ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಕುಲಮನಟ್ಟಿ ಗ್ರಾಮದ ಕಾಡಣ್ಣವರ ಓಣಿಯಲ್ಲಿ ವಾಸಿಸುವ ಕುಟುಂಬಗಳು ವಿದ್ಯುತ್ ತೊಂದರೆಯಿಂದಾಗಿ ಸಮಸ್ಯೆ ಎದುರಿಸುತ್ತಿವೆ.
‘ತ್ರೀಫೇಸ್ ವಿದ್ಯುತ್ ಸಂಪರ್ಕದಿಂದಾಗಿ ದಿನದ 18 ತಾಸು ವಿದ್ಯುತ್ ಸೌಲಭ್ಯವಿಲ್ಲದೆ ಕಾಲ ಕಳೆಯುವಂತಾಗಿದೆ’ ಎಂದು ಓಣಿಯ ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.
‘ಸರ್ಕಾರದ ವಿವಿಧ ಯೋಜನೆಯಡಿ ಖೋದಾನಪುರ ಗ್ರಾಮ ಪಂಚಾಯಿತಿಯಿಂದ ಕೆಲವು ಕುಟುಂಬಗಳಿಗೆ ಮನೆ ಮಂಜೂರಾಗಿವೆ. ಇನ್ನುಳಿದವರು ಹೊಲದಲ್ಲಿ ಮನೆ ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ನಮಗೆಲ್ಲ ನಿತ್ಯದ ಚಟುವಟಿಕೆಗೆ ತುಂಬಾ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಅವರು.
‘ಪಂಚಾಯಿತಿ ವತಿಯಿಂದ ಮನೆ ಮಂಜೂರಾದ ನಂತರ, ನಮಗಿರುವ ಹೊಲದ ಜಾಗೆಯಲ್ಲಿ ಮನೆ ನಿರ್ಮಾಣ ಮಾಡಿಕೊಂಡೆವು. ಮೊದಲು ನೀರಿನ ತೊಂದರೆಯಾಗುತ್ತಿತ್ತು. ಪಂಚಾಯಿತಿ ಆಡಳಿತ ಅದನ್ನು ಸರಿಪಡಿಸಿತು. ಈಗ ನೀರಿನ ತೊಂದರೆಯಿಲ್ಲ. ಒಳ್ಳೆಯ ರಸ್ತೆ ಮತ್ತು ವ್ಯತ್ಯಯ ಇಲ್ಲದ ವಿದ್ಯುತ್ ಪೂರೈಕೆಯಾದರೆ ಅನುಕೂಲವಾಗುತ್ತದೆ’ ಎಂದು ಮಹಾದೇವ ಬಡ್ಲಿ ಮತ್ತು ದ್ವಿತೀಯ ಪಿಯು ಓದುತ್ತಿರುವ ವಿದ್ಯಾರ್ಥಿ ನೀಲಕಂಠ ಕಾಡಣ್ಣವರ ಅಧಿಕಾರಿಗಳನ್ನು ಒತ್ತಾಯಿಸಿದರು.
‘ಪಂಪ್‌ಸೆಟ್‌ಗಳಿಗೆ ನೀಡುವ ತ್ರಿಫೇಸ್ ಲೈನ್‌ನಿಂದ ಮನೆಗೆ ಸಂಪರ್ಕ ನೀಡಲಾಗಿದೆ. ಆದರೆ, ಹೆಸ್ಕಾಂನವರು ಇವುಗಳಿಗೆ ನಿತ್ಯ 6 ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡುತ್ತಾರೆ. ಇದು ನಮ್ಮ ತೊಂದರೆಗೆ ಕಾರಣವಾಗಿದೆ’ ಎಂದು ವಿವರಿಸಿದರು.
‘ಸದ್ಯ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ ವರೆಗೆ ತ್ರಿಫೇಸ್ ಲೈನ್ ನೀಡುತ್ತಿದ್ದಾರೆ. ಈ ಅವಧಿಯೊಳಗೆ ವಿದ್ಯುತ್ ಮೇಲೆ ಅವಲಂಬಿಸಿರುವ ಕೆಲಸ, ಕಾರ್ಯಗಳನ್ನು ಮಾಡಿ ಮುಗಿಸಬೇಕಾಗಿದೆ’ ಎಂದು ಯಲ್ಲವ್ವ ಬಡ್ಲಿ ಹೇಳುತ್ತಾರೆ.
‘ತ್ರಿಫೇಸ್ ಕರೆಂಟ್ ನೀಡುವ ಅವಧಿಯನ್ನು ಕೆಲವು ದಿನಗಳಾದ ನಂತರ ಬದಲಾವಣೆ ಮಾಡುತ್ತಾರೆ. ಆಗ ಮಧ್ಯಾಹ್ನ 12ರಿಂದ ಸಂಜೆ 6ರ ವರೆಗೆ ಸರಬರಾಜು ಇರುತ್ತದೆ. ರಾತ್ರಿಯಾದರೆ ಕ್ರಿಮಿನಾಶಕ ಸಿಂಪರಣೆ ಮಾಡುವ ಪಂಪ್‌ಗೆ ಲೈಟ್ ವ್ಯವಸ್ಥೆ ಮಾಡಿರುತ್ತಾರೆ. ಅದನ್ನು ಹಚ್ಚಿಕೊಂಡು ಬೇಗ ಊಟ ಮುಗಿಸಬೇಕು. ಇವು ಎರಡು ಅಥವಾ ಮೂರು ತಾಸು ಬೆಳಗುತ್ತವೆ’ ಎಂದು ತಮಗಾಗುತ್ತಿರುವ ತೊಂದರೆಯನ್ನು ವಿವರಿಸುತ್ತಾರೆ ಅಡವಯ್ಯ ಕಾಡಯ್ಯನವರಮಠ ಮತ್ತು ಹನುಮಂತ ಬಡ್ಲಿ.
‘ಸಂಬಂಧಪಟ್ಟ ಖೋದಾನಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿ ಬರೆದು ತೊಂದರೆಯನ್ನು ವಿವರಿಸಲಾಗಿದೆ. ಪರಿಹಾರದ ಭರವಸೆ ಅವರಿಂದ ಬಂದಿದೆ. ಈ ವಿದ್ಯುತ್ ಸಮಸ್ಯೆ ಬಗೆಹರಿದರೆ ನಿಶ್ಚಿಂತೆಯಿಂದ ಜೀವನ ಮಾಡುತ್ತೇವೆ’ ಎಂದರು.
ಕುಲಮನಟ್ಟಿಯ ಜನತಾ ಕಾಲೊನಿಯವರೆಗೆ ವಿದ್ಯುತ್ ಕಂಬಗಳು ಬಂದಿವೆ. ಇಲ್ಲಿಗೆ ಬರಬೇಕೆಂದರೆ 11 ಕಂಬಗಳು ಬೇಕಾಗುತ್ತವೆ ಎಂದು ಹೇಳುತ್ತಾರೆ. ಪಂಚಾಯಿತಿ ಆಡಳಿತ ನಮಗೆ ವಿದ್ಯುತ್ ವ್ಯವಸ್ಥೆ ಮಾಡಿಕೊಡಬೇಕುಮಹಾದೇವ ಬಡ್ಲಿ ಗ್ರಾಮಸ್ಥ
ಕುಲಮನಟ್ಟಿಯ ಕಾಡಣ್ಣವರ ಬೀದಿಯ ಸಮಸ್ಯೆ ಗಮನಕ್ಕೆ ಬಂದಿದೆ. ಆ ಓಣಿಯಲ್ಲಿ ಸಾಲಾಗಿ ಮನೆಗಳಿಲ್ಲ. ಅಂತರದ ಮೇಲೆ ಮನೆ ನಿರ್ಮಿಸಿಕೊಂಡಿದ್ದಾರೆ. ಸಮೀಕ್ಷೆ ನಡೆಸಿ ಬೇಗ ಸಮಸ್ಯೆ ಹರಿಸಲಾಗುವುದುಈಶ್ವರ ಹಡಪದ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.