ADVERTISEMENT

ಚಿಕ್ಕೋಡಿ: ಶತಮಾನದ ಶಾಲೆಗೆ ಪುನರುಜ್ಜೀವನ ಭಾಗ್ಯ

ಕರ್ನಾಟಕ ಪಬ್ಲಿಕ್ ಶಾಲೆಗೆ ಹಲವು ಮೂಲ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 25 ಮೇ 2025, 4:11 IST
Last Updated 25 ಮೇ 2025, 4:11 IST
<div class="paragraphs"><p>ಕೇರೂರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ</p></div>

ಕೇರೂರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ

   

ಚಿಕ್ಕೋಡಿ: ತಾಲ್ಲೂಕಿನ ಕೇರೂರ ಗ್ರಾಮದಲ್ಲಿ 2018-19ರಲ್ಲಿ ಕರ್ನಾಟಕ ಸರ್ಕಾರದಿಂದ ಪ್ರಾರಂಭವಾದ ಕರ್ನಾಟಕ ಪಬ್ಲಿಕ್ ಶಾಲೆಯು ಸಮುದಾಯದ ಸಹಭಾಗಿತ್ವದಲ್ಲಿ ಹಲವು ಮೂಲ ಸೌಕರ್ಯಗಳನ್ನು ಹೊಂದಿದೆ. ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿದ್ದರಿಂದ ವರ್ಷದಿಂದ ವರ್ಷಕ್ಕೆ ಗ್ರಾಮದ ಜನರು ಶಾಲೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.

5.17 ಎಕರೆ ಪ್ರದೇಶದಲ್ಲಿರುವ ಕೇರೂರಿನ ಪಬ್ಲಿಕ್ ಶಾಲೆಯಲ್ಲಿ ಎಲ್ ಕೆ ಜಿಯಿಂದ ಪಿಯುಸಿವರೆಗೆ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ಅವಕಾಶವಿದೆ. ಪ್ರಾಥಮಿಕ ವಿಭಾಗದಲ್ಲಿ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಿಭಾಗಗಳಿದ್ದು, ಪ್ರತಿ ವಿಭಾಗದಲ್ಲಿ ತಲಾ 250 ವಿದ್ಯಾರ್ಥಿಗಳು ಇದ್ದಾರೆ. ಪ್ರೌಢ ವಿಭಾಗದಲ್ಲಿ 450 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪದವಿಪೂರ್ವ ವಿಭಾಗದ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ 350 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ADVERTISEMENT

ಪಿಯು ಕಾಲೇಜಿನ ಆವರಣದಲ್ಲಿ ಗುರುಕುಲವನ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಆವರಣದಲ್ಲಿ ಸಸ್ಯ ಶ್ಯಾಮಲ ಉದ್ಯಾನವನವಿದ್ದು, ಇಲ್ಲಿ ಹೊಂಗೆ, ಬೇವು, ಬಸವನಪಾದ, ಗುಲ್ ಮೋಹರ್ ಸೇರಿದಂತೆ 1 ಸಾವಿಕ್ಕೂ ಹೆಚ್ಚು ಗಿಡ ಮರಗಳಿವೆ. ಹೀಗಾಗಿ ಇಲ್ಲಿ ಪಕ್ಷಿ ಸಂಕುಲ ಹೆಚ್ಚಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಉತ್ತಮವಾದ ವಾತಾವರಣವಿದೆ.

ಶಾಲಾ ಆವರಣದಲ್ಲಿ ಗ್ರಾಮದ ಮುಖಂಡ ಮಲ್ಲಕಾರ್ಜುನ ಪಾಟೀಲ ಸಿಸಿ ಕ್ಯಾಮರಾಗಳನ್ನು ಅಳವಿಡಿಸಿದ್ದು, ಐಡಿಬಿಐ ಬ್ಯಾಂಕ್ ನಿಂದ ₹2 ಲಕ್ಷ ಮೊತ್ತದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಬೆಂಗಳೂರು ಮೂಲದ ಅಗಸ್ತ್ಯ ಫೌಂಡೇಷನ್ ಅವರು ₹ 2 ಲಕ್ಷ ಮೊತ್ತದ ಪ್ರಯೋಗಾಲಯ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಹೀಗೆ ದಾನಿಗಳ ಸಹಾಯದಿಂದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇನ್ನೂ ಹತ್ತು ಹಲವು ಸೌಕರ್ಯಗಳನ್ನು ಮಾಡಿಕೊಡಲಾಗಿದೆ.

ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಪ್ರಯತ್ನದಿಂದ ₹1.60 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ವಿಭಾಗಕ್ಕೆ 6 ಕೊಠಡಿ ಹಾಗೂ ಪ್ರೌಢ ವಿಭಾಗಕ್ಕೆ 3 ಕೊಠಡಿ ಸೇರಿದಂತೆ ಒಟ್ಟು 9 ಸುಸಜ್ಜಿತ ತರಗತಿ ಕೋಣೆಗಳನ್ನು ನಿರ್ಮಿಸಿದ್ದು, ಶತಮಾನ ಪೂರೈಸಿದ ಕನ್ನಡ ಶಾಲೆಯ ಹಳೆಯ ಕಟ್ಟಡದ ಪುನರುಜ್ಜೀವನ ಕಾರ್ಯ ಭರದಿಂದ ಸಾಗಿದೆ.

ಕಳೆದ ಏಳು ವರ್ಷಗಳಿಂದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅಧ್ಯಯನ ಮಾಡಿದ ನೂರಾರು ವಿದ್ಯಾರ್ಥಿಗಳು ವಿವಿಧ ಉನ್ನತ ಮಟ್ಟದ ಕೋರ್ಸ್‌ ಗಳಿಗೆ ಆಯ್ಕೆಯಾಗಿದ್ದು, ಕೆಲವರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಹೀಗಾಗಿ ಸಮುದಾಯದ ಸಹಭಾಗಿತ್ವದಲ್ಲಿ ಶಾಲೆಯು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒಂದೇ ಸ್ಥಳದಲ್ಲಿ ಎಲ್ ಕೆ ಜಿಯಿಂದ ಪಿಯುಸಿವರೆಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ಶಾಲೆಯನ್ನು ತೆರೆದಿದ್ದು ಅನುಕೂಲವಾಗಿದೆ.
ಮಲ್ಲಿಕಾರ್ಜುನ ಪಾಟೀಲ, ಕೇರೂರ ಗ್ರಾಪಂ ಮಾಜಿ ಅಧ್ಯಕ್ಷ
ಕೇರೂರಿನ ಪಬ್ಲಿಕ್ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆತಿದ್ದರಿಂದ ತಾನು ನೀಟ್ ಪರೀಕ್ಷೆಎದುರಿಸಿ ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಸೀಟ್ ಪಡೆದಿದ್ದೇನೆ.
ಶಂಭುಲಿಂಗ ಪಾಟೀಲ, ಸಾಧನೆ ಮಾಡಿದ ವಿದ್ಯಾರ್ಥಿ
ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಶಾಲೆಯಲ್ಲಿ ಹಲವು ಸೌಕರ್ಯಗಳು ಇದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.
ಎಂ.ಆರ್.ಭಾಗಾಯಿ, ಕೇರೂರ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.