ADVERTISEMENT

ಹುಕ್ಕೇರಿ | ನಿರಂತರ ಜ್ಯೋತಿ ಅನುಷ್ಠಾನಕ್ಕೆ ₹3.63 ಕೋಟಿ: ಸಚಿವ ಸತೀಶ್ ಜಾರಕಿಹೊಳಿ

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 2:24 IST
Last Updated 6 ಆಗಸ್ಟ್ 2025, 2:24 IST
ಹುಕ್ಕೇರಿಯಲ್ಲಿ ಮಂಗಳವಾರ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಜನರ ಅಹವಾಲು ಆಲಿಸಿದರು
ಹುಕ್ಕೇರಿಯಲ್ಲಿ ಮಂಗಳವಾರ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಜನರ ಅಹವಾಲು ಆಲಿಸಿದರು   

ಹುಕ್ಕೇರಿ: ‘ತಾಲ್ಲೂಕಿನ ಎಲಿಮುನ್ನೋಳಿಯ 856 ತೋಟದ ಮನೆಗಳಿಗೆ ನಿರಂತರ ವಿದ್ಯುತ್ ಪೂರೈಸುವ ಸಲುವಾಗಿ ₹3.63 ಕೋಟಿ ವೆಚ್ಚದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲು ನಿರಂತರ ಜ್ಯೋತಿ ಯೋಜನೆ ಹಮ್ಮಿಕೊಂಡಿದ್ದು, ಹಂತ ಹಂತವಾಗಿ ಎಲ್ಲ ಗ್ರಾಮಗಳಿಗೂ ವಿಸ್ತರಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಪಟ್ಟಣದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಲ್ಲಿ ಮಂಗಳವಾರ ಜನರ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಈ ಯೋಜನೆಯಡಿ ನಿರಂತರ ವಿದ್ಯುತ್ ಪಡೆಯಲು ಗ್ರಾಹಕರು ತಯಾರಿಸಿದ ಅಂದಾಜು ವೆಚ್ಚದಲ್ಲಿ ಸಂಘದ ವತಿಯಿಂದ ಶೇ 50ರಷ್ಟು ಹಣವನ್ನು ನೆರವು ನೀಡಲಾಗುವುದು. ಗರಿಷ್ಠ ₹2 ಲಕ್ಷ ಹಣಕಾಸಿನ ಸಹಾಯ ಮಾಡಲಾಗುವುದು. ಯೋಜನೆಯ ಅನುಷ್ಠಾನಕ್ಕೆ ₹30 ರಿಂದ ₹40 ಕೋಟಿ  ವೆಚ್ಚವಾಗುವುದು’ ಎಂದರು.

‘ಕಳೆದ ಮೂರು ತಿಂಗಳಿಂದ ಸದ್ಯದ ಆಡಳಿತ ಮಂಡಳಿ ಸಲ್ಲಿಸುತ್ತಿರುವ ಸೇವೆಯನ್ನು ಗ್ರಾಹಕರು ಗಮನಿಸುತ್ತಿದ್ದಾರೆ. ಜನರ ಆಶೋತ್ತರಕ್ಕೆ ನಿರ್ದೇಶಕರು ಸ್ಪಂದಿಸುತ್ತಿದ್ದಾರೆ. ತಮ್ಮ ಉದ್ದೇಶ ಜನರಿಗೆ ಒಳಿತು ಮಾಡುವುದಾಗಿದೆ’ ಎಂದರು.

ADVERTISEMENT

‘ಹುಕ್ಕೇರಿ ವಿದ್ಯುತ್ ಸಂಘದಲ್ಲಿ ಕಳೆದ ಮೂರು ತಿಂಗಳಲ್ಲಿ ಬದಲಾವಣೆ ಕಂಡು ಬರುತ್ತಿರುವ ಕಾರಣ ಇಡೀ ಆಡಳಿತ ಮಂಡಳಿ ಜನರ ಬಾಗಿಲಿಗೆ ಹೋಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ’ ಎಂದರು.

ಸಂಘದ ಅಧ್ಯಕ್ಷ ಜಯಗೌಡ ಪಾಟೀಲ್, ಉಪಾಧ್ಯಕ್ಷ ವಿಷ್ಣು ರೇಡೆಕರ್, ಎಲ್ಲ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಮುಖಂಡರಾದ ಮಹಾಂತೇಶ ಮಗದುಮ್ಮ, ಕಿರಣಸಿಂಗ್ ರಜಪೂತ, ಮಂಜುನಾಥ ಪಾಟೀಲ್, ಗುರು ಪಾಟೀಲ್, ಅಮರ ನಲವಡೆ, ಬಂಡು ಹತನೂರಿ, ಅಜೀತ ಕರಜಗಿ, ಇನಾಮದಾರ, ರವಿ ಕರಾಳೆ, ಆರ್.ಇ. ನೇಮಿನಾಥ, ಗ್ರಾಹಕರು ಇದ್ದರು.

ಹುಕ್ಕೇರಿಯಲ್ಲಿ ಮಂಗಳವಾರ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಕಚೇರಿ ಆವರಣದಲ್ಲಿ ಕುಂದು ಕೊರತೆ ಸಭೆಯಲ್ಲಿ ಪಾಲ್ಗೊಂಡ ಜನರು

ಉತ್ತಮ ಕಾರ್ಯ ಮಾಡುವವರಿಗೆ ಟಿಕೆಟ್

‘ಇನ್ನೆರಡು ತಿಂಗಳಲ್ಲಿ ಜರುಗಬಹುದಾದ ಹುಕ್ಕೇರಿ ವಿದ್ಯುತ್ ಸಂಘದ ಚುನಾವಣೆಯಲ್ಲಿ ಉತ್ತಮ ಕಾರ್ಯ ಮಾಡುವವರಿಗೆ ಟಿಕೆಟ್ ಕೊಡಲಾಗುವುದು. ಆಯ್ಕೆ ಮಾಡುವುದು ಗ್ರಾಹಕ ಮತದಾರನ ಕೈಯಲ್ಲಿದೆ’ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಅವಿರೋಧ ಆಯ್ಕೆ ಸಾಧ್ಯವೆ ಎಂಬ ಪ್ರಶ್ನೆಗೆ ‘ಸದ್ಯದ ಸ್ಥಿತಿಯಲ್ಲಿ ಚುನಾವಣೆ ಆಗುವ ಲಕ್ಷಣಗಳು ಕಾಣುತ್ತಿವೆ. ಮುಂದೇನಾಗತ್ತೋ ನೊಡೋಣ. ಚುನಾವಣೆಗೆ ಇನ್ನೂ 2 ತಿಂಗಳು ಸಮಯವಿದೆ’ ಎಂದರು. ಚುನಾವಣೆ ಹಿನ್ನೆಲೆ ಗ್ರಾಹಕರು ಬಾಕಿ ಉಳಿಸಿಕೊಂಡ ವಿದ್ಯುತ್ ಬಿಲ್‌ನ್ನು ತಮ್ಮ ಕಡೆಯವರು ಪಾವತಿಸುತ್ತಿದ್ದಾರೆ ಎಂಬ ಚರ್ಚೆ ಕುರಿತು ಪ್ರಶ್ನಿಸಿದಾಗ ‘ಎರಡೂ ಕಡೆಯವರು ತುಂಬುತ್ತಿದ್ದಾರೆ ಎಂಬ ಚರ್ಚೆ ಇದೆ.  ಇಲ್ಲಿಯವರೆಗೆ ಏನೂ ತುಂಬಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.