ಸಂದೀಪ ಪಾಟೀಲ
ಬೆಳಗಾವಿ: ‘ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜುಲೈ 12ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಸಂದೀಪ ಪಾಟೀಲ ಹೇಳಿದರು.
ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿವಿಲ್ ವ್ಯಾಜ್ಯ, ಕಾರ್ಮಿಕ ವ್ಯಾಜ್ಯ, ಬ್ಯಾಂಕ್‌ಗಳ ಸಾಲ ಪ್ರಕರಣ, ಕ್ರಿಮಿನಲ್ ಪ್ರಕರಣ, ಕೌಟುಂಬಿಕ ನ್ಯಾಯಾಲಯದಲ್ಲಿನ ಪ್ರಕರಣ ಸೇರಿದಂತೆ ಸಂಧಾನದ ಮೂಲಕ ವಿವಿಧ ಪ್ರಕರಣಗಳನ್ನು ಇದರಲ್ಲಿ ಇತ್ಯರ್ಥಪಡಿಸಲು ಅವಕಾಶವಿದೆ. ಕಕ್ಷಿದಾರರ ಮಧ್ಯೆ ಇರುವ ಭಿನ್ನಾಭಿಪ್ರಾಯ ಹೋಗಲಾಡಿಸಿ, ತ್ವರಿತವಾಗಿ ಪ್ರಕರಣ ಬಗೆಹರಿಸುವುದೇ ಇದರ ಉದ್ದೇಶವೂ ಆಗಿದೆ. ಪ್ರತಿಯೊಬ್ಬರೂ ಅದಾಲತ್‌ನ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
‘2025ರ ಮಾರ್ಚ್‌ನಲ್ಲಿ ಲೋಕ್ ಅದಾಲತ್ ನಡೆದಿತ್ತು. ಆಗ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 15,505 ಪ್ರಕರಣ ಇತ್ಯರ್ಥಪಡಿಸಲಾಗಿತ್ತು. ಸದ್ಯ ಜಿಲ್ಲೆಯ ನ್ಯಾಯಾಲಯಗಳಲ್ಲಿ 1.37 ಲಕ್ಷ ಪ್ರಕರಣ ಇತ್ಯರ್ಥವಾಗದೆ ಬಾಕಿ ಉಳಿದಿವೆ. ಈ ಪೈಕಿ ಅದಾಲತ್‌ನಲ್ಲಿ ಸಂಧಾನದ ಮೂಲಕ ಬಗೆಹರಿಸಲು 12 ಸಾವಿರ ಪ್ರಕರಣ ಗುರುತಿಸಿದ್ದೇವೆ. ಅದಾಲತ್‌ಗೆ ಇನ್ನೂ ಒಂದು ತಿಂಗಳು ಕಾಲಾವಕಾಶವಿದ್ದು, ಇನ್ನಷ್ಟು ಪ್ರಕರಣ ಗುರುತಿಸಿ ಇತ್ಯರ್ಥಪಡಿಸಲು ಪ್ರಯತ್ನಿಸುತ್ತೇವೆ’ ಎಂದು ತಿಳಿಸಿದರು.
‘ಬೆಳಗಾವಿಯಲ್ಲಿ ಕಾಯಂ ಲೋಕ ಅದಾಲತ್ ಕೂಡ ಇದೆ. ಕಕ್ಷಿದಾರರು ಅದರಲ್ಲಿ ಪಾಲ್ಗೊಂಡು, ತಮ್ಮ ವ್ಯಾಜ್ಯಗಳನ್ನು ಬೇಗ ಇತ್ಯರ್ಥಪಡಿಸಿಕೊಳ್ಳಬಹುದು’ ಎಂದು ತಿಳಿಸಿದರು.
‘ಜನರಿಗೆ ಕಾನೂನುಗಳ ಬಗ್ಗೆ ತಿಳಿವಳಿಕೆ ಮೂಡಿಸಲು ವಿವಿಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಪರಿಸರ ಸಂರಕ್ಷಣೆ ಅಭಿಯಾನ ನಡೆಸುತ್ತಿದ್ದೇವೆ. ಸಾರ್ವಜನಿಕರು ಪ್ರಾಧಿಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.