ADVERTISEMENT

ಶಾಸಕರಾಗಲು ಒಬಿಸಿಯವರು ಶಕ್ತರಾಗಬೇಕು: ಕೆ.ಎಸ್. ಈಶ್ವರಪ್ಪ ಕರೆ

ಕಾರ್ಯಕರ್ತರಿಗೆ ಸಚಿವ ಕೆ.ಎಸ್. ಈಶ್ವರಪ್ಪ ಕರೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 14:09 IST
Last Updated 28 ನವೆಂಬರ್ 2021, 14:09 IST
ಬೆಳಗಾವಿಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಭಾನುವಾರ ಆಯೋಜಿಸಿದ್ದ ಸಭೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರು. ಅಧ್ಯಕ್ಷ ನರೇಂದ್ರಬಾಬು ಮೊದಲಾದವರು ಇದ್ದಾರೆ
ಬೆಳಗಾವಿಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಭಾನುವಾರ ಆಯೋಜಿಸಿದ್ದ ಸಭೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರು. ಅಧ್ಯಕ್ಷ ನರೇಂದ್ರಬಾಬು ಮೊದಲಾದವರು ಇದ್ದಾರೆ   

ಬೆಳಗಾವಿ: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಜಿಲ್ಲೆಯಿಂದ ಒಬ್ಬರಾದರೂ ಒಬಿಸಿ (ಇತರ ಹಿಂದುಳಿದ ವರ್ಗ) ನಾಯಕರು ಶಾಸಕರಾಗಿ ಆಯ್ಕೆ ಆಗಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು. ಸಂಘಟನೆ ಬಲಗೊಳಿಸಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಇಲ್ಲಿನ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಿಂದ ಭಾನುವಾರ ನಡೆದ ಪಕ್ಷದ ಬೆಳಗಾವಿ ಮಹಾನಗರ, ಗ್ರಾಮೀಣ ಹಾಗೂ ಚಿಕ್ಕೋಡಿ ಜಿಲ್ಲಾ ಘಟಕಗಳ ಹಿಂದುಳಿದ ವರ್ಗಗಳ ಪ್ರಮುಖರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಒಬಿಸಿಯವರು ಲಭ್ಯವಿರುವ ಸೌಲಭ್ಯ, ಸ್ಥಾನಮಾನಗಳನ್ನು ಪಡೆದುಕೊಳ್ಳಲು ಮುಂದೆ ಬರಬೇಕು’ ಎಂದು ತಿಳಿಸಿದರು.

ADVERTISEMENT

‘ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 310 ಬಿಜೆಪಿ ಮಂಡಳ‌ಗಳಿವೆ. ಪ್ರತಿ‌ ಮಂಡಳ‌ದಲ್ಲಿ ಇಬ್ಬರು ಮಹಿಳೆಯರು ಸೇರಿ 8 ಒಬಿಸಿ ನಾಯಕರನ್ನು ಸಂಘಟಿಸಬೇಕು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.12ರಂದು ನಡೆಯುವ ಪ್ರಮುಖರ ಸಭೆಗೆ ಒಟ್ಟು 3,500 ಜನರು ಹಾಜರಾಗಬೇಕು. ಇದು ಶಕ್ತಿ ಪ್ರದರ್ಶನ ಅಲ್ಲ. ಸಂಘಟನೆ ಮೂಲಕ ಹಿಂದುಳಿದವರು ಸೌಲಭ್ಯ ಪಡೆಯಲು ಜಾಗೃತಿ ಮೂಡಿಸುವ ಸಮಾವೇಶವಾಗಿದೆ. ಜೊತೆಗೆ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಉದ್ದೇಶವೂ ಇದೆ’ ಎಂದು ತಿಳಿಸಿದರು.

‘ಡಿ.12ರ ಬಳಿಕ ಒಬಿಸಿಯವರಿಗೆ ಸರ್ಕಾರ ಹಲವು ಯೋಜನೆ ಜಾರಿಗೊಳಿಸಲಿದೆ. ಅವುಗಳನ್ನು ಪಡೆಯುವ ಬಗ್ಗೆ ಅರಿವು ಮೂಡಿಸಲಾಗುವುದು. ಮೋರ್ಚಾದಿಂದ ಹಿಂದುಳಿದ ವರ್ಗಗಳ ಬಡವರಿಗೆ ನ್ಯಾಯ ಕೊಡಿಸುತ್ತೇವೆ. ಬಿಜೆಪಿ ಬಡವರ ಋಣ ತೀರಿಸುತ್ತಿದೆ’ ಎಂದರು.

‘ಕಾಂಗ್ರೆಸ್‌ನವರು ಒಬಿಸಿ ಮತ ಪಡೆದು ಅವರಿಗೆ ನ್ಯಾಯ ಕೊಡಿಸಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ. ನರೇಂದ್ರ ಬಾಬು ಮಾತನಾಡಿ, ‘ರಾಜ್ಯದಲ್ಲಿ ಶೇ.55ರಷ್ಟು ಹಿಂದುಳಿದ ವರ್ಗದವರಿದ್ದೇವೆ. ಸಂಘಟನೆ ಕೊರತೆಯಿಂದ ನಮಗೆ ಸರಿಯಾದ ಸ್ಥಾನಮಾನಗಳು ದೊರೆತಿಲ್ಲ. ಸಂಖ್ಯಾಬಲವಿದ್ದರೂ, ಕೇವಲ‌ ಮತ ಬ್ಯಾಂಕ್ ಆಗಿದ್ದೇವೆ. ಹೋರಾಟದ ಮೂಲಕ ಸೌಲಭ್ಯ ಪಡೆದುಕೊಳ್ಳಬೇಕಾಗಿದೆ’ ಎಂದರು.

ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ ಸುರಾನ ಮಾತನಾಡಿದರು. ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ‌, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಕ್ಣ್ಮಣ ತಪಸಿ, ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ಬಾಬು, ವಿವೇಕಾನಂದ ಡಬ್ಬಿ, ರಾಜ್ಯ ಕಾರ್ಯದರ್ಶಿ ಸತೀಶ ಸೇಜವಾಡಕರ, ನಗರ ಅಧ್ಯಕ್ಷ ವಿಜಯ ಕದಂ, ಮೋರ್ಚಾದ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ ಶೆಲಪ್ಪಗೋಳ, ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಮೋಳದವರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.