ADVERTISEMENT

ಖಾನಾಪುರ: ಬಾಂಧ್ಯವ್ಯ ಬೆಸೆಯುತ್ತಿವೆ ‘ಒಂದು ಗ್ರಾಮ, ಒಂದು ಗಣಪ’

ಪ್ರಸನ್ನ ಕುಲಕರ್ಣಿ
Published 30 ಆಗಸ್ಟ್ 2025, 5:40 IST
Last Updated 30 ಆಗಸ್ಟ್ 2025, 5:40 IST
ಖಾನಾಪುರ ತಾಲ್ಲೂಕು ನಂದಗಡದಲ್ಲಿ ಪ್ರತಿಷ್ಠಾಪನೆಗೊಂಡ ಗಣಪತಿ.
ಖಾನಾಪುರ ತಾಲ್ಲೂಕು ನಂದಗಡದಲ್ಲಿ ಪ್ರತಿಷ್ಠಾಪನೆಗೊಂಡ ಗಣಪತಿ.   

ಖಾನಾಪುರ: ಶಾಂತಿ, ಸೌಹಾರ್ದತೆ, ಸಹಬಾಳ್ವೆಯ ಸಂದೇಶ ಸಾರುವ ಗಣೇಶೋತ್ಸವ ಈಚೆಗೆ ಪ್ರತಿಷ್ಠೆ, ಆಡಂಭರ, ತೋರ್ಪಡೆಗಳ ಪ್ರತೀಕವಾಗತೊಡಗಿದೆ.

ರಾಜ್ಯದ ಎರಡನೇ ರಾಜಧಾನಿ ಬೆಳಗಾವಿ ಸೇರಿದಂತೆ ಹಲವೆಡೆಗಳಲ್ಲಿ ವರ್ಷದಿಂದ ವರ್ಷಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುವ ಪದ್ಧತಿ ಹೆಚ್ಚಾಗತೊಡಗಿದೆ.

ಆದರೆ, ತಾಲ್ಲೂಕಿನ ಹಲವು ಗ್ರಾಮಗಳು ಇಂದಿಗೂ ಒಂದು ಗ್ರಾಮ ಒಂದು ಗಣಪ ನಿಯಮ ಪಾಲನೆಯಲ್ಲಿ ಮುಂದಿದ್ದು, ಗ್ರಾಮದ ಹಿರಿಯರು ಮುಂಚಿನಿಂದಲೂ ಹಾಕಿಕೊಟ್ಟ ಪದ್ಧತಿಯನ್ನು ಆಯಾ ಗ್ರಾಮಗಳ ಇಂದಿನ ಪೀಳಿಗೆಯ ಜನರು ಶೃದ್ಧಾಭಕ್ತಿಯಿಂದ ಮುಂದುವರೆಸಿಕೊಂಡು ಹೊರಟಿದ್ದಾರೆ.

ADVERTISEMENT

’ಒಂದು ಗ್ರಾಮ ಒಂದು ಗಣಪ’ ಪ್ರತಿಷ್ಠಾಪನೆಯಲ್ಲಿ ತಾಲ್ಲೂಕಿನ ದೊಡ್ಡ ಗ್ರಾಮ, ಸಂಗೊಳ್ಳಿ ರಾಯಣ್ಣನ ಕರ್ಮಭೂಮಿ ನಂದಗಡ ಒಂದು ಹೆಜ್ಜೆ ಮುಂದಿದೆ. ನಂದಗಡದಲ್ಲಿ ಕಳೆದ 85 ವರ್ಷಗಳಿಂದ ಈ ನಿಮಯವನ್ನು ಅನುಸರಿಸಿಕೊಂಡು ಬರಲಾಗಿದೆ. ಜೊತೆಗೆ ಕದಂಬ ಅರಸರ ಎರಡನೇ ರಾಜಧಾನಿಯಾಗಿದ್ದ ಐತಿಹಾಸಿಕ ಗ್ರಾಮ ಹಲಸಿಯೂ ಈ ಪದ್ಧತಿಯನ್ನು ಬಹಳ ವರ್ಷಗಳಿಂದ ಮುಂದುವರೆಸಿಕೊಂಡು ಬರುತ್ತಿದೆ.

ಗುಂಡಪಿ, ಗೋಲ್ಯಾಳಿ, ಚಿಕ್ಕ ಅಂಗ್ರೊಳ್ಳಿ, ಹಲಗಾ, ಕರ್ಜಗಿ, ಹತ್ತರವಾಡ, ಬಸ್ತವಾಡ, ಮೇಂಡೆಗಾಳಿ, ಹಲಸಾಲ, ಬಾಚೋಳಿ, ವಿಶ್ರಾಂತವಾಡಿ, ನಾಗುರ್ಡಾ, ನಾಗುರ್ಡಾ ವಾಡಾ, ಮೊದೆಕೊಪ್ಪ, ಒತ್ತೋಳಿ, ಕಾನಸೂಲಿ, ಅಲ್ಲೋಳಿ, ಮಳವ, ದೇವರಾಯಿ, ಕರಂಜಾಳ, ಮೋಹಿಶೇತ, ಮಡವಾಳ, ಮಾಚಿಗಡ ಸೇರಿದಂತೆ ನೂರಕ್ಕೂ ಹೆಚ್ಚು ಗ್ರಾಮಗಳು ಒಂದು ಗ್ರಾಮ ಒಂದು ಗಣಪ ನಿಯಮವನ್ನು ಅಚ್ಚುಕಟ್ಟಾಗಿ ರೂಢಿಸಿಕೊಂಡು ಬರುತ್ತಿವೆ.

’ನಂದಗಡ ಗ್ರಾಮದಲ್ಲಿ ’ಒಂದು ಗ್ರಾಮ ಒಂದು ಗಣಪ’ ನಿಯಮವನ್ನು ಪಾಲಿಸುತ್ತಿರುವ ಪರಿಣಾಮ ಇಡೀ ಗ್ರಾಮ ಗಣೇಶ ಹಬ್ಬದಲ್ಲಿ ಏಕತೆಯನ್ನು ಮೆರೆಯುತ್ತಿದೆ. ಗ್ರಾಮದ ಬಜಾರ ಪೇಟದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಮಂಟಪದಲ್ಲಿ ಹನ್ನೊಂದು ದಿನಗಳ ಕಾಲ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಗಣಹೋಮ, ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ ಸೇರಿದಂತೆ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಇಡೀ ಗ್ರಾಮದ ಜನರು ಉತ್ಸಾಹದಿಂದ ಹಬ್ಬ ಆಚರಿಸುವ ವಾತಾವರಣ ನಿರ್ಮಿಸಲಾಗುತ್ತದೆ.

’ಗ್ರಾಮದಲ್ಲಿ ಕನ್ನಡ, ಮರಾಠಿ, ಕೊಂಕಣಿ, ಉರ್ದು ಮತ್ತು ಹಿಂದಿ ಭಾಷಿಕರು ಹಾಗೂ ಹಿಂದೂ ಮುಸ್ಲಿಂ, ಕ್ರಿಶ್ಚಿಯನ್, ಜೈನ ಧರ್ಮದ ಜನರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ನಡೆಯುವ ವಿವಿಧ ಜಾತ್ರೆಗಳು, ಹಬ್ಬ-ಹರಿದಿನಗಳು, ನಾಡಹಬ್ಬ, ಉರುಸು, ರಾಯಣ್ಣನ ಜನ್ಮ ದಿನ, ಪುಣ್ಯಸ್ಮರಣೆ, ಕ್ರಿಸ್ಮಸ್, ಈದ್, ಗಣೇಶೋತ್ಸವ ಸೇರಿದಂತೆ ಎಲ್ಲ ಸಮುದಾಯದ ಆಚರಣೆಗಳನ್ನು ಎಲ್ಲ ಜಾತಿ-ಭಾಷೆ-ಧರ್ಮ-ಜಾತಿಯ ಬಾಂಧವರೂ ಸೇರಿ ಸೌಹಾರ್ದತೆಯಿಂದ ಆಚರಿಸುತ್ತಿರುವುದು ವಿಶೇಷ’ ಎನ್ನುತ್ತಾರೆ ಖಾನಾಪುರ ಶಾಸಕ ವಿಠ್ಠಲ ಹಲಗೇಕರ.

’ಗಣೇಶ ಪ್ರತಿಷ್ಠಾಪನೆಯ ಬಳಿಕ 11 ದಿನಗಳ ಕಾಲ ಗಣೇಶನ ಮಂಟಪದಲ್ಲಿ ಪ್ರತಿ ನಿತ್ಯ ರಂಗೋಲಿ ಸ್ಪರ್ಧೆ, ಭಾಷಣ ಸ್ಪರ್ಧೆ, ನೃತ್ಯ ಮತ್ತು ಗಾಯನ ಸ್ಪರ್ಧೆಗಳು, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧರ್ಮ ಜಾಗೃತಿಯ ಕಾರ್ಯಕ್ರಮಗಳು ನೆರವೇರುತ್ತಿವೆ. ಗಣಹೋಮವನ್ನು ಏರ್ಪಡಿಸಿ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಗಣೇಶೋತ್ಸವ ಸಮಿತಿಯ ಪದಾಧಿಕಾರಿ ಸಂತೋಷ ಕಿರಹಲಸಿ ಮಾಹಿತಿ ನೀಡಿದರು.

’ಒಂದು ಗ್ರಾಮ ಒಂದು ಗಣಪ ಪರಿಕಲ್ಪನೆಯನ್ನು ಖಾನಾಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಿಂದಿನಿಂದಲೂ ಪರಿಪಾಲಿಸಿಕೊಂಡು ಬರಲಾಗಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ತಾಲ್ಲೂಕಿನ ಇನ್ನಿತರ 100 ಹಳ್ಳಿಗಳಲ್ಲಿ ಒಂದು ಗ್ರಾಮ ಒಂದು ಗಣಪ ಪದ್ಧತಿಗೆ ಚಾಲನೆ ನೀಡಿದ್ದು, ತಮ್ಮ ಮಾತಿಗೆ ಮನ್ನಣೆ ನೀಡಿದ ವಿವಿಧ ಗ್ರಾಮಗಳ ಜನರು ಇಂದಿಗೂ ಈ ಪದ್ಧತಿಯನ್ನು ಅನುಸರಿಸುತ್ತಿರುವುದು ವಿಶೇಷ ಎನ್ನುತ್ತಾರೆ ನಂದಗಡ ಗ್ರಾಮಸ್ಥರೂ ಆದ ಮಾಜಿ ಶಾಸಕ ಅರವಿಂದ ಪಾಟೀಲ

’ಹಲಸಿ ಗ್ರಾಮದಲ್ಲಿ ಒಂದು ಗ್ರಾಮ ಒಂದು ಗಣಪ ಪದ್ಧತಿಯನ್ನು ನಮ್ಮ ಅಜ್ಜ-ಮುತ್ತಜ್ಜರ ಕಾಲದಿಂದ ನಡೆಸಿಕೊಂಡು ಬಂದಿದ್ದೇವೆ. ಗ್ರಾಮದ ಎಲ್ಲ ಜಾತಿ-ಮತ-ಪಂಥ-ಭಾಷೆ-ಧರ್ಮದ ಜನರು ಗ್ರಾಮದ ಗಣಪತಿಯನ್ನು ತದೇಕಮನದಿಂದ ಆರಾಧಿಸುತ್ತಾರೆ. ಹೀಗಾಗಿ ನಮ್ಮ ಗ್ರಾಮದ ಜನತೆಗೆ ಗಣಪತಿಯ ಆಶೀರ್ವಾದ ಸದಾಕಾಲ ಲಭಿಸುತ್ತ ಬಂದಿದೆ ಎಂದರು ಹಲಸಿ ಗ್ರಾಮಸ್ಥ ಆನಂದ ನಾಗನೂರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.