ADVERTISEMENT

ಬೆಳಗಾವಿ: ಹಳ್ಳಿಗಳಲ್ಲಿ ಮನೆ ಮಾಡಿದ ಶೀಗಿಹುಣ್ಣಿಮೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 7:58 IST
Last Updated 9 ಅಕ್ಟೋಬರ್ 2022, 7:58 IST
   

ಬೆಳಗಾವಿ: ರೈತಾಪಿ ಜನರ ಹಬ್ಬ ಶೀಗಿಹುಣ್ಣಿಮೆ ಅಂಗವಾಗಿ ಭಾನುವಾರ ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮೈದುಂಬಿ ನಿಂತ ಹೊಲದಲ್ಲಿ ಚರಗ ಚೆಲ್ಲುವ ಮೂಲಕ ಗ್ರಾಮೀಣ ಜನ ಭೂತಾಯಿಗೆ 'ಮೊದಲ ತುತ್ತು' ನೀಡುವ ಸಂಪ್ರದಾಯ ಆಚರಿಸಿದರು.

ನಸುಕಿನಲ್ಲಿ ಎದ್ದು ಲಗುಬಗೆಯಲ್ಲಿ ಹಬ್ಬದ ಸಿದ್ಧತೆ ಮಾಡಿಕೊಂಡ ರೈತರು ಸೂರ್ಯೋದಯ ವಾಗುತ್ತಿದ್ದಂತೆ ಹೊಲದತ್ತ ಹೆಜ್ಜೆ ಹಾಕಿದರು.

ಪುರುಷರು ಎತ್ತುಗಳ ಮೈ ತೊಳೆದು, ಬಣ್ಣ ಹಚ್ಚಿ ಅಲಂಕಾರ ಮಾಡಿದರು. ಕೃಷಿ ಉಪಕರಣಗಳನ್ನು ಪೂಜಿಸಿ ಹೊಲಗಳತ್ತ ಹೆಜ್ಜೆ ಹಾಕಿದರು.

ADVERTISEMENT

ಮಹಿಳೆಯರು ಕೂಡ ನಸುಕಿನ 5ಕ್ಕೆ ಎದ್ದು ಹಬ್ಬದ ತಯಾರಿ ಮಾಡಿಕೊಂಡರು. ಹುರಕ್ಕಿ ಹೋಳಿಗೆ, ಗೋಧಿ ಹುಗ್ಗಿ, ಒಡೆ, ಸಜ್ಜಿರೊಟ್ಟಿ, ಚಪಾತಿ, ಮೊಸರುಗಾಯಿ, ಮೊಸರನ್ನ, ಕಟ್ಟಿನ ಸಾಂಬಾರ, ಮುಳಗಾಯಿ ಪಲ್ಯ, ಕೆಂಪುಖಾರ,ಹೆಸರುಕಾಳು, ಶೇಂಗಾ, ಪುಟಾಣಿ ಚಟ್ನಿ, ಪುಂಡಿಪಲ್ಯ, ಕರ್ಚಿಗಾಯಿ, ಶೇಂಗಾ ಹೋಳಿಗೆ... ಹೀಗೆ ಬಗೆಬಗೆಯ ಖಾದ್ಯಗಳನ್ನು ಸಿದ್ಧಪಡಿಸಿದರು.

ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ಬೆಳೆಗೆ ಪೂಜೆ ಸಲ್ಲಿಸಿದರು. ಪೈರಿನ ಮಧ್ಯೆ ಜೋಳದ ದಂಟು, ಕಬ್ಬಿನ ಜಲ್ಲೆಗಳಿಂದ ಪುಟ್ಟ ಮಂಟಪ ಸಿದ್ಧಪಡಿಸಿದರು. ಅದರಲ್ಲಿ ಭೂತಾಯಿಗೆ ಪೂಜೆ ಸಲ್ಲಿಸಿದರು.

ನಂತರ ಬಗೆಬಗೆಯ ಅಡುಗೆಯ ನೈವೇದ್ಯ ಮಾಡಿ, ಹೊಲದ ತುಂಬ ಚರಗ ಚೆಲ್ಲಿದರು. ಈ ಬಾರಿ ಉತ್ತಮ ಇಳುವರಿ ಕೊಡು ತಾಯಿ ಎಂದು ಪ್ರಾರ್ಥಿಸಿದರು. ಅನ್ನ ನೀಡುವ ಭೂ ತಾಯಿಗೆ ಮೊದಲ ತುತ್ತು ನೀಡುವ ಸಂಪ್ರದಾಯದ ಅಂಗವಾಗಿ ಈ ಚರಗ ಆಚರಣೆ ಮಾಡಿದರು.

ಬೈಲಹೊಂಗಲದ ಅಜ್ಜಪ್ಪ ಬಡ್ಡಿಮನಿ ಅವರು ಕುಟುಂಬದೊಂದಿಗೆ ಶೀಗಿಹುಣ್ಣಿಮೆ ಆಚರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡದ್ದು ಹೀಗೆ

ಬೈಲಹೊಂಗಲ ತಾಲ್ಲೂಕಿನಲ್ಲೂ ವೈಭವ
ಬೈಲಹೊಂಗಲ
: ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ರೈತರು ಜಮೀನುಗಳಿಗೆ ತೆರಳಿ ಪೂಜೆ ಸಲ್ಲಿಸಿ, ಚರಗ ಚೆಲ್ಲುವ ಮೂಲಕ ಶೀಗಿ ಹುಣ್ಣಿಮೆಯನ್ನು ಭಾನುವಾರ ಸಡಗರ, ಸಂಭ್ರಮದಿಂದ ಆಚರಿಸಿದರು.

ಮನೆಗಳಲ್ಲಿ ಬೆಳಿಗ್ಗೆ ಎತ್ತುಗಳ ಮೈ ತೊಳೆದು ಎತ್ತುಗಳ ಕೋಡಂಚು ಹಾಕಿ, ಮೈಗೆ ಜೂಲಾ ಹೊದಿಸಿ, ಕೊರಳಿಗೆ ಗೆಜ್ಜೆಯ ಜತ್ತಿಗೆ ಕಟ್ಟಿ ಅಂದವಾಗಿ ಅಲಂಕರಿಸಿದರು.

ಹೊಸಬಟ್ಟೆಯುಟ್ಟು ಕುಟುಂಬ ಸಮೇತ, ತಮ್ಮ ಬಂಧು ಬಳಗದೊಂದಿಗೆ ಎತ್ತಿನ ಗಾಡಿ, ಟ್ರ್ಯಾಕ್ಟರ್ ಗಳಲ್ಲಿ ಹೊಲಕ್ಕೆ ತೆರಳಿ ಬನ್ನಿ, ಬೇವಿನ ಮರಕ್ಕೆ ಹಸಿರು ಸೀರೆ ಉಡಿಸಿ, ಹಸಿರು ಬಳೆ ತೊಡಿಸಿ, ಉಡಿ ತುಂಬಿ ಪೂಜೆ ಸಲ್ಲಿಸಿ ಉತ್ತಮ ಬೆಳೆ ಬರಲೆಂದು ಪ್ರಾರ್ಥಿಸಿದರು.

ವಿವಿಧ ಬಗೆಯ ಪದಾರ್ಥಗಳೊಂದಿಗೆ ಕುಟುಂಬ ಸಮೇತರಾಗಿ ಹೊಲದಲ್ಲೇ ಭೂರಿ ಭೋಜನ‌ ಸವಿದರು. ಮಕ್ಕಳು, ಯುವಕರು ಹೊಲದಲ್ಲಿ ಗಾಳಿಪಟ ಹಾರಿಸಿ ಸಂಭ್ರಮಿಸಿದರು.

ಚಕ್ಕಡಿ ಕಟ್ಟಿಕೊಂಡು ಹೊಲಕ್ಕೆ ಹೊರಟ ಬೈಲಹೊಂಗಲ ರೈತ ಶಿವಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.