ADVERTISEMENT

ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿಲ್ಲ: ಸಚಿವ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 27 ಮೇ 2025, 11:17 IST
Last Updated 27 ಮೇ 2025, 11:17 IST
<div class="paragraphs"><p>ಪ್ರವಾಹ ಸಂಗ್ರಹ ಚಿತ್ರ</p></div>

ಪ್ರವಾಹ ಸಂಗ್ರಹ ಚಿತ್ರ

   

ಬೆಳಗಾವಿ: ‘ಜಿಲ್ಲೆಯಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದಾಗಿ ಕೃಷ್ಣಾ ನದಿ ಮತ್ತು ಅದರ ಉಪನದಿಗಳಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ಆದರೆ, ಪ್ರವಾಹ ಪರಿಸ್ಥಿತಿ ಉದ್ಭವಿಸಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಳೆಯಿಂದ ಕೆಲವು ರಸ್ತೆಗಳು ಹಾನಿಗೆ ಒಳಗಾಗಿವೆ. ರಾಜ್ಯದಾದ್ಯಂತ ವಿವಿಧ ಸ್ಥಳಗಳಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆಗಳಿಗೂ ಹಾನಿಯಾಗಿದ್ದು, ಭೂಕುಸಿತಗಳು ಕಂಡುಬಂದಿವೆ. ಮುಂದಿನ ಕೆಲವು ದಿನಗಳಲ್ಲಿ ಮಳೆ ಕಡಿಮೆಯಾಗುವ ನಿರೀಕ್ಷೆಯಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ. ಜೂನ್ 15ರ ನಂತರ ಮುಂಗಾರು ಹಂಗಾಮು ಆರಂಭವಾಗಲಿದೆ’ ಎಂದರು.

ADVERTISEMENT

‘ಮಳೆಯಿಂದ ಗೋಕಾಕದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಒಬ್ಬರು ಚರಂಡಿಯಲ್ಲಿ ಕೊಚ್ಚಿ ಹೋಗಿದ್ದರೆ, ಗೋಡೆ ಕುಸಿತದಿಂದ ಮಗು ಸಾವನ್ನಪ್ಪಿದೆ. ಮೃತರ ಸಂಬಂಧಿಕರಿಗೆ ಪರಿಹಾರ ನೀಡುವಂತೆ ತಹಶೀಲ್ದಾರ್‌ಗೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಬೆಳಗಾವಿ ತಾಲ್ಲೂಕಿನ ಗ್ರಾಮವೊಂದರ 72 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಎರಡಕ್ಕೇರಿದೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಪರಿಸ್ಥಿತಿ ಹತೋಟಿಯಲ್ಲಿದ್ದು, ಯಾರೂ ಆತಂಕಪಡಬೇಕಿಲ್ಲ. ಆದರೆ,  ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು’ ಎಂದರು.

‘ಹುಕ್ಕೇರಿಯ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷರ ಬದಲಾವಣೆಗೆ ಸಂಬಂಧಿಸಿ, ನಿರ್ದೇಶಕರೇ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಅದು ಅಂಗೀಕಾರವಾಗಿದೆ. ಇದು ಅವರ ಮಧ್ಯೆ ಇರುವ ಭಿನ್ನಾಭಿಪ್ರಾಯವೇ ಹೊರತು, ಇದರಲ್ಲಿ ನನ್ನ ಪಾತ್ರವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮಹದಾಯಿ ನದಿ ನೀರನ್ನು ತಿರುಗಿಸುವುದನ್ನು ಒಂದು ಗುಂಪು ವಿರೋಧಿಸಿದೆ. ಖಾನಾಪುರ ತಾಲ್ಲೂಕಿನ ಹೆಮ್ಮಡಗಾಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಈಚೆಗೆ ಭೇಟಿ ನೀಡಿದ್ದಾಗ, ಮನವಿ ಸಲ್ಲಿಸಿದೆ. ಈ ಬಗ್ಗೆ ಮಾತುಕತೆಗಾಗಿ ಬೆಂಗಳೂರಿಗೆ ಆಗಮಿಸುವಂತೆ ಅವರಿಗೆ ಸಚಿವರು ಆಹ್ವಾನ ಕೊಟ್ಟಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗೆ ಹೇಳುತ್ತೇವೆ. ನಮಗೆ ನೀರು ಮುಖ್ಯ’ ಎಂದು ತಿಳಿಸಿದರು.

ಮೈಸೂರು ಸ್ಯಾಂಡಲ್ ರಾಯಭಾರಿಯಾಗಿ ತಮನ್ನಾ ಭಾಟಿಯಾ ನೇಮಿಸಿದ ವಿಚಾರಕ್ಕೆ, ‘ಇದು ರಾಜ್ಯದ ವಿಷಯವೂ ಅಲ್ಲ. ಮಳೆಯೂ ಅಲ್ಲ. ಬರ ಪರಿಸ್ಥಿತಿಯೂ ಅಲ್ಲ. ಯಾರೋ ಸಾಬೂನು ಬಳಸುವವರು, ಯಾರೋ ಜಾಹೀರಾತು ಮಾಡುವವರು. ಏನು ಮಾಡುತ್ತೀರಿ?ಎಂದು ಹಾಸ್ಯ ಚಟಾಕಿ ಹಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.