ADVERTISEMENT

ನಾರಾಯಣಗುರು ಆದರ್ಶ ಅಳವಡಿಸಿಕೊಳ್ಳಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 13:06 IST
Last Updated 20 ಅಕ್ಟೋಬರ್ 2019, 13:06 IST
ಬೆಳಗಾವಿಯಲ್ಲಿ ಬಿಲ್ಲವರ ಸಂಘದಿಂದ ನಾರಾಯಣಗುರು ಜಯಂತಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಉದ್ಘಾಟಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹಾಗೂ ಸಮಾಜದ ಮುಖಂಡರು ಇದ್ದಾರೆ
ಬೆಳಗಾವಿಯಲ್ಲಿ ಬಿಲ್ಲವರ ಸಂಘದಿಂದ ನಾರಾಯಣಗುರು ಜಯಂತಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಉದ್ಘಾಟಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹಾಗೂ ಸಮಾಜದ ಮುಖಂಡರು ಇದ್ದಾರೆ   

ಬೆಳಗಾವಿ: ‘ಬಿಲ್ಲವ ಸಮಾಜದವರು ನಾರಾಯಣ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಬಲರಾಗಬೇಕು’ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಇಲ್ಲಿನ ದಿಗಂಬರ ಜೈನ್ ಬೋರ್ಡಿಂಗ್ ಸಭಾಭವನದಲ್ಲಿ ನಾರಾಯಣಗುರು ಅವರ 165ನೇ ಜಯಂತಿ ಅಂಗವಾಗಿಭಾನುವಾರ ಬಿಲ್ಲವರ ಸಂಘದಿಂದ ಆಯೋಜಿಸಿದ್ದ ಧಾರ್ಮಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಿಲ್ಲವ ಸಮಾಜವು ವ್ಯಾಪಾರ ಸೇರಿದಂತೆ ಎಲ್ಲ ರಂಗದಲ್ಲಿಯೂ ಮುಂದೆ ಇದ್ದಾರೆ. ಅವರು ಇಷ್ಟೊಂದು ಅಭಿವೃದ್ಧಿ ಹೊಂದಲು ನಾರಾಯಣ ಗುರುಗಳು ಪ್ರಮುಖರಾಗಿದ್ದಾರೆ. ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡುವ ಜೊತೆಗೆ, ದನಿ ಇಲ್ಲದವರಿಗೆ ದನಿಯಾಗಿದ್ದರು. ಸಮಾಜದಲ್ಲಿರುವ ಮೇಲು, ಕೀಳು, ಧರ್ಮ ಎಂಬ ತಾರತಮ್ಯವನ್ನು ಹೋಗಲಾಡಿಸಲು ಹೋರಾಡಿದವರು. ಅಂತಹ ದಾರ್ಶನಿಕರ ಸಂದೇಶಗಳು ಇಡೀ ಸಮಾಜಕ್ಕೆ ಶಕ್ತಿಯಾಗಿವೆ’ ಎಂದರು.

ADVERTISEMENT

ಸಮಾನತೆ ಸಂದೇಶ ಸಾರಿದವರು:ಸಾನ್ನಿಧ್ಯ ವಹಿಸಿದ್ದ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ‘ಜಾತಿ, ಧರ್ಮ, ಅಧ್ಯಾತ್ಮ, ಸಮಾನತೆಯ ದೃಷ್ಟಿಯಿಂದ ನೋಡಿದರೆ ನಾರಾಯಣ ಗುರುಗಳು ವಿಶ್ವಕ್ಕೆ ಗುರುವಾಗಿದ್ದಾರೆ. ಅವರ ಬಗ್ಗೆ ಹೆಚ್ಚಿನ ಚಿಂತನೆ ಆಗಬೇಕಿದೆ. ಉತ್ತರ ಭಾರತದಲ್ಲಿ ಬುದ್ಧ, ಮಧ್ಯ ಭಾರತದಲ್ಲಿ ಬಸವಣ್ಣ, ಅಂತ್ಯ ಭಾರತದಲ್ಲಿ ನಾರಾಯಣಗುರು ಸಮಾನತೆಯ ಸಂದೇಶ ಸಾರಿದವರು’ ಎಂದು ಸ್ಮರಿಸಿದರು.

‘ಅಂತ್ಯ ಭಾರತದಲ್ಲಿ ನಾರಾಯಣ ಗುರುಗಳು ಹೆಣ್ಣಿಗೆ ಗೌರವ ಕೊಟ್ಟು, ಕೆಳ ವರ್ಗದವರನ್ನು ಸಹ ಗೌರವಿಸಿದ್ದಾರೆ. ನಾರಾಯಣ ಗುರುಗಳು ಮನುಷ್ಯತ್ವ ಮೂಲ ನಿಧಿಯಾಗಿದ್ದವರು. ಅಂತಹ ಮಹಾನ ನಾಯಕನ ಸಮುದಾಯದಲ್ಲಿ ಜನಿಸಿದ ಬಿಲ್ಲವರ ಸಮಾಜದವರು ಜ್ಞಾನ, ವ್ಯಾಪಾರದಲ್ಲಿ ಶ್ರೇಷ್ಠರು. ಆದರೆ, ಇತಿಹಾಸ ಪ್ರಜ್ಞೆಯಲ್ಲಿ ಸೋತಿದ್ದೀರಿ. ಇತಿಹಾಸ ಪ್ರಜೆ ಹೊಂದಿದರೆ ಇನ್ನೂ ಉತ್ತಮ ಸಮಾಜವಾಗಿಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದರು.

ಮನುಷ್ಯನನ್ನು ಪೂಜಿಸಿ:‘ಕಾಣದ ದೇವರ ಪೂಜೆಗಿಂತ ಜೀವಂತವಿರುವ ಮನುಷ್ಯನನ್ನು ಪ್ರೀತಿಸಬೇಕು. ಅದೇ ನಿಜವಾದ ಧರ್ಮ. ಕರ್ಮದಿಂದ ಧರ್ಮದೆಡೆಗೆ ಸಾಗಿದರೆ ಫಲ ಸಿಗುವುದಿಲ್ಲ. ನಮ್ಮ ಕಾಯಕದಿಂದ ಸಕಲವನ್ನೂ ಪಡೆದುಕೊಳ್ಳಬೇಕು. ತಂತ್ರಜ್ಞಾನದಿಂದ ಅತಂತ್ರರಾಗಬಾರದು’ ಎಂದು ಸಲಹೆ ನೀಡಿದರು.

‘ಸಮಾಜದ ಅಭಿವೃದ್ಧಿಗೆ ಹಾಗೂ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಪ್ರಯತ್ನಿಸಿದ್ದಾರೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶ್ರಮಿಸುತ್ತಿದ್ದಾರೆ. ಸಮಾಜ ಒಗ್ಗೂಡಿಸುವ ಕಾರ್ಯವನ್ನು ಬಿಲ್ಲವರ ಸಂಘವೂ ಮಾಡುತ್ತಿದೆ. ಸಮಾಜದ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದು ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

ಬಿಲ್ಲವರ ಸಂಘದ ಅಧ್ಯಕ್ಷಸುನೀಲ ಪೂಜಾರಿ, ಮುಖಂಡರಾದ ಸುಜನಕುಮಾರ, ಚಂದ್ರಾವತಿ ಪೂಜಾರಿ, ಮುಖಂಡರಾದ ಸುಧೀರ ಕುಮಾರ ಸಾಲಿಯಾನ, ಸಂತೋಷ ಪೂಜಾರಿ, ಗಣೇಶ ಪೂಜಾರಿ, ಸುಂದರ ಕೋಟ್ಯಾನ್, ನಾರಾಯಣ, ಗಣೇಶ್ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.