ADVERTISEMENT

ನಂದಿಹಳ್ಳಿಯಲ್ಲಿ ಕನ್ನಡ ಶಾಲೆ ಕಡೆಗಣನೆ!

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 8:03 IST
Last Updated 5 ಜನವರಿ 2024, 8:03 IST
ಬೆಳಗಾವಿ ತಾಲ್ಲೂಕಿನ ನಂದಿಹಳ್ಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದೇ ಕೊಠಡಿಯಲ್ಲಿ 4 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರೊಬ್ಬರು ಬೋಧಿಸುತ್ತಿರುವುದು                – ಪ್ರಜಾವಾಣಿ ಚಿತ್ರ: ಇಮಾಮ್‌ಹುಸೇನ್‌ ಗೂಡುನವರ
ಬೆಳಗಾವಿ ತಾಲ್ಲೂಕಿನ ನಂದಿಹಳ್ಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದೇ ಕೊಠಡಿಯಲ್ಲಿ 4 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರೊಬ್ಬರು ಬೋಧಿಸುತ್ತಿರುವುದು                – ಪ್ರಜಾವಾಣಿ ಚಿತ್ರ: ಇಮಾಮ್‌ಹುಸೇನ್‌ ಗೂಡುನವರ   

ನಂದಿಹಳ್ಳಿ: ಇಲ್ಲಿ ಒಂದೇ ಆವರಣದಲ್ಲಿ ಕನ್ನಡ ಮತ್ತು ಮರಾಠಿ ಪ್ರಾಥಮಿಕ ಶಾಲೆಗಳಿವೆ. ಮರಾಠಿ ಮಾಧ್ಯಮದ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ಸೌಕರ್ಯ ದಕ್ಕಿವೆ. ಆದರೆ, 120 ವರ್ಷಗಳ ಹಿಂದೆ ಸ್ಥಾಪನೆಯಾದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂದಿಗೂ ಸಮರ್ಪಕವಾಗಿ ತರಗತಿ ಕೊಠಡಿಗಳೇ ಇಲ್ಲ.

ಹೀಗಾಗಿ 1ರಿಂದ 7ನೇ ತರಗತಿಗಳನ್ನು ಮೂರೇ ಕೊಠಡಿಗಳಲ್ಲಿ ನಡೆಸಲಾಗುತ್ತಿದ್ದು, 1ರಿಂದ 7ನೇ ತರಗತಿಗಳನ್ನು ಮೂರೇ ಕೊಠಡಿಗಳಲ್ಲಿ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಇದು ಬೆಳಗಾವಿ ತಾಲ್ಲೂಕಿನ ನಂದಿಹಳ್ಳಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಎದುರಾದ ಸಂಕಷ್ಟ.

ADVERTISEMENT

ಮರಾಠಿ ಪ್ರಾಬಲ್ಯವಿರುವ ಈ ಹಳ್ಳಿಯಲ್ಲಿ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಲು ಪಾಲಕರು ಒಲವು ತೋರುತ್ತಿದ್ದಾರೆ. ಆದರೆ, ಸರ್ಕಾರ ಬೇಡಿಕೆಯಂತೆ ಸೌಕರ್ಯ ಕೊಡುತ್ತಿಲ್ಲ. ‘ಮರಾಠಿಗೆ ರತ್ನಗಂಬಳಿ ಹಾಸುತ್ತಿರುವ ಸರ್ಕಾರ, ಕನ್ನಡವನ್ನೇ ಕಡೆಗಣಿಸುತ್ತಿದೆ’ ಎನ್ನುವ ಅಪವಾದ ಕೇಳಿಬರುತ್ತಿದೆ.

1904ರಲ್ಲಿ ಆರಂಭಗೊಂಡ ಶಾಲೆಯಲ್ಲಿ 83 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮುಖ್ಯಶಿಕ್ಷಕಿ ಸೇರಿದಂತೆ ಮೂವರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರು ಅತಿಥಿ ಶಿಕ್ಷಕರನ್ನು ಇತ್ತೀಚೆಗೆ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಲಭ್ಯವಿರುವ ಶಿಕ್ಷಕರಷ್ಟೇ ಇಡೀ ಶಾಲೆಯ ತರಗತಿ ನಡೆಸುತ್ತಿದ್ದಾರೆ. ಕೆಲವೊಮ್ಮೆ ಕಾರಿಡಾರ್‌ನಲ್ಲಿ ಕೂಡ್ರಿಸಿ ಪಾಠ ಮಾಡುತ್ತಿರುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಗ್ರಂಥಾಲಯ, ಪ್ರಯೋಗಾಲಯವಂತೂ ವಿದ್ಯಾರ್ಥಿಗಳಿಗೆ ದೂರದ ಮಾತಾಗಿದೆ. ಕೆಲವೇ ಡೆಸ್ಕ್‌ಗಳಿದ್ದು, ಹೆಚ್ಚಿನ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದಾರೆ.

ಕನ್ನಡ ಶಾಲೆ ಆವರಣದಲ್ಲೇ 1936ರಲ್ಲಿ ಮರಾಠಿ ಶಾಲೆಯೂ ತಲೆ ಎತ್ತಿದ್ದು, 1ರಿಂದ 7ನೇ ತರಗತಿಯವರೆಗೆ 150 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಿಗೆ ಆರು ತರಗತಿ ಕೊಠಡಿಗಳು ಲಭ್ಯವಿದ್ದು, ಮಕ್ಕಳ ಶೈಕ್ಷಣಿಕ ಅಗತ್ಯ ಪೂರೈಸುತ್ತಿವೆ.

ಶೀಘ್ರ ಆರಂಭವಾಗಲಿವೆ: ‘ಕಚೇರಿಯೂ ಸೇರಿದಂತೆ ಮೂರು ಕೊಠಡಿಗಳಲ್ಲಿ ನಾವು ಏಳೂ ತರಗತಿಗಳನ್ನು ನಡೆಸುತ್ತಿದ್ದೇವೆ. ಶಾಲೆಗೆ ಹೆಚ್ಚುವರಿ ತರಗತಿ ಕೊಠಡಿ ಮಂಜೂರುಗೊಳಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಪತ್ರ ಬರೆದಿದ್ದೆವು. ಶೀಘ್ರ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ’ ಎಂದು ಮುಖ್ಯಶಿಕ್ಷಕಿ ಲತಾ ಕಾಗಣಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಭ್ಯವಿದ್ದ ಮತ್ತೊಂದು ತರಗತಿ ಕೊಠಡಿಯನ್ನು ಅಡುಗೆ ಕೋಣೆಯಾಗಿ ಬಳಸುತ್ತಿದ್ದೇವೆ. ಕನ್ನಡ ಮತ್ತು ಮರಾಠಿ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದೇ ಕಡೆ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸಲಾಗುತ್ತಿದೆ. ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ಪ್ರಗತಿಯಲ್ಲಿವೆ’ ಎಂದರು.

‘ನಾನು 25 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದು, ಕನ್ನಡ ಮತ್ತು ಮರಾಠಿ ಮಾಧ್ಯಮ ವಿದ್ಯಾರ್ಥಿಗಳು ಸೌಹಾರ್ದದಿಂದ ಓದುತ್ತಿದ್ದಾರೆ. ಪ್ರತ್ಯೇಕವಾಗಿ ನಮ್ಮ ಶಾಲೆ ನಿರ್ಮಾಣಕ್ಕಾಗಿ ಸಮೀಪದಲ್ಲೇ 16 ಗುಂಟೆ ಜಮೀನು ನೀಡಲಾಗಿದೆ’ ಎಂದು ಶಿಕ್ಷಕ ರಮೇಶ ಹಾಲಗಿಮರ್ಡಿ ಹೇಳಿದರು.

ಬೆಳಗಾವಿ ತಾಲ್ಲೂಕಿನ ನಂದಿಹಳ್ಳಿಯಲ್ಲಿ ಒಂದೇ ಆವರಣದಲ್ಲಿರುವ ಸರ್ಕಾರಿ ಕನ್ನಡ ಮತ್ತು ಮರಾಠಿ ಪ್ರಾಥಮಿಕ ಶಾಲೆಗಳು– ಪ್ರಜಾವಾಣಿ ಚಿತ್ರ:ಇಮಾಮ್‌ಹುಸೇನ್‌ ಗೂಡುನವರ
ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚುತ್ತಿದ್ದು ಎರಡು ತರಗತಿ ಕೊಠಡಿ ಮಂಜೂರಾಗಿವೆ. ಶೀಘ್ರ ಕಾಮಗಾರಿ ಆರಂಭಿಸುತ್ತೇವೆ
–ಸದ‍ಪ್ಪಾ ದಾಸಪ್ಪನವರ ಕ್ಷೇತ್ರ ಶಿಕ್ಷಣಾಧಿಕಾರಿ ಬೆಳಗಾವಿ ಗ್ರಾಮೀಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.