ADVERTISEMENT

39 ಸಾಂಸ್ಕೃತಿಕ ಸಂಘಗಳಿಗೆ ಇಲ್ಲ ಸಹಾಯಧನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2023, 2:50 IST
Last Updated 7 ಡಿಸೆಂಬರ್ 2023, 2:50 IST
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ   

ಸಂಕೇಶ್ವರ: 2022–23ನೇ ಸಾಲಿನಲ್ಲಿ ಸ್ವಂತ ಖರ್ಚಿನಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿರುವ ಬೆಳಗಾವಿ, ಉತ್ತರಕನ್ನಡ ಮತ್ತು ಬಾಗಲಕೋಟೆ ಜಿಲ್ಲೆಗಳ 39 ಸಾಂಸ್ಕೃತಿಕ ಸಂಘಗಳಿಗೆ ಕಳೆದ ಎಂಟು ತಿಂಗಳಿಂದ ಧನ ಸಹಾಯವು ಬಾರದೇ ಕಲಾವಿದರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಈ ಹಿಂದೆ ಪ್ರತಿ ವರ್ಷವೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇವಾ ಸಿಂಧುವಿನ ಮೂಲಕ ಸಾಂಸ್ಕೃತಿಕ ಸಂಘಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಧನ ಸಹಾಯ ಬಿಡುಗಡೆ ಮಾಡುತ್ತಿತ್ತು. ಆದರೆ, ಈ ವರ್ಷ ನಿಯಮವನ್ನು ಪರಿಷ್ಕರಿಸಿದ ಇಲಾಖೆಯು ‘ಮೊದಲು ನೀವು ಕಾರ್ಯಕ್ರಮ ಮಾಡಿ, ನಾವು ಅದನ್ನು ಪರಿಶೀಲಿಸಿ ಧನ ಸಹಾಯ ಬಿಡುಗಡೆ ಮಾಡುತ್ತೇವೆ’ ಎಂದು ಲಿಖಿತವಾಗಿ ತಿಳಿಸಿತ್ತು.

ಆದರ ಪ್ರಕಾರ ರಾಜ್ಯದ ಎಲ್ಲ ಕಡೆಗೆ ಸಾಂಸ್ಕೃತಿಕ ಸಂಘಗಳು ಸ್ವಂತ ಖರ್ಚಿನಿಂದ ಕಾರ್ಯಕ್ರಮ ಮಾಡಿ, ಮಾರ್ಚ್‌ ಒಳಗಾಗಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ, ಫೋಟೊ, ಪತ್ರಿಕಾ ವರದಿ ಹಾಗೂ ಕಲಾವಿದರಿಗೆ ಆರ್.ಟಿ.ಜಿ.ಎಸ್ ಮೂಲಕ ಸಂಭಾವನೆ ಪಾವತಿ ಮಾಡಿದ ವಿವರವನ್ನು ಇಲಾಖೆಗೆ ಸಲ್ಲಿಸಿವೆ. ಮಾರ್ಚ್‌ ಒಳಗಾಗಿ ಶೇ60ರಷ್ಟು ಸಂಘಗಳಿಗೆ ಮಾತ್ರ ಧನಸಹಾಯ ದೊರೆತಿದೆ. ಇನ್ನುಳಿದ ಸಂಘಗಳಿಗೆ ಧನಸಹಾಯ ಈವರೆಗೂ ಬಿಡುಗಡೆ ಆಗಿಲ್ಲ.

ADVERTISEMENT

ಕಿತ್ತೂರು ಕರ್ನಾಟಕ ಭಾಗಕ್ಕೆ ಅನ್ಯಾಯ: ಕಿತ್ತೂರು ಕರ್ನಾಟಕ ಭಾಗದಲ್ಲಿ ಬೆಳಗಾವಿ ಜಿಲ್ಲೆಯ 16 ಸಾಂಸ್ಕೃತಿಕ ಸಂಘಗಳಿಗೆ ₹46 ಲಕ್ಷ, ಉತ್ತರ ಕನ್ನಡ ಜಿಲ್ಲೆಯ 17 ಸಂಘಗಳಿಗೆ, ಬಾಗಲಕೋಟೆ ಜಿಲ್ಲೆಯ 6 ಸಂಘಗಳಿಗೂ ಧನಸಹಾಯವು ಬರಬೇಕಿದೆ.

ಈ ಕುರಿತು ಏಪ್ರಿಲ್‌ನಿಂದ ಇಲ್ಲಿಯವರೆಗೂ; ಅಂದರೆ 8 ತಿಂಗಳಿನಿಂದ ಕಲಾವಿದರು ಬೆಂಗಳೂರಿಗೆ ಅಲೆಯುತ್ತಲೇ ಇದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಮನವಿ ಅರ್ಪಿಸಿದರೂ ಯಾವುದೇ ಧನಸಹಾಯವು ಬಿಡುಗಡೆ ಆಗಿಲ್ಲ. ಸಾಲ ಸ್ವಂತ ಖರ್ಚಿನಿಂದ ಕಾರ್ಯಕ್ರಮ ಮಾಡಿದವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

‘ಫೈಲುಗಳನ್ನು ಸಚಿವರಿಗೆ ಕಳುಹಿಸಿದ್ದೇವೆ. ಅವರು ಇದುವರೆಗೂ ಅನುಮೋದಿಸಿಲ್ಲ. ಅನುಮೋದನೆ ಸಿಕ್ಕ ನಂತರ ಧನ ಸಹಾಯವನ್ನು ಬಿಡುಗಡೆ ಮಾಡುತ್ತೇವೆ ಎಂದು ಇಲಾಖೆಯ ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ’ ಎಂಬುದು ಕಲಾವಿದರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.