ADVERTISEMENT

ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು: ಈಡಿಗ ಸಮಾಜದ ಮುಖಂಡರು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 2:23 IST
Last Updated 18 ಡಿಸೆಂಬರ್ 2025, 2:23 IST
ನಾರಾಯಣ ಗುರುಜಿ
ನಾರಾಯಣ ಗುರುಜಿ   

ಬೆಳಗಾವಿ: ‘ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ‘ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ’ ಸ್ಥಾಪನೆ ಮಾಡಬೇಕು. ಇದೇ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು’ ಎಂದು ಈಡಿಗ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಡಿಗ ಸಮಾಜ ದೊಡ್ಡ ಸಂಖ್ಯೆಯಲ್ಲಿದೆ. ಕಲಬುರ್ಗಿ ಜಿಲ್ಲೆಯೊಂದರಲ್ಲೇ 2 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಸಮಾಜಕ್ಕೆ ದೇವರ ಸಮಾನರಾದ ನಾರಾಯಣ ಗುರುಗಳ ಬಗ್ಗೆ ಹೆಚ್ಚು ತಿಳಿಯುವ ಹಂಬಲ, ಅಧ್ಯಯನ ಮಾಡುವ ಆಸಕ್ತಿ ಬಹಳಷ್ಟು ಜನರಲ್ಲಿದೆ. ಇದಕ್ಕೆ ಒಂದು ವ್ಯವಸ್ಥೆ ಇಲ್ಲ. ಆದ್ದರಿಂದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅವರ ಅಧ್ಯಯನ ಪೀಠ ಸ್ಥಾಪಿಸಿ ಮಹಾತ್ಮರಿಗೆ ಗೌರವ ಕೊಡಬೇಕಿದೆ. ಸಮಾಜದ ಭಾವನೆಗೂ ಸ್ಪಂದಿಸಬೇಕಿದೆ’ ಎಂದೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನಾರಾಯಣ ಗುರುಗಳ ತತ್ವ, ಸಂದೇಶ ಮತ್ತು ಸಾಮಾಜಿಕ ಚಿಂತನೆಗಳ ಬಗ್ಗೆ ಸಂಶೋಧನೆ, ಅಧ್ಯಯನ ಮತ್ತು ಪ್ರಚಾರಕ್ಕಾಗಿ ಅಧ್ಯಯನ ಪೀಠ ಅನಿವಾರ್ಯ. ಅವರು ಜಾತಿರಹಿತ ಸಮಾಜ, ಮೌಢ್ಯ ವಿರೋಧಿ ನಡೆ, ಏಕತೆ ಮತ್ತು ಮಾನವ ಧರ್ಮವನ್ನು ಪ್ರತಿಪಾದಿಸಿದವರು. ಕೇರಳ ರಾಜ್ಯದಲ್ಲಿ ಸಾಕ್ಷರತೆ ಹೆಚ್ಚಲು ಮೂಲ ಪ್ರೇರಣೆಯಾಗಿದ್ದಾರೆ. ಕರ್ನಾಟಕದಲ್ಲೂ ಅವರ ಸಾಮಾಜಿಕ ಚಿಂತನೆಗಳು ಸಾಕಷ್ಟು ಪ್ರಭಾವ ಬೀರಿವೆ’ ಎಂದೂ ತಿಳಿಸಿದ್ದಾರೆ.

ADVERTISEMENT

‘ಈ ಅಧ್ಯಯನ ಪೀಠಕ್ಕಾಗಿ ಕಲಬುರಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಜನರು ದಶಕದಿಂದ ಆಗ್ರಹ ಮಾಡುತ್ತಿದ್ದಾರೆ. ಅಧ್ಯಯನ ಪೀಠ ಸ್ಥಾಪಿಸಲು ಮಂಜೂರಾತಿ ಹಾಗೂ ಆರ್ಥಿಕ ನೆರವು ನೀಡುವ ಕುರಿತು ಅಗತ್ಯ ಕ್ರಮ ವಹಿಸಬೇಕೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ ಖರ್ಗೆ ಕೂಡ ಪತ್ರ ಬರೆದಿದ್ದಾರೆ. ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಅವರೂ ಪರಿಶೀಲನಾ ವರದಿ ಸಿದ್ಧಪಡಿಸಿ ಸಲ್ಲಿಸಿದ್ದಾರೆ. ಇದೆಲ್ಲವನ್ನೂ ಸರ್ಕಾರ ಪರಿಗಣಿಸಬೇಕು’ ಎಂದು ಸಮಾಜದ ಮುಖಂಡರಾದ ರಾಜೇಶ ಗುತ್ತೇದಾರ, ಈರಯ್ಯ ಗುತ್ತೇದಾರ, ಅಂಬಯ್ಯ ಗುತ್ತೇದಾರ, ಗಾರಂಪಳ್ಳಿ ಬಸಯ್ಯ ಗುತ್ತೇದಾರ ಇತರರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.