ADVERTISEMENT

5 ವಲಯಗಳಲ್ಲಿ ಒಬ್ಬರೂ ಪ್ರವೇಶ ಪಡೆದಿಲ್ಲ!

ಆರ್‌ಟಿಇ: ಚಿಕ್ಕೋಡಿಯಲ್ಲಿ 462 ಸೀಟು

ಸುಧಾಕರ ಎಸ್.ತಳವಾರ, ಬೆಂಗಳೂರು
Published 21 ಮೇ 2019, 19:33 IST
Last Updated 21 ಮೇ 2019, 19:33 IST

ಚಿಕ್ಕೋಡಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 2019–20ನೇ ಸಾಲಿನಲ್ಲಿ ಆರ್‌ಟಿಇ (ಕಡ್ಡಾಯ ಶಿಕ್ಷಣ ಹಕ್ಕು) ಯೋಜನೆಯಡಿ ಒಟ್ಟು 1,465 ಉಚಿತ ಸೀಟುಗಳನ್ನು ಕಾಯ್ದಿಸಲಾಗಿದ್ದು, ಪ್ರಥಮ ಹಂತದಲ್ಲಿ 462 ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಮೊದಲ ಹಂತದಲ್ಲಿ ಎಲ್ಲ ಎಂಟು ವಲಯಗಳ ವ್ಯಾಪ್ತಿಯಲ್ಲಿ ಒಟ್ಟು 718 ಅರ್ಜಿಗಳು ಸಲ್ಲಿಕೆಯಾಗಿದ್ದು, 64 ವಿದ್ಯಾರ್ಥಿಗಳು 1ನೇ ತರಗತಿಗೆ ಪ್ರವೇಶ ಪಡೆದಿದ್ದಾರೆ.

ಗೋಕಾಕ ವಲಯದಲ್ಲಿ 129 ಸೀಟುಗಳು ಲಭ್ಯವಿದ್ದು, ಪ್ರಥಮ ಹಂತದಲ್ಲಿ 78 ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 197 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಇದುವರೆಗೆ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. ಅಥಣಿ ಮತ್ತು ಚಿಕ್ಕೋಡಿ ವಲಯದಲ್ಲಿ ತಲಾ 29 ವಿದ್ಯಾರ್ಥಿಗಳು ಪ್ರಥಮ ವರ್ಗಕ್ಕೆ ಆರ್‌ಟಿಇ ಅಡಿ ಪ್ರವೇಶ ಪಡೆದಿದ್ದಾರೆ. ಹುಕ್ಕೇರಿ, ಮೂಲಡಗಿ, ನಿಪ್ಪಾಣಿ ಮತ್ತು ರಾಯಬಾಗ ವಲಯಗಳಲ್ಲೂ ಇದುವರೆಗೆ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ.

ADVERTISEMENT

ಎಂಟು ವಲಯಗಳ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ 87, ಪರಿಶಿಷ್ಟ ಪಂಗಡದಿಂದ 15, ಪ್ರವರ್ಗ– 1ರಿಂದ 49, ಹಿಂದುಳಿದ ವರ್ಗ 2‘ಎ’ನಿಂದ 116, 2‘ಬಿ’ಯಿಂದ 159, 3‘ಎ’ನಿಂದ 5, 3ಬಿಯಿಂದ 227 ಅರ್ಜಿಗಳು ಸಲ್ಲಿಕೆಯಾಗಿವೆ.

‘ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 1,465 ಉಚಿತ ಸೀಟುಗಳನ್ನು ಆರ್‌ಟಿಇ ಅಡಿ ಕಾಯ್ದಿಸಲಾಗಿದೆ. ಮೊದಲ ಹಂತದಲ್ಲಿ 462 ಸೀಟುಗಳಿಗೆ ಅರ್ಜಿ ಕರೆಯಲಾಗಿದ್ದು, 718 ಅರ್ಜಿಗಳು ಬಂದಿವೆ. 64 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕೆಲವು ವಲಯಗಳಲ್ಲಿ ಇನ್ನೂ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಶಾಲೆಗೆ ಸೀಟು ಹಂಚಿಕೆ ಆಗಿದೆ. ಅವರು ಪ್ರತಿಷ್ಠಿತ ಸಂಸ್ಥೆಗಳ ಶಾಲೆಗೆ ಪ್ರವೇಶ ಪಡೆಯಲು ಬಯಸುತ್ತಾರೆ. ಪ್ರವೇಶ ಪಡೆಯಲು ನಿರಾಕರಿಸುತ್ತಿರುವುದಕ್ಕೆ ಈ ಆಂಶ ಕಾರಣವಾಗಿರಬಹುದು’ ಎಂದು ಡಿಡಿಪಿಐ ಎಂ.ಜಿ. ದಾಸರ ತಿಳಿಸಿದರು.

‘ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಇಲಾಖೆಯಿಂದ ಪ್ರಯತ್ನಿಸಲಾಗುತ್ತಿದೆ. ಆರ್‌ಟಿಇ ಅಡಿ ಎರಡು ಹಂತದಲ್ಲಿ ನಿಗದಿಯಾಗಿರುವ ಸೀಟುಗಳು ತುಂಬದೇ ಇದ್ದಲ್ಲಿ ಮೂರನೇ ಹಂತದಲ್ಲಿ ಅರ್ಜಿಗಳನ್ನು ಕರೆದು ಸೀಟುಗಳಿಗೆ ಪ್ರವೇಶ ನೀಡಲಾಗುವುದು’ ಹೇಳಿದರು.

ಅಂಕಿ–ಅಂಶ
ವಲಯ; ಲಭ್ಯ ಸೀಟು; ಸಲ್ಲಿಕೆಯಾದ ಅರ್ಜಿ; ಪ್ರವೇಶ ಪಡೆದವರು

ಅಥಣಿ; 51;105;29
ಚಿಕ್ಕೋಡಿ; 98;132;29
ಗೋಕಾಕ; 78;197;00
ಹುಕ್ಕೇರಿ; 65;75;00
ಕಾಗವಾಡ; 41;67;06
ಮೂಡಲಗಿ; 57;69;00
ನಿಪ್ಪಾಣಿ; 08;08;00
ರಾಯಬಾಗ; 64;65;00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.