ಬೆಳಗಾವಿ: ‘ಈ ಬಾರಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ರಾಜಕಾರಣ ಬದಿಗಿರಿಸಿ, ಈ ಭಾಗದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಬೇಕು’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿದ ಬಿಜೆಪಿ ಅಧಿಕಾರವಧಿಯಲ್ಲೇ ರೈತರ ಹೋರಾಟಗಳನ್ನು ಹೆಚ್ಚಾಗಿ ಹತ್ತಿಕ್ಕಲಾಗಿದೆ. ಆದರೆ, ಈಗ ಬಿಜೆಪಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅವರಿಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇಲ್ಲ. ರೈತರ ಬಗ್ಗೆ ಮಾತನಾಡಲು ಬಿಜೆಪಿ ನೈತಿಕತೆ ಇಲ್ಲ’ ಎಂದರು.
‘ನಾವು ಅಧಿಕಾರ ಹಿಡಿದಾಗ, ವಿವಿಧ ಹುದ್ದೆಗಳ ನೇಮಕ ಪ್ರಕ್ರಿಯೆಗಳನ್ನು ಹೆಚ್ಚಾಗಿ ಕೈಗೊಂಡಿದ್ದೇವೆ. ಈಗ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ನಾವು ಅಖಂಡ ಕರ್ನಾಟಕದ ಚಿಂತನೆಯಲ್ಲಿದ್ದು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚಿಸಬೇಕು ಎಂಬ ಬೇಡಿಕೆಯೇ ಈಗ ಅಪ್ರಸ್ತುತ. ಬೆಳಗಾವಿ ಜಿಲ್ಲೆ ವಿಭಜಿಸುವ ಕುರಿತು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ಮಧ್ಯೆ ಚರ್ಚೆಯಾಗಿದೆ. ಜಿಲ್ಲೆಯ ಎಲ್ಲ ಕ್ಷೇತ್ರಗಳ ಸ್ಥಳೀಯ ಶಾಸಕರೊಂದಿಗೂ ಚರ್ಚಿಸಿ, ಆಡಳಿತ ದೃಷ್ಟಿಯಿಂದ ಉತ್ತಮ ನಿರ್ಣಯವನ್ನು ಸರ್ಕಾರ ಕೈಗೊಳ್ಳುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.