ಬೆಳಗಾವಿ: ಪೊಲೀಸ್ ಠಾಣೆಯ ಮೆಟ್ಟಿಲೇರುವ ನೊಂದ ಮಹಿಳೆಯರಿಗೆ ಒಂದೇ ಸೂರಿನಡಿ ಪೊಲೀಸ್ ಸಹಾಯ, ಕಾನೂನು ನೆರವು ಹಾಗೂ ಆಶ್ರಯ ನೀಡುವ ‘ಒನ್ ಸ್ಟಾಪ್ ಸರ್ವಿಸ್ ಸೆಂಟರ್’ ಅನ್ನು ಇಲ್ಲಿನ ಕ್ಯಾಂಪ್‌ನಲ್ಲಿರುವ ಮಹಿಳಾ ಠಾಣೆಯಲ್ಲಿ ಆರಂಭಿಸಲಾಗಿದೆ.
ಕೌಟುಂಬಿಕ ಅಥವಾ ವೈವಾಹಿಕ ಸಮಸ್ಯೆಗೆ ಸಿಲುಕಿದ ನೊಂದ ಮಹಿಳೆ ಇಲ್ಲಿಗೆ ಬಂದರೆ ಕಾನೂನು ನೆರವಿನ ಜೊತೆ ಎರಡು ದಿನಗಳವರೆಗೆ ವಸತಿ ವ್ಯವಸ್ಥೆ ನೀಡಲಾಗುತ್ತದೆ. ಪ್ರತ್ಯೇಕ ಬಟ್ಟೆಗಳು, ಆಹಾರ, ಔಷಧೋಪಚಾರ, ಕೌನ್ಸಿಲಿಂಗ್ ಹಾಗೂ ಉಚಿತ ಕಾನೂನು ಸಲಹೆ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡಲಾಗುತ್ತದೆ.
ಈ ಕೇಂದ್ರದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಜೊತೆ ಒಬ್ಬರು ವೈದ್ಯರು, ಇಬ್ಬರು ಸಮಾಲೋಚಕರು, ಇಬ್ಬರು ಕಾನೂನು ಸಲಹೆಗಾರರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಇರುತ್ತಾರೆ. ಅಗತ್ಯ ಬಿದ್ದರೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕೂಡ ಕೇಂದ್ರಕ್ಕೆ ಬಂದು ಸಹಾಯ ಮಾಡಲಿದ್ದಾರೆ. ಈ ಅಧಿಕಾರಿಗಳನ್ನು ಹುಡುಕಿಕೊಂಡು ನೊಂದ ಮಹಿಳೆ ಅಲೆದಾಡಬೇಕಾಗಿಲ್ಲ.
ತಪ್ಪಿದ ಅಲೆದಾಟ:
ಈ ಮೊದಲು ನೊಂದ ಮಹಿಳೆ ಠಾಣೆಗೆ ಬಂದಾಗ, ಪ್ರಕರಣ ದಾಖಲಿಸಿಕೊಂಡು ಸಮಾಲೋಚನಾ ಕೇಂದ್ರಗಳಿಗೆ ಕಳುಹಿಸಲಾಗುತ್ತಿತ್ತು. ಅದು ವಿಫಲವಾದಾಗ ಪುನಃ ಠಾಣೆಗೆ ಬರಬೇಕಾಗುತ್ತಿತ್ತು. ಈಗ ಕೇಂದ್ರದಲ್ಲಿಯೇ ಸಮಾಲೋಚಕರು ಇರುವುದರಿಂದ ಮಹಿಳೆಯು ಅಲ್ಲಿ– ಇಲ್ಲಿ ಅಲೆಯಬೇಕಾಗಿಲ್ಲ. ಕೇಂದ್ರದಲ್ಲಿಯೇ ಅವರ ಸಮಾಲೋಚನೆ ನಡೆಯುತ್ತದೆ.
ಮಹಿಳೆಯ ಮೇಲೆ ಅತ್ಯಾಚಾರ, ಹಲ್ಲೆ ಅಥವಾ ದೈಹಿಕ ತೊಂದರೆಯಾಗಿದ್ದರೆ ವೈದ್ಯಕೀಯ ತಪಾಸಣೆ ಮಾಡಿಸಲು ಮತ್ತು ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗೆ ಹೋಗಬೇಕಾಗುತ್ತಿತ್ತು. ಇದನ್ನು ತಪ್ಪಿಸಲು ಸರ್ಕಾರಿ ವೈದ್ಯರೇ ಈಗ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ತಪಾಸಣೆ ಮಾಡುತ್ತಾರೆ. ಚಿಕಿತ್ಸೆಯನ್ನೂ ನೀಡುತ್ತಾರೆ.
ದೂರುದಾರ ಮಹಿಳೆಯು ತನ್ನ ಮನೆಯವರಿಂದ ತಿರಸ್ಕರಿಸಲ್ಪಟ್ಟ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿಯೇ ಆಶ್ರಯ ಪಡೆಯಬೇಕಾಗುತ್ತಿತ್ತು. ಈಗ ಕೇಂದ್ರದಲ್ಲಿ ಪ್ರತ್ಯೇಕವಾಗಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಾಸಿಗೆ, ತಲೆದಿಂಬು, ಪ್ರತ್ಯೇಕ ಹೊದಿಕೆ, ಬಟ್ಟೆ ಸೇರಿದಂತೆ ದಿನಬಳಕೆಯ ವಸ್ತುಗಳನ್ನು ನೀಡಲಾಗುತ್ತಿದೆ. ಮಹಿಳೆಯ ಜೊತೆ ಮಕ್ಕಳೂ ಬಂದಿದ್ದರೆ ಅವರಿಗೂ ಇವೆಲ್ಲ ಸವಲತ್ತುಗಳನ್ನು ನೀಡಲಾಗುತ್ತದೆ. ಮಕ್ಕಳಿಗೆ ಆಟವಾಡಲು ಆಟಿಕೆ ವಸ್ತುಗಳನ್ನು ನೀಡಲಾಗುತ್ತದೆ.
ಸರ್ಕಾರದ ಆದೇಶ:
ಜಿಲ್ಲಾ ಕೇಂದ್ರಗಳಲ್ಲಿರುವ ಮಹಿಳಾ ಪೊಲೀಸ್ ಠಾಣೆಗಳನ್ನು ಒನ್ ಸ್ಟಾಪ್ ಸರ್ವಿಸ್ ಸೆಂಟರ್‌ಗಳನ್ನಾಗಿ ಮೇಲ್ದರ್ಜೆಗೇರಿಸಲು ಕಳೆದ 2018–19ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಘೋಷಣೆ ಮಾಡಿತ್ತು. ಅದರಂತೆ ನಗರ ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ ನೇತೃತ್ವದಲ್ಲಿ ನಗರದ ಮಹಿಳಾ ಠಾಣೆಯಲ್ಲಿ ಒನ್ ಸ್ಟಾಪ್ ಸರ್ವಿಸ್ ಸೆಂಟರ್ ಸ್ಥಾಪಿಸಲಾಗಿದೆ. ದೂರವಾಣಿ ಸಂಖ್ಯೆ 0831– 2405253 ಅಥವಾ ಮಹಿಳಾ ಪೊಲೀಸ್ ಇನ್‌ಸ್ಪೆಕ್ಟರ್ 9480804049 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.