ADVERTISEMENT

ಹೊಸ ವರ್ಷಾಚರಣೆ; ಬೆಳಗಾವಿಯಲ್ಲಿ ಮದ್ಯ ಮಾರಾಟದಲ್ಲಿ ಏರಿಕೆ

ಶ್ರೀಕಾಂತ ಕಲ್ಲಮ್ಮನವರ
Published 2 ಜನವರಿ 2020, 13:13 IST
Last Updated 2 ಜನವರಿ 2020, 13:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಹೊಸ ವರ್ಷಾಚರಣೆಗೆ ಮದ್ಯ ‘ಕಿಕ್‌’ ನೀಡಿದೆ. ಡಿ.31ರಂದು ಬೆಳಗಾವಿ ಜಿಲ್ಲೆಯ ವಿವಿಧೆಡೆ ನಡೆದ ಪಾನಗೋಷ್ಠಿ ಹಾಗೂ ಸಮಾರಂಭಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಒಂದೇ ದಿನದಲ್ಲಿ 2,01,141 ಲೀಟರ್‌ ಮದ್ಯ ಮಾರಾಟವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 4ರಷ್ಟು ಹೆಚ್ಚಳ ಇದಾಗಿದೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮದ್ಯ ಸೇವಿಸುವುದು ‘ಸಂಪ್ರದಾಯ’ ಎನ್ನುವಂತಾಗಿದೆ. ವರ್ಷದಿಂದ ವರ್ಷಕ್ಕೆ ಮದ್ಯ ಸೇವಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಬಾರ್‌, ರೆಸ್ಟೋರೆಂಟ್‌ಗಳಲ್ಲದೇ, ಕೆಲವು ಉದ್ಯಾನ– ತೆರೆದ ಸ್ಥಳಗಳಲ್ಲಿಯೂ ಪಾರ್ಟಿ ಆಯೋಜನೆ ಮಾಡಲಾಗಿರುತ್ತದೆ. ಹೀಗಾಗಿ ಮದ್ಯ ಮಾರಾಟದಲ್ಲಿ ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ 631 ಮದ್ಯದ ಅಂಗಡಿಗಳಿವೆ. ಸಾಮಾನ್ಯ ದಿನಗಳಲ್ಲಿ 70 ಸಾವಿರದಿಂದ 80 ಸಾವಿರ ಲೀಟರ್‌ ಮಾರಾಟವಾಗುತ್ತದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಈ ಪ್ರಮಾಣ 2 ಲಕ್ಷದ ಗಡಿ ದಾಟಿದೆ.

ADVERTISEMENT

ಬಿಯರ್‌ ಪ್ರತ್ಯೇಕವಾಗಿ ನೋಡಿದರೆ ಮಾರಾಟದಲ್ಲಿ ಕೊಂಚ ಕುಸಿತ ಕಂಡಿದೆ. 62,271 ಲೀಟರ್‌ ಮಾತ್ರ ಮಾರಾಟವಾಗಿದೆ. ಇದು ನಿಗದಿತ ಗುರಿಗಿಂತ ಶೇ 5 ರಷ್ಟು ಕಡಿಮೆಯಾಗಿದೆ. ಅವತ್ತು ಚಳಿ ಜಾಸ್ತಿ ಇದ್ದುದರಿಂದ ಬಹಳಷ್ಟು ಜನರು ಬಿಯರ್‌ ಸೇವಿಸಿರಲಿಲ್ಲ.

ನಗರ ಪ್ರದೇಶಗಳಲ್ಲಿ ಮಾತ್ರ ಅವತ್ತು ಮದ್ಯ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಂದಿನ ಪ್ರಮಾಣದಲ್ಲಿಯೇ ಮಾರಾಟವಾಗಿತ್ತು. ಹೊಸ ವರ್ಷಾಚರಣೆಯಂತಹ ಸಮಾರಂಭವನ್ನು ಗ್ರಾಮಸ್ಥರು ಆಚರಿಸದೇ ಇರುವುದರಿಂದ ಅಲ್ಲಿ ಏರಿಕೆ ಕಂಡಿಲ್ಲ.

ಬೆಳಗಾವಿಯಲ್ಲಿ ಹೆಚ್ಚು:ಜಿಲ್ಲೆಯೊಳಗೆ ಬೆಳಗಾವಿ, ಗೋಕಾಕ ಹಾಗೂ ಚಿಕ್ಕೋಡಿಯಲ್ಲಿ ಹೆಚ್ಚು ಮದ್ಯ ಮಾರಾಟವಾಗಿದೆ. ಬೆಳಗಾವಿಯಲ್ಲಿ 48,726 ಲೀಟರ್‌, ಚಿಕ್ಕೋಡಿಯಲ್ಲಿ 31,338 ಲೀಟರ್‌ ಹಾಗೂ ಗೋಕಾಕದಲ್ಲಿ 28,575 ಲೀಟರ್‌ ಮಾರಾಟವಾಗಿದೆ.

ವರ್ಷದಲ್ಲಿ ಶೇ 40ರಷ್ಟು ಹೆಚ್ಚಳ;ಪ್ರಸಕ್ತ ಹಣಕಾಸು ವರ್ಷದ ಲೆಕ್ಕಾ ಹಾಕಿದರೆ, ಏಪ್ರಿಲ್‌ 1ರಿಂದ ಡಿಸೆಂಬರ್‌ 31ರವರೆಗೆ ಜಿಲ್ಲೆಯಲ್ಲಿ 35,62,002 ಲೀಟರ್‌ ಮದ್ಯ ಮಾರಾಟವಾಗಿದೆ. ಸರ್ಕಾರ ನಿಗದಿಪಡಿಸಿದ್ದ 26,33,130 ಲೀಟರ್‌ ಗುರಿಗಿಂತಲೂ ಶೇ 40ರಷ್ಟು ಹೆಚ್ಚಳ ಇದಾಗಿದೆ.

ಇದೇ ಅವಧಿಯಲ್ಲಿ ಬಿಯರ್‌ 8,93,790 ಲೀಟರ್‌ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಕೊಂಚ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.