ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ನವರಾತ್ರಿ ಉತ್ಸವಕ್ಕೆ ಸಂಭ್ರಮದ ಚಾಲನೆ ಸಿಕ್ಕಿತು.
ಪುಷ್ಪಗಳು, ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ನಗರದ ವಿವಿಧ ದೇಗುಲಗಳಿಗೆ ಬೆಳಿಗ್ಗೆಯಿಂದಲೇ ಭಕ್ತರು ಆಗಮಿಸಿ, ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನವರಾತ್ರಿಯ ಮೊದಲ ಘಟಸ್ಥಾಪನೆ ಕಾರ್ಯಕ್ರಮ ವಿವಿಧ ದೇವಸ್ಥಾನಗಳಲ್ಲಿ ನೆರವೇರಿತು.
ದುರ್ಗಾಮಾತಾ ದೌಡ್ ಆರಂಭ: ನವರಾತ್ರಿ ಉತ್ಸವದ ಪ್ರಯುಕ್ತ ಶಿವ ಪ್ರತಿಷ್ಠಾನ ಹಿಂದೂಸ್ಥಾನ್ ಸಂಘಟನೆ ಆಯೋಜಿಸಿರುವ ದುರ್ಗಾಮಾತಾ ದೌಡ್‌ಗೆ ವಿಧ್ಯುಕ್ತವಾಗಿ ಚಾಲನೆ ಸಿಕ್ಕಿತು.
ಶಹಾಪುರದ ಶಿವಾಜಿ ಉದ್ಯಾನದಿಂದ ಆರಂಭಗೊಂಡ ದೌಡ್, ಹುಳಬತ್ತೆ ಕಾಲೊನಿ, ಮಹಾತ್ಮಫುಲೆ ರಸ್ತೆ, ಎಸ್‌ಪಿಎಂ ರಸ್ತೆ, ಸಂತಸೇನಾ ರಸ್ತೆ, ಶಾಸ್ತ್ರಿ ನಗರದ ಪಾಟೀದಾರ್ ಭವನ ರಸ್ತೆ, ಗೂಡ್ಸ್‌ಶೆಡ್ ರಸ್ತೆ, ಕಪಿಲೇಶ್ವರ ಕಾಲೊನಿ, ಮಹಾದ್ವಾರ ರಸ್ತೆ, ಮಾಣಿಕಬಾಗ್ ರಸ್ತೆ, ಸಮರ್ಥ ನಗರ, ಸಂಭಾಜಿ ಗಲ್ಲಿ, ಎಸ್‌ಪಿಎಂ ರಸ್ತೆ ಮಾರ್ಗವಾಗಿ ಸಂಚರಿಸಿ, ಕಪಿಲೇಶ್ವರ ದೇವಸ್ಥಾನ ತಲುಪಿತು.
ದೌಡ್ ಸಾಗುವ ಮಾರ್ಗದಲ್ಲಿ ರಂಗೋಲಿ ಚಿತ್ತಾರದಲ್ಲಿ ಅರಳಿತ್ತು. ಮಕ್ಕಳು, ಯುವಜನರು, ಹಿರಿಯರು ಸೇರಿದಂತೆ ಎಲ್ಲ ವಯೋಮಾನದವರು ಕೈಯಲ್ಲಿ ಭಗವಾ ಧ್ವಜ ಹಿಡಿದು, ಉತ್ಸಾಹದಿಂದ ಹೆಜ್ಜೆಹಾಕಿ ಸಂಭ್ರಮಿಸಿದರು. ವಿವಿಧ ವೇಷಗಳಲ್ಲಿ ಪುಟಾಣಿಗಳು ಕಣ್ಮನ ಸೆಳೆದರು.
ಶ್ರೀದುರ್ಗಾ ಮಾತಾ ದೌಡ್‌ಗೆ ಚಾಲನೆ ಇಂದು
ಬೈಲಹೊಂಗಲ: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ತಾಲ್ಲೂಕು ಘಟಕ ವತಿಯಿಂದ ನವರಾತ್ರಿ ದಸರಾ ಮಹೋತ್ಸವ ಅಂಗವಾಗಿ ಸೆ.23 ರಿಂದ ಅ.1ರ ವರೆಗೆ ದುರ್ಗಾಮಾತಾ ದೌಡ ಕಾರ್ಯಕ್ರಮ ವಿಜೃಂಬಣೆಯಿಂದ ಜರುಗಲಿದೆ ಎಂದು ಜಿಲ್ಲಾ ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಹೇಳಿದರು. ಸೆ.23 ರಂದು ಬೆಳಗ್ಗೆ 6ಕ್ಕೆ ಪಟ್ಟಣದ ಜವಳಿ ಕೂಟದಲ್ಲಿರುವ ಗ್ರಾಮದೇವಿ ದೇವಸ್ಥಾನದಿಂದ ಮೂರುಸಾವಿರ ಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಮೊದಲ ದಿನ ದುರ್ಗಾ ಮಾತಾ ದೌಡ್‌ಗೆ ಚಾಲನೆ ನೀಡುವರು. 24 ರಂದು ಅಂಬೇಡ್ಕರ್ ನಗರ ಗಾಳಿ ದುರ್ಗಾದೇವಿ ದೇವಸ್ಥಾನದಿಂದ ದೌಡ್ ಪ್ರಾರಂಭಗೊಳ್ಳಲ್ಲಿದೆ. 25 ಇಂದಿರಾ ನಗರ ಶಕ್ತಿದೇವಿ ದೇವಸ್ಥಾನದಿಂದ 26 ರಂದು ವಾಸನ ಕೂಟ ಕಲ್ಲದೇಮವ್ವ ದೇವಸ್ಥಾನದಿಂದ 27 ರಂದು ಕರೇಮ್ಮ ದೇವಸ್ಥಾನದಿಂದ 28 ರಂದು ಬಸವನಗರ ಅನ್ನಪೂರ್ಣೆಶ್ವರಿ ದೇವಸ್ಥಾನದಿಂದ 29 ರಂದು ನಂದೆಮ್ಮ ದೇವಿ ದೇವಸ್ಥಾನದಿಂದ 30 ರಂದು ಇಂಚಲ ರಸ್ತೆಯ ಮಹಾಲಕ್ಷ್ಮಿ ದೇವಸ್ಥಾನದಿಂದ ಅ.1 ರಂದು ವಿದ್ಯಾನಗರ ಈಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಗ್ರಾಮದೇವಿ ದೇವಸ್ಥಾನದಲ್ಲಿ ದುರ್ಗಾಮತಾ ದೌಡ್ ಸಂಪನ್ನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ದುರ್ಗಾದೇವಿ ಮೂರ್ತಿ ಮೆರವಣಿಗೆ ಮೂಡಲಗಿ
ಮೂಡಲಗಿಯಲ್ಲಿ 17ನೇ ವರ್ಷದ ನವರಾತ್ರಿ ಉತ್ಸವವು ಸೋಮವಾರ ಸಂಭ್ರಮದಿಂದ ಚಾಲನೆಗೊಂಡಿತು. ದುರ್ಗಾದೇವಿಯ ಮೂರ್ತಿ ಹಾಗೂ ತುಳಜಾಪೂರದಿಂದ ಬರಮಾಡಿಕೊಂಡಿರುವ ಅಂಬಾಭವಾನಿ ಜ್ಯೋತಿಯನ್ನು ಸ್ಥಳೀಯ ಶಿವಬೋಧರಂಗ ಮಠದಿಂದ ಮೆರವಣಿಗೆಯಲ್ಲಿ ಬಸವ ರಂಗಮಂಟಕ್ಕೆ ತರಲಾಯಿತು. ಬಸವ ರಂಗಮಂಟಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ನವರಾತ್ರಿ ಉತ್ಸವ ಸಮಿತಿಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ವರ್ಷವೂ 10 ದಿನಗಳ ವರೆಗೆ ಪ್ರತಿ ದಿನ ಸಂಜೆ ದೇವಿ ಪೂಜೆಯ ನಂತರ ವೈವಿಧ್ಯಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಬಸವ ರಂಗ ಮಂಟಪದ ಬಳಿಯಲ್ಲಿ ಬೃಹತ್ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಸೆ. 23ರಂದು ಸ್ಥಳೀಯ ಕಲಾವಿದರಿಂದ ವಿವಿಧ ಕಾರ್ಯಕ್ರಮ 24ರಂದು ಸುನೀಲ ಸಣ್ಣಕ್ಕಿ ಶಿವಾಜಿ ಸಾಳುಂಕೆ ಅವರಿಂದ ರಸಮಂಜರಿ 25ರ ಸಂಜೆ 6ಕ್ಕೆ ದೇವಿಗೆ ಕುಂಕುಮಾರ್ಚನೆ ಸಂಜೆ 7ಕ್ಕೆ ರಂಗಾಪುರದ ಸದಾಶಿವಯೋಗೀಶ್ವರ ಸಂಗೀತ ಕಲಾ ಬಳಗದಿಂದ ರಸಮಂಜರಿ 26ರಿಂದ 28 ರವರೆಗೆ ನಿಯೋಜಿತ ಮಿನಿ ವಿಧಾನಸೌಧ ನಿವೇಶನದಲ್ಲಿ ಕೃಷಿ ಮೇಳ 27ರಂದು ಸಂಜೆ ಸೊಲೋ ಡಾನ್ಸ್ ಮತ್ತು 29ರಂದು ಗ್ರೂಪ್ ಡಾನ್ಸ್ ಸ್ಪರ್ಧೆ ಇರಲಿವೆ. ಸೆ. 30ರಂದು ಬೆಳಿಗ್ಗೆ ಚಂಡಿ ಹೋಮ ನಂತರ ಅನ್ನಪ್ರಸಾದ ಮತ್ತು ಸಂಜೆ ರಸಮಂಜರಿ ಅ. 1ರಂದು ದುರ್ಗಾ ದೌಡ್ ಮತ್ತು ದಾಂಡಿಯಾ ನೃತ್ಯ ಸ್ಪರ್ಧೆ 2ರಂದು ಸಂಜೆ ರಾವಣ ದಹಣದೊಂದಿಗೆ ದೇವಿಯ ವಿಸರ್ಜನೆ ಜರುಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.