾಗರಿಕರಿಗೆ ಸೌಲಭ್ಯಗಳನ್ನು ಕಲ್ಪಿಸಿರುವುದರಿಂದಾಗಿ ಕೆರೆಯಂಗಳ ಕಸದ ತೊಟ್ಟಿಯಾಗಿ, ಮಲಿನ ನೀರಿನ ತಾಣವಾಗಿ ಮಾರ್ಪಟ್ಟಿದೆ’ ಎಂಬ ದೂರುಗಳು ಪ್ರಜ್ಞಾವಂತರಿಂದ ಕೇಳಿಬಂದಿವೆ.

ADVERTISEMENT

‘ಪ್ಲಾಸ್ಟಿಕ್ ತಂದು ಕೆರೆದಂಡೆಗೆ ಹಾಕಲಾಗುತ್ತದೆ. ಕೋಳಿ ಪುಚ್ಚ, ಬೇಡದ ಮಾಂಸದ ತುಂಡುಗಳು, ಕತ್ತರಿಸಿದ ಕೂದಲಿನ ರಾಶಿಯು ಕೆರೆಗೆ ನೀರು ಹರಿದುಬರುವ ಕಾಲುವೆಯನ್ನು ತುಂಬಿಕೊಂಡಿದೆ. ಕೆರೆ ತುಂಬಿದರೆ ನೀರು ಹೊರಹೋಗಲು ನಿರ್ಮಾಣ ಮಾಡಿರುವ ಕೋಡಿ ಪ್ರದೇಶವೂ ಇದರಿಂದ ಹೊರತಾಗಿಲ್ಲ’ ಎಂದು ಜನ ಕಳವಳ ವ್ಯಕ್ತಪಡಿಸುತ್ತಾರೆ.

‘ಕೊಳವೆಬಾವಿಗಳ ಅಂತರ್ಜಲಮಟ್ಟ ಕಾಯ್ದುಕೊಳ್ಳಬಹುದಾಗಿದ್ದ ಈ ಕೆರೆಗಳ ದುಃಸ್ಥಿತಿ ಹೀಗೆ ಮುಂದುವರೆದರೆ, ರೋಗ ಹರಡುವ ತಾಣವಾಗಿ ಮಾರ್ಪಡಬಹುದು. ನಮ್ಮನ್ನಾಳುವ ಜನರು ಇವುಗಳ ಅಂತ್ಯಸಂಸ್ಕಾರ ಮಾಡಬಹುದು. ಇದರಿಂದ ಅಂತರ್ಜಲಕ್ಕೂ ದೊಡ್ಡ ಅಪಾಯ ಎದುರಾಗಬಹುದು. ಬೇಸಿಗೆಯಲ್ಲಿ ನೀರಿಗೆ ತತ್ವಾರ ಬಂದೀತು’ ಎಂಬ ಚಿಂತೆ ಅನೇಕರಲ್ಲಿ ಮೂಡಲು ಆರಂಭಿಸಿದೆ.

‘ಜಲಮೂಲಗಳನ್ನು ಮಾಲಿನ್ಯದಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬ ದೊಡ್ಡ ಸವಾಲು ಇಂದು ನಾಗರಿಕ ಸಮಾಜ ಎದುರಿಸುತ್ತಿದೆ’  ಎನ್ನುತ್ತಾರೆ ಹಲವರು.

ತಂದೊಡ್ಡಿದ ಅಪಾಯ: ಊರಿಗೆ ನಲ್ಲಿಯ ಸೌಲಭ್ಯ ಬಂದ ನಂತರ ಕೆರೆ, ಬಾವಿ ನೋಡುವುದೆ ಕಡಿಮೆಯಾಯಿತು. ಮಳೆ ಕೊರತೆಯಿಂದಾಗಿ ಬಾವಿಯೊಡಲು ಬತ್ತಿದವು. ನೀರಿದ್ದ ಕೆರೆಗಳ ಕಡೆಗೆ ಗಮನ ಹರಿಸುವುದು ತಪ್ಪಿತು. ಒಳಚರಂಡಿ ಯೋಜನೆ ಇಲ್ಲದೆ ಬಂದಿರುವ ಮನೆಗೊಂದು ಶೌಚಾಲಯದ ಪರಿಕಲ್ಪನೆ ಊರ ಕೆರೆಗಳು ಹಾಳಾಗಲು ಪ್ರಮುಖ ಕಾರಣವಾಯಿತು. ಶೌಚಗೃಹದ ತ್ಯಾಜ್ಯವನ್ನು ರಸ್ತೆಬದಿ ನಿರ್ಮಿಸಿರುವ ಚರಂಡಿಗೆ ನೇರವಾಗಿ ಹರಿಸಲಾಯಿತು. ‌

ಊರ ಸುತ್ತಲಿರುವ ಕೆರೆಗಳಿಗೆ ಚರಂಡಿ ನೀರು ನೇರವಾಗಿ ನುಗ್ಗಲು ಪ್ರಾರಂಭಿಸಿತು. ಹೀಗಾಗಿ ಬಹುತೇಕ ಕೆರೆಯೊಡಲು ಮಲಿನಗೊಂಡಿವೆ. ದುರ್ನಾತ ಬೀರುತ್ತ ನಿಂತುಕೊಂಡಿವೆ ಎಂದು ಆತಂಕದಿಂದ ನುಡಿಯುತ್ತಾರೆ ಇಲ್ಲಿನ ಹಿರಿಯರು.

ಕಿತ್ತೂರು ಕೋಟೆಯ ಆವರಣದ ಹಿಂದಿರುವ ಐತಿಹಾಸಿಕ ಆನೆಹೊಂಡ ಪಾಚಿಗಟ್ಟಿರುವುದು
ಸಕ್ಕರೆಗೆರೆಗೆ ಹರಿದು ಬರುತ್ತಿರುವ ಚರಂಡಿ ನೀರು
ಕಿತ್ತೂರಲ್ಲಿರುವ ಎಲ್ಲ ಕೆರೆಗಳಿಗೆ ಐತಿಹಾಸಿಕ ಹಿನ್ನೆಲೆಯಿದೆ. ಅವುಗಳನ್ನು ಅಭಿವೃದ್ಧಿಪಡಿಸುವ ಕೆಲಸವಾಗಬೇಕಿದೆ. ಮೊದಲು ಅವುಗಳನ್ನು ಸ್ವಚ್ಛ ಮಾಡಿ ಕೆರೆ ಕಟ್ಟೆಯ ಮೇಲೆ ಜನ ಓಡಾಡುವಂತೆ ಮಾಡಬೇಕು. ಚರಂಡಿ ನೀರು ಹರಿಯುವುದನ್ನು ತಪ್ಪಿಸಬೇಕು
–ಎಂ.ಎಫ್.ಜಕಾತಿ ಸದಸ್ಯ ಪಟ್ಟಣ ಪಂಚಾಯ್ತಿ
ಭೂಮಿಯ ಮೇಲೆ ಬಿದ್ದ ನೀರು ಮೊದಲು ಕೆರೆಯೊಡಲು ತುಂಬಬೇಕು. ಮೊದಲಿನ ವ್ಯವಸ್ಥೆಯೇ ಹೀಗಿತ್ತು. ಪ್ರತ್ಯೇಕ ಕಾಲುವೆ ಮಾಡಿ ಸ್ವಚ್ಛ ನೀರು ಕೆರೆಗೆ ಹರಿಸಬೇಕು. ಒಳಚರಂಡಿ ಯೋಜನೆಯಿಂದ ಕೊಳಚೆ ನೀರು ತಡೆಹಿಡಿಯಲು ಸಾಧ್ಯವಿದೆ. ಕೊಳಚೆ ನೀರು ಒಂದೆಡೆ ಸಂಗ್ರಹಿಸಿ ಸೋಸಿ ಕೆರೆಗೆ ಬಿಡುವ ಯೋಜನೆ ಕೈಗೊಳ್ಳಬೇಕು. ದಂಡೆಗುಂಟ ಗಿಡಗಳನ್ನು ಬೆಳೆಸಬೇಕು. ಕೆರೆಯಲ್ಲಿ ಮೀನುಗಾರಿಕೆ ಮಾಡಬೇಕು
–ಚಂದ್ರಗೌಡ ಪಾಟೀಲ ಸಾಮಾಜಿಕ ಕಾರ್ಯಕರ್ತ
ಕಳೆದ ಎರಡು ದಶಕಕ್ಕಿಂತ ಹೆಚ್ಚು ಅವಧಿಯಿಂದ ಕೆರೆಯೊಡಲು ಕಸ–ಕಡ್ಡಿಗಳಿಂದ ತುಂಬಿಕೊಂಡಿದೆ. ಮೊದಲು ಇದನ್ನು ಸ್ವಚ್ಛಗೊಳಿಸಬೇಕು. ನಂತರ ಕೆರೆ ಆಳ ಹೆಚ್ಚಿಸಬೇಕು. ಕೆರೆ ಕಟ್ಟೆಯ ಸೌಂದರ್ಯಕ್ಕೂ ಗಮನ ನೀಡಬೇಕು
–ಪ್ರವೀಣ ಸರದಾರ ರೈತ ಮುಖಂಡ
ಕೆರೆಗಳ ಮಾಲೀಕತ್ವ ಮತ್ತು ನಿರ್ವಹಣೆ ಯಾರಿಗಿದೆ ಎಂಬುದನ್ನು ನೋಡಲಾಗುವುದು. ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ಯೋಜನೆ ರೂಪಿಸಲಾಗುವುದು. ಶಾಸಕರ ಸಹಕಾರ ಮತ್ತು ಸಹಾಯ ಪಡೆದು ಕೆರೆಗಳನ್ನು ಸಂರಕ್ಷಿಸಿ ಪುನರುಜ್ಜೀವನಗೊಳಿಸಲಾಗುವುದು
–ಮಲ್ಲಯ್ಯ ಹಿರೇಮಠ ಮುಖ್ಯಾಧಿಕಾರಿ ಪಟ್ಟಣ ಪಂಚಾಯ್ತಿ
ಮಲಿನಗೊಂಡ ಕೆರೆಗಳು
ಒಂದು ಕೆರೆ ಹೊರತುಪಡಿಸಿದರೆ ಕಿತ್ತೂರು ಪಟ್ಟಣವನ್ನು ಏಳು ಕೆರೆ ಸುತ್ತುವರಿದಿವೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ತುಂಬುಗೆರೆ ಚಂದ್ಯಾರ ಕೆರೆ ಲೋಕೋಪಯೋಗಿ ಇಲಾಖೆ ಕಚೇರಿಗೆ ತೆರಳುವ ರಸ್ತೆಯಲ್ಲಿರುವ ಅರಿಷಿಣ ಕೆರೆ ಕೋಟೆ ಆವರಣದ ಬದಿಗಿರುವ ಸಕ್ಕರೆಗೆರೆ ಆನೆಹೊಂಡ ಅಗಳ ಬಸಾಪುರ ರಸ್ತೆಯಲ್ಲಿರುವ ಬಸವಣ್ಣನ ಹೊಂಡ ಕೊಂಡವಾಡ ಚೌಕ್ ಬಳಿ ಇರುವ ರಣಗಟ್ಟಿ ಕೆರೆ ಊರ ಹೊರವಲಯದಲ್ಲಿರುವ ಪರಸನಟ್ಟಿ ಕೆರೆ ಇವುಗಳಲ್ಲಿ ಪ್ರಮುಖವಾಗಿವೆ. ಪರಸನಟ್ಟಿ ಕೆರೆ ಮತ್ತು ಬಸವಣ್ಣನ ಹೊಂಡ ಹೊರತುಪಡಿಸಿದರೆ ಉಳಿದೆಲ್ಲ ಕೆರೆಗಳು ಮಲಿನಗೊಂಡಿವೆ. ಕೆಲವು ಕೆರೆಗಳಲ್ಲಿ ಕಾಲಿಡಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ‘ಮೊದಲೆಲ್ಲ ಸಕ್ಕರೆಗೆರೆ ನೀರನ್ನು ಬೇಳೆ ಕುದಿಸಲು ಕುಡಿಯಲು ಬಳಸುತ್ತಿದ್ದರು. ರಣಗಟ್ಟಿಕೆರೆ ಹಾಗೂ ಅರಿಷಿಣ ಕೆರೆ ನೀರು ಬಟ್ಟೆ ತೊಳೆಯಲು ಚುರುಮರಿ ಹುರಿಯಲು ಬಳಸುವ ಭತ್ತ ನೆನೆಯಲು ಬಳಕೆಯಾಗುತ್ತಿತ್ತು. ತುಂಬುಗೆರೆ ನೀರನ್ನು ಸಹ ಜಾನುವಾರುಗಳಿಗೆ ಕುಡಿಯಲು ಬಳಸುತ್ತಿದ್ದರು. ಕೋಟೆ ಪೂರ್ವಕ್ಕಿರುವ ಸಕ್ಕರೆಗೆರೆಯಲ್ಲಿ ಯಾರೊಬ್ಬರು ಕಾಲು ತೊಳೆದುಕೊಳ್ಳಲು ಬಿಡುತ್ತಿರಲಿಲ್ಲ. ಬಹಳ ದಿನಗಳವರೆಗೆ ಪಂಚಾಯ್ತಿಯಿಂದ ಒಬ್ಬ ಕಾವಲುಗಾರನನ್ನು ನೇಮಿಸಲಾಗಿತ್ತು’ ಎಂದು ಜನ ನೆನಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.