ADVERTISEMENT

ಬೆಳಗಾವಿ‌ | ‘ಪತ್ರಿಕೆ ವಿತರಕರಿಗೆ ಸ್ಥಳಾವಕಾಶ ನೀಡಿ’: ಆಗ್ರಹ

ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪತ್ರಿಕಾ ವಿತರಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 3:12 IST
Last Updated 5 ಸೆಪ್ಟೆಂಬರ್ 2025, 3:12 IST
ಬೆಳಗಾವಿಯಲ್ಲಿ ಗುರುವಾರ ಪತ್ರಿಕಾ ವಿತರಕರ ದಿನ ಆಚರಿಸಲಾಯಿತು. ದೀಪಕ್ ರಾಜಗೋಳಕರ, ರಾಜು ಬೋಸ್ಲೆ, ಸಂಜು ಘೋರ್ಪಡೆ, ಪ್ರತಾಪ್ ಬೋಸ್ಲೆ, ಸತೀಶ ನಾಯ್ಕ, ಸುನೀಲ್ ಕಾಂಗಲೆ, ವಿನಾಯಕ ರಾಜಗೋಲ್ಕರ, ದೀಪಕ ನಂದಗಡಕರ, ಸಂಜಯ ಕದಂ ಇತರರು ಪಾಲ್ಗೊಂಡರು
ಬೆಳಗಾವಿಯಲ್ಲಿ ಗುರುವಾರ ಪತ್ರಿಕಾ ವಿತರಕರ ದಿನ ಆಚರಿಸಲಾಯಿತು. ದೀಪಕ್ ರಾಜಗೋಳಕರ, ರಾಜು ಬೋಸ್ಲೆ, ಸಂಜು ಘೋರ್ಪಡೆ, ಪ್ರತಾಪ್ ಬೋಸ್ಲೆ, ಸತೀಶ ನಾಯ್ಕ, ಸುನೀಲ್ ಕಾಂಗಲೆ, ವಿನಾಯಕ ರಾಜಗೋಲ್ಕರ, ದೀಪಕ ನಂದಗಡಕರ, ಸಂಜಯ ಕದಂ ಇತರರು ಪಾಲ್ಗೊಂಡರು   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಪತ್ರಿಕಾ ವಿತರಕರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ನಸುಕಿನಲ್ಲೇ ಪ್ರತಿ ದಿನ ಸೇರುತ್ತಿದ್ದ ಕಾಯಕ ಸ್ಥಳದಲ್ಲಿ ಸೇರಿದ ಪತ್ರಿಕಾ ವಿತರಕರು, ಏಜೆಂಟರು ಸಿಹಿ ಹಂಚಿ ಸಂಭ್ರಮಿಸಿದರು. 

ಬೆಳಗಾವಿ ನಗರದಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಬ್ದುಲ್‌ ಕಲಾಂ ಅವರೂ ಬಾಲ್ಯದಲ್ಲಿ ಪತ್ರಿಕೆ ವಿತರಿಸುತ್ತ ಶಾಲೆ ಕಲಿತಿದ್ದರು. ಇದೇ ಕಾರಣಕ್ಕೆ ಪತ್ರಿಕಾ ವಿತರಕರು ಅವರನ್ನೇ ಆದರ್ಶವಾಗಿ ಇಟ್ಟುಕೊಂಡಿದ್ದು ಕಾರ್ಯಕ್ರಮಕ್ಕೆ ಅರ್ಥ ಬಂದಿತು.

ಬೆಳಗಾವಿ ದಿನಪತ್ರಿಕಾ ವಿತರಕರ ಸೋಷಿಯಲ್‌ ಅಂಡ್‌ ಕಲ್ಚರಲ್‌ ಸೊಸೈಟಿ ಅಧ್ಯಕ್ಷ ದೀಪಕ್ ರಾಜಗೋಳಕರ ಮಾತನಾಡಿ, ‘ಇಷ್ಟು ವರ್ಷಗಳಾದರೂ ರಾಜ್ಯ ಸರ್ಕಾರ ನಮ್ಮನ್ನು ಕಾರ್ಮಿಕರು ಎಂದು ಪರಿಗಣಿಸಿಲ್ಲ. ಸರಿಯಾದ ಆರೋಗ್ಯ ವಿಮೆಗಳನ್ನು ನೀಡುತ್ತಿಲ್ಲ. ಪ್ರತಿ ವರ್ಷ ಸೆ.4ರಂದು ಪತ್ರಿಕಾ ವಿತರಕರ ದಿನಾಚರಣೆಯ ದಿನ ಮಾತ್ರ ನೆನಪಾಗುತ್ತೇವೆ. ಮತ್ತೆ ಎಲ್ಲರೂ ಮರೆಯುತ್ತಾರೆ. ನಾವು ಪ್ರತಿದಿನವೂ ಮನೆಗಳಿಗೆ ಪತ್ರಿಕೆ ತಲುಪಿಸುವ ಕಾರಣ ಪ್ರತಿ ಮನೆಯೂ ನಮ್ಮದೇ ಎಂದು ಭಾವಿಸುತ್ತೇವೆ. ಅದೇ ಭಾವನೆ ಓದುಗರಿಗೂ ಬರಬೇಕಿದೆ’ ಎಂದರು.

ADVERTISEMENT

‘ನಗರದಲ್ಲಿ ಪತ್ರಿಕೆಗಳನ್ನು ಹೊಂದಿಸಿಕೊಂಡು, ಎಣಿಸಿ, ಬಂಡಲ್‌ ಮಾಡಿ ಸಾಗಿಸಲು ಅನುಕೂಲ ಆಗುವಂತೆ ಒಂದು ಸರ್ಕಾರಿ ಕಟ್ಟಡದಲ್ಲಿ ಜಾಗ ಕೊಡಲು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದೇವೆ. ಸದ್ಯ ಎಲ್ಲರೂ ರಸ್ತೆ ಬದಿಯಲ್ಲೇ ಕುಳಿತುಕೊಳ್ಳುತ್ತಿದ್ದೇವೆ. ಮಳೆ– ಚಳಿಯಿಂದ ಆರೋಗ್ಯ ಹಾಳಾಗುತ್ತಿದೆ. ಆದ್ದರಿಂದ ಹಳೆ ಪಾಲಿಕೆ ಕಟ್ಟಡ ಅಥವಾ ನಗರ ಸಾರಿಗೆ ಬಸ್‌ ನಿಲ್ದಾಣದಲ್ಲಿ ಒಂದು ಕೊಠಡಿ ಕೊಡಬೇಕು. ನಸುಕಿನ 4ರಿಂದ ಬೆಳಿಗ್ಗೆ 8 ಗಂಟೆಯೊಳಗೆ ನಮ್ಮ ಕೆಲಸಗಳು ಮುಗಿಯುತ್ತವೆ. ನಂತರ ಸರ್ಕಾರಿ ಕೆಲಸಗಳಿಗೇನೂ ತೊಂದರೆ ಆಗುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಕ್ರಮ ವಹಿಸಬೇಕು’ ಎಂದೂ ಆಗ್ರಹಿಸಿದರು. 

ಅಸೋಸಿಯೇಷನ್‌ ಕಾರ್ಯದರ್ಶಿ ರಾಜು ಬೋಸ್ಲೆ, ಖಜಾಂಚಿ ಸಂಜು ಘೋರ್ಪಡೆ, ರಾಷ್ಟ್ರೀಯ ಪತ್ರಿಕಾ ಬಳಗದ ಸದಸ್ಯರಾದ ಪ್ರತಾಪ್ ಬೋಸ್ಲೆ, ಸತೀಶ ನಾಯ್ಕ, ಸುನೀಲ್ ಕಾಂಗಲೆ, ವಿನಾಯಕ ರಾಜಗೋಲ್ಕರ, ದೀಪಕ ನಂದಗಡಕರ, ಸಂಜಯ ಕದಂ ಸೇರಿದಂತೆ ಎಲ್ಲ ಪತ್ರಿಕೆಗಳ ವಿತರಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.