ADVERTISEMENT

ಬೆಳಗಾವಿ | ಅರಣ್ಯ ಹುತಾತ್ಮರ ದಿನ: ಗೌರವ ಸಲ್ಲಿಸಿದ ಗಣ್ಯರು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 16:17 IST
Last Updated 11 ಸೆಪ್ಟೆಂಬರ್ 2022, 16:17 IST
ಬೆಳಗಾವಿಯಲ್ಲಿ ಭಾನುವಾರ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ’ ಅಂಗವಾಹಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು
ಬೆಳಗಾವಿಯಲ್ಲಿ ಭಾನುವಾರ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ’ ಅಂಗವಾಹಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು   

ಬೆಳಗಾವಿ: ಅರಣ್ಯ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ನೀಡಿದ ಬಲಿದಾನದ ಸ್ಮರಣೆಗಾಗಿ ನಗರದಲ್ಲಿ ಭಾನುವಾರ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ’ ಆಚರಿಸಲಾಯಿತು.

ನಗರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಮುಸ್ತಫಾ ಹುಸೇನ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಪ್ರಭಾರಿ ಅರಣ್ಯ ಸಂರಕ್ಷಣಾಧಿಕಾರಿ ಡಾ.ಅಂಥೋನಿ ಮರಿಯಪ್ಪ ಅವರು ಪುಷ್ಪಗುಚ್ಛ ಅರ್ಪಿಸಿ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಬಳಿಕ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಹುತಾತ್ಮರಿಗೆ ಗೌರವ ಸಮರ್ಪಿಸಿದರು.

‘ಅರಣ್ಯವೇ ಎಲ್ಲ ದೇಶಗಳ ದೊಡ್ಡ ಸಂಪತ್ತು. ಅರಣ್ಯಗಳು ಉಳಿದರೆ ಮಾತ್ರ ಭವಿಷ್ಯ ಸುಂದರವಾಗಿರುತ್ತದೆ. ಅರಣ್ಯ ಕಾಪಾಡಲು ಜೀವದ ಹಂಗು ತೊರೆಯುವ ಅಧಿಕಾರಿಗಳು, ಸಿಬ್ಬಂದಿ ಸೇವೆ ಅಭಿನಂದನೀಯ’ ಎಂದು ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಪ್ರಶಂಸಿಸಿದರು.

ADVERTISEMENT

ಬೆಳಗಾವಿ ವಿಭಾಗದಲ್ಲಿ ಹುತಾತ್ಮರಾದ ಸಿಬ್ಬಂದಿಯನ್ನು ನೆನೆದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಅವರು, ‘ಶಂಕರ ಮೂಡಲಗಿ, ಬಸರಿಕಟ್ಟಿ, ಹಂಪಯ್ಯ, ಖಾನಾಪುರಿ, ರಂಗನಗೌಡ ಅವರು ಸೇರಿದಂತೆ ಅನೇಕರು ತಮ್ಮ ಜೀವ ಕಳೆದುಕೊಂಡಿದ್ದಾರೆ’ ಎಂದರು.

ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶರಾದ ಹರೀಶ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ. ದರ್ಶನ್, ಎಸಿಎಫ್ ಮಲ್ಲಿನಾಥ ಕುಸನಾಳ, ಆರ್‌ಎಫ್‍ಒ ರಾಕೇಶ್, ಡಿಆರ್‌ಎಫ್‍ಒ ವಿನಯ ಗೌಡ ಅತಿಥಿಗಳಾಗಿ ಭಾಗವಹಿಸಿದ್ದರು.

ವಿಶೇಷತೆ ಏನು: 1730ರ ಸೆಪ್ಟೆಂಬರ್ 11ರಂದು ಜೋಧಪುರದ ಮಹಾರಾಜ ಅಭಯಸಿಂಗ್‌ ಅರಮನೆ ಕಟ್ಟಿಸಲು ಅರಣ್ಯ ಕಡಿಯಲು ಆದೇಶ ನೀಡಿದ್ದ. ಸೇವಕರು ಕೇಜರ್ಲಿ ಎಂಬ ಪ್ರದೇಶದಲ್ಲಿ ಬೆಳೆದ ಮರಗಳನ್ನು ಕಡಿಯಲು ಮುಂದಾದಾಗ, ಭಿಷ್ಣೋಯಿ ಸಮುದಾಯದ ಜನ ಅದನ್ನು ವಿರೋಧಿಸಿ ನಿಂತರು. ಆಗ ನಡೆದ ದಾಳಿಯಲ್ಲಿ ಭಿಷ್ಣೋಯಿ ಸಮುದಾಯದ 363 ಜನರನ್ನು ಕೊಂದರು. ಆ ಬಲಿದಾನ ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಸೆಪ್ಟೆಂಬರ್‌ 11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಆಚರಿಸಲಾಗುತ್ತಿದೆ ಎಂದು ಸಿಸಿಎಫ್‌ ಮಂಜುನಾಥ ಚವ್ಹಾಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.