ADVERTISEMENT

CM ವರ್ತನೆಯಿಂದ ಬೇಸರಗೊಂಡಿದ್ದ ASP ನಾರಾಯಣ ಭರಮನಿ ದಿಢೀರ್ ಬೆಳಗಾವಿಗೆ ವರ್ಗ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 10:59 IST
Last Updated 17 ಜುಲೈ 2025, 10:59 IST
   

ಬೆಳಗಾವಿ: ಧಾರವಾಡ ಜಿಲ್ಲಾ ಹೆಚ್ಚುವರಿ ‍ಪೊಲೀಸ್‌ ವರಿಷ್ಠಾಧಿಕಾರಿ ಆಗಿದ್ದ ನಾರಾಯಣ ಭರಮನಿ ಅವರನ್ನು ಬೆಳಗಾವಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆಗಿ ವರ್ಗಾವಣೆ ಮಾಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ‘ಕೈ ಎತ್ತಿದ್ದರು’ ಎಂಬ ಕಾರಣಕ್ಕೆ ಬೇಸರಗೊಂಡಿದ್ದ ಭರಮನಿ ರಾಜೀನಾಮೆಗೆ ಮುಂದಾಗಿದ್ದರು. ಸ್ವತಃ ಸಿದ್ದರಾಮಯ್ಯ, ಗೃಹಸಚಿವ ಡಾ.ಜಿ.ಪರಮೇಶ್ವರ ಸಮಾಧಾನ ಮಾಡಲು ಯತ್ನಿಸಿದ್ದರು.

ಈ ಬೆಳವಣಿಗೆಗಳ ಮಧ್ಯೆಯೇ ಭರಮನಿ ಅವರನ್ನು ‘ಸಮಾಧಾನಪಡಿಸಲು’ ಬೆಳಗಾವಿಗೆ ವರ್ಗ ಮಾಡಲಾಗಿದೆ ಎಂಬ ಅಂಶ ಚರ್ಚೆಗೆ ಕಾರಣವಾಗಿದೆ.

ADVERTISEMENT

ನಡೆದಿದ್ದೇನು?: 

ಬೆಳಗಾವಿಯ ಎಸಿಪಿ ಆಗಿದ್ದ ನಾರಾಯಣ ಭರಮನಿ ಅವರನ್ನು 2024ರಲ್ಲಿ ಧಾರವಾಡ ಎಎಸ್‌ಪಿ ಆಗಿ ವರ್ಗ ಮಾಡಲಾಗಿತ್ತು. ಏಪ್ರಿಲ್‌ 28ರಂದು ಕೆಪಿಸಿಸಿ ವತಿಯಿಂದ ಬೆಳಗಾವಿಯಲ್ಲಿ ಆಯೋಜಿಸಿದ್ದ ‘ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಆಂದೋಲನ’ ದಿನ ಬೆಳಗಾವಿ ನಗರ ಪೊಲೀಸ್‌ ಆಯಕ್ತರು ರಜೆ ಇದ್ದ ಕಾರಣ ಭರಮನಿ ಅವರಿಗೆ ಭದ್ರತೆಯ ಉಸ್ತುವಾರಿ ವಹಿಸಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದಿಯಾಗಿ ಬಹುಪಾಲು ಸರ್ಕಾರವೇ ಈ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡಿತ್ತು. ಸಮಾವೇಶದಲ್ಲಿ ವೇದಿಕೆ ಮುಂದೆ ನುಗ್ಗಿದ ಆರು ಬಿಜೆಪಿ ಕಾರ್ಯಕರ್ತೆಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಿದರು. ಕಪ್ಪು ಬಾವುಟ ಪ್ರದರ್ಶಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದರು.

ಸಮಾವೇಶದಲ್ಲಿ ಅವ್ಯವಸ್ಥೆ ಮತ್ತು ಗೊಂದಲ ಆಗಿರುವುದು ಕಂಡು ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು, ಭದ್ರತೆ ನಿಗಾ ವಹಿಸಿದ್ದ ಪೊಲೀಸರತ್ತ ಕೈ ಮಾಡಿ ವೇದಿಕೆಗೆ ಕರೆದರು. ಭರಮನಿ ಅವರು ವೇದಿಕೆ ಏರಿ ಬರುತ್ತಿದ್ದಂತೆಯೇ, ಅವರ ಮುಖದತ್ತ ಕೈ ಬೀಸಲು ಸಿದ್ದರಾಮಯ್ಯ ಮುಂದಾಗಿದ್ದರು. ‘ಯಾರಯ್ಯ ಬೆಳಗಾವಿ ಎಸ್ಪಿ. ಏನು ನಡೆಯುತ್ತಿದೆ ಇಲ್ಲಿ? ಏನ್‌ ಮಾಡುತಿದ್ದೀರಿ ನೀವೆಲ್ಲ’ ಎಂದು ಸಿದ್ದರಾಮಯ್ಯ ರೇಗಿದ್ದರು.

‘ಟಫ್‌ ಆಫೀಸರ್‌’ ಎಂದು ಹೆಸರಾದ ಭರಮನಿ ಅವರಿಗೆ ಈ ಘಟನೆ ಮುಜುಗರ ತಂದಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.