ನವರಾತ್ರಿ ಉತ್ಸವದ ಪ್ರಯುಕ್ತ ಬೆಳಗಾವಿಯ ಕಪಿಲೇಶ್ವರ ಮೇಲ್ಸೇತುವೆ ಮಾರ್ಗ ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿರುವುದು
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ: ಅದ್ದೂರಿ ಗಣೇಶೋತ್ಸವ ಮುಗಿದ ಬೆನ್ನಲ್ಲೇ, ಸಡಗರದ ನವರಾತ್ರಿ ಉತ್ಸವಕ್ಕೆ ಕುಂದಾನಗರಿ ಸಜ್ಜಾಗಿದೆ.
ನಗರದ ಹಲವು ದೇಗುಲಗಳು ಸಿಂಗಾರಗೊಂಡಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿವೆ. ದುರ್ಗಾದೇವಿ ಮೂರ್ತಿಗಳ ಪ್ರತಿಷ್ಠಾಪನೆಗೆ ಆಕರ್ಷಕ ಮಂಟಪಗಳು ನಿರ್ಮಾಣವಾಗಿದ್ದು, ವಿವಿಧ ಮಾರ್ಗಗಳು ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿವೆ.
‘ಸೆ.22ರಂದು ಮೊದಲ ಘಟ್ಟ ಸ್ಥಾಪನೆ ಕಾರ್ಯಕ್ರಮವಿದೆ. ನವರಾತ್ರಿಯಲ್ಲಿ 10 ದಿನ ನಾನಾ ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ’ ಎಂದು ಕಪಿಲೇಶ್ವರ ದೇವಸ್ಥಾನದ ಟ್ರಸ್ಟಿ ರಾಕೇಶ ಕಲಘಟಗಿ ‘ಪ್ರಜಾವಾಣಿ’ಗೆ ತಿಳಿಸಿದರು.
166 ಕಡೆ ಮೂರ್ತಿ ಪ್ರತಿಷ್ಠಾಪನೆ: ‘ಬೆಳಗಾವಿಯ ವಿವಿಧ ಬಡಾವಣೆಗಳಲ್ಲಿ 166 ದುರ್ಗಾಮಾತಾ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. 169 ಕಡೆ ದಾಂಡಿಯಾ ನೃತ್ಯ ಆಯೋಜನೆಗೆ ಸಂಘಟಕರಿಗೆ ಅನುಮತಿ ಕೊಟ್ಟಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಹೇಳಿದರು.
‘ದಸರಾ ಹಿನ್ನೆಲೆಯಲ್ಲಿ ಭದ್ರತೆಗಾಗಿ 1,300 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, 300 ಗೃಹರಕ್ಷಕ ದಳ ಸಿಬ್ಬಂದಿ, 5 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಿದ್ದೇವೆ. 12 ಶಕ್ತಿ, 15 ಹೊಯ್ಸಳ ಮತ್ತು 9 ಹೈವೇ ಪೆಟ್ರೋಲಿಂಗ್ ವಾಹನ ಬಳಸಿಕೊಳ್ಳಲಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸುತ್ತೇವೆ’ ಎಂದರು.
ದುರ್ಗಾಮಾತಾ ದೌಡ್: ಶಿವ ಪ್ರತಿಷ್ಠಾನ ಹಿಂದೂಸ್ಥಾನ ಸಂಘಟನೆಯವರು ನಗರದಲ್ಲಿ 1999ರಿಂದ ದುರ್ಗಾಮಾತಾ ದೌಡ್ ಆಯೋಜಿಸುತ್ತಿದ್ದಾರೆ.
‘ಈ ಬಾರಿ 27ನೇ ವರ್ಷದ ದೌಡ್ ಯಶಸ್ವಿಯಾಗಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ನಿತ್ಯ ಬೆಳಿಗ್ಗೆ 5.30ರಿಂದ 9ರವರೆಗೆ ವಿವಿಧ ಮಾರ್ಗಗಳಲ್ಲಿ ಸಾಗುವ ದೌಡ್‌ನಲ್ಲಿ ಸಾವಿರಾರು ಜನರು ಹೆಜ್ಜೆಹಾಕಲಿದ್ದಾರೆ’ ಎಂದು ಸಂಘಟನೆ ಅಧ್ಯಕ್ಷ ಕಿರಣ ಗಾವಡೆ ತಿಳಿಸಿದರು.
ಮೊದಲ ದಿನವಾದ ಸೋಮವಾರ ಶಿವಾಜಿ ಉದ್ಯಾನದಿಂದ ಹೊರಡುವ ದೌಡ್, ಹುಳಬತ್ತೆ ಕಾಲೊನಿ, ಮಹಾತ್ಮಫುಲೆ ರಸ್ತೆ, ಎಸ್‌ಪಿಎಂ ರಸ್ತೆ, ಸಂತಸೇನಾ ರಸ್ತೆ, ಶಾಸ್ತ್ರಿ ನಗರ, ಗೂಡ್ಸ್‌ಶೆಡ್ ರಸ್ತೆ, ಮಹಾದ್ವಾರ ರಸ್ತೆ ಮತ್ತಿತರ ಮಾರ್ಗಗಳಲ್ಲಿ ಸಾಗಿ ಕಪಿಲೇಶ್ವರ ಮಂದಿರದ ಬಳಿ ಮುಕ್ತಾಯವಾಗಲಿದೆ.
ಗಣೇಶೋತ್ಸವ ಮಾದರಿಯಲ್ಲೇ ವಿವಿಧ ಸಂಘಟನೆಯವರು ಭಾನುವಾರ ದೇವಿ ಮೂರ್ತಿಗಳ ಆಗಮನ ಮೆರವಣಿಗೆ ನಡೆಸಿದರು.
ಹಿರೇಮಠದಲ್ಲಿ ದಸರಾ ಉತ್ಸವ ಇಂದಿನಿಂದ
ಹುಕ್ಕೇರಿ: ಪಟ್ಟಣದ ಹಿರೇಮಠದಲ್ಲಿ ಸೆ.22 ರಿಂದ ಅ.2ರ ವರೆಗೆ ದಸರಾ ಉತ್ಸವ ಜರುಗಲಿದೆ.
22ರಂದು ಶಾಸಕ ನಿಖಿಲ್ ಕತ್ತಿ ಬೆಳಿಗ್ಗೆ 11.30ಕ್ಕೆ ದಸರಾ ಉತ್ಸವ ಉದ್ಘಾಟನೆ ನೆರವೇರಿಸುವರು. ಪ್ರತಿ ದಿನ ಸಂಜೆ 6.30ಕ್ಕೆ ಮಠದ ಮುಂದೆ ಗುಡ್ಡಾಪುರ ದಾನಮ್ಮ ದೇವಿ ಪುರಾಣ, ಪ್ರವಚನ ಜರುಗಲಿದೆ. ಅಂತೂರ ಬೆಂತೂರ ಕುಮಾರ ಸ್ವಾಮೀಜಿ ಪ್ರವಚನ ಹೇಳುವರು.
ದಿನನಿತ್ಯ ಬೆಳಿಗ್ಗೆ 6ಕ್ಕೆ ಸುಪ್ರಭಾತ, 7ಕ್ಕೆ ಗುರುಶಾಂತೇಶ್ವರನಿಗೆ ರುದ್ರಾಭಿಷೇಕ, 8ಕ್ಕೆ ದೇವಿ ಪುರಾಣ ಪಾರಾಯಣ, 10ಕ್ಕೆ ಚಂಡಿಕಾ ಹೋಮ, ಮಧ್ಯಾಹ್ನ 12ಕ್ಕೆ ಶ್ರೀಗಳ ಪಾದಪೂಜೆ, ಸಂಜೆ 4ಕ್ಕೆ ಚಕ್ರಕ್ಕೆ ಕುಂಕುಮಾರ್ಚನೆ, 5ಕ್ಕೆ ಗುರುಶಾಂತೇಶ್ವರ ರಥೋತ್ಸವ, ಶ್ರೀದೇವಿ ಪಲ್ಲಕ್ಕಿ ಉತ್ಸವ, ಸಂಜೆ 6.30ಕ್ಕೆ ದಸರಾ ಉತ್ಸವ ಕಾರ್ಯಕ್ರಮ, 7ಕ್ಕೆ ಶ್ರೀಗಳ ತುಲಾಭಾರ ಮತ್ತು 8ಕ್ಕೆ ದೀಪೋತ್ಸವ ಜರುಗಲಿದ್ದು, ಮಹಾಪ್ರಸಾದ ವ್ಯವಸ್ಥೆ ಇರಲಿದೆ.
ಅ.2 ರಂದು ಚಂದ್ರಶೇಖರ್ ಸ್ವಾಮೀಜಿ ಅಡ್ಡಪಲ್ಲಕ್ಕಿ ಮಹೋತ್ಸವ, ಬನ್ನಿ ಮುಡಿಯುವ ಕಾರ್ಯಕ್ರಮ ಜರುಗುವುದು ಎಂದು ಮಠಾಧ್ಯಕ್ಷ ಚಂದ್ರಶೇಖರ್ ಸ್ವಾಮೀಜಿ ತಿಳಿಸಿದ್ದಾರೆ.
ಮಹಾಚಂಡಿಕಾ ಹೋಮ ಇಂದಿನಿಂದ
ಹಿರೇಬಾಗೇವಾಡಿ: ಇಲ್ಲಿನ ಸಮೀಪದ ಪಾವನ ಕ್ಷೇತ್ರ ಬಡೇಕೊಳ್ಳಮಠದಲ್ಲಿ ಮಹಾನವರಾತ್ರಿ ಪ್ರಯುಕ್ತ ಸೆ.22 ರಿಂದ ಅ.1ರ ವರಗೆ 10 ದಿನಗಳ ಕಾಲ ಮಹಾಚಂಡಿಕಾ ಹೋಮ ಜರುಗಲಿದೆ.
ಅ.2 ರಂದು ವಿಜಯದಶಮಿ ಪ್ರಯುಕ್ತ ಗಣಹೋಮ ಪೂಜೆ ನೆರವೇರಲಿದ್ದು, ವಿವಿಧ ದೋಷಗಳ ಪರಿಹಾರಾರ್ಥ ಪೂಜೆ ನೆರವೇರಲಿದೆ. ಸಂಪರ್ಕಕ್ಕೆ ಮೊ. 9379788855
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.