ADVERTISEMENT

38 ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 16:00 IST
Last Updated 18 ಜೂನ್ 2019, 16:00 IST

ಬೆಳಗಾವಿ: ‘ರೈತರ ಬಿಲ್‌ ಬಾಕಿ ಉಳಿಸಿಕೊಂಡಿರುವ ರಾಜ್ಯದ 38 ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್‌ ನೀಡಲಾಗಿದ್ದು, ತಿಂಗಳ ಅಂತ್ಯದೊಳಗೆ ಹಣ ಪಾವತಿಸುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ, ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ಸಕ್ಕರೆ ಸಚಿವ ಆರ್‌.ಬಿ. ತಿಮ್ಮಾಪೂರ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸಭೆ ನಡೆಸಿದಾಗ ಕಾರ್ಖಾನೆಗಳು ₹ 1,100 ಕೋಟಿ ರೈತರ ಬಿಲ್‌ ಉಳಿಸಿಕೊಂಡಿದ್ದವು. ಅದರಲ್ಲಿ ಈಗ ₹ 62 ಕೋಟಿ ಪಾವತಿ ಮಾಡಲಾಗಿದ್ದು, ₹ 1,038 ಕೋಟಿ ಬಾಕಿ ಉಳಿದಿದೆ’ ಎಂದು ನುಡಿದರು.

‘ಈಗಾಗಲೇ ರಾಜ್ಯದಲ್ಲಿ ಶೇ 91.88ರಷ್ಟು ಕಬ್ಬು ಬೆಳೆಗಾರರಿಗೆ ಹಣ ಪಾವತಿಸಲಾಗಿದೆ. ಇನ್ನುಳಿದ ಬೆಳೆಗಾರರಿಗೂ ಹಣ ಪಾವತಿಸುವಂತೆ ಕಾರ್ಖಾನೆಯವರಿಗೆ ತಿಳಿಸಿದ್ದೇವೆ. ಹಣ ಪಾವತಿಸದಿದ್ದರೆ, ಕಾರ್ಖಾನೆಯಲ್ಲಿರುವ ಸಕ್ಕರೆಯನ್ನು ಹರಾಜು ಹಾಕಿಯಾದರೂ ರೈತರಿಗೆ ಹಣ ಪಾವತಿಸುತ್ತೇವೆ. ನಮ್ಮದು ರೈತ ಪರ ಸರ್ಕಾರ’ ಎಂದು ಘೋಷಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.