ಬೆಳಗಾವಿ: ಅಕಾಲಿಕ ಮಳೆಯಿಂದ ಬೆಳೆ ಹಾನಿ ಹಾಗೂ ಇಳುವರಿ ಕುಸಿತದಿಂದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಈರುಳ್ಳಿ ಆವಕ ಪ್ರಮಾಣ ಕುಸಿದಿದೆ. ಇದರಿಂದ ಧಾರಣೆ ಏರಿಕೆಯಾಗಿದೆ.
ಎಪಿಎಂಸಿಗೆ ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕು, ಬಾಗಲಕೋಟೆ ಜಿಲ್ಲೆ, ಮಹಾರಾಷ್ಟ್ರದ ಸೊಲ್ಲಾಪುರ, ಅಹ್ಮದ್‌ನಗರ ಮತ್ತಿತರ ಕಡೆಯಿಂದ ಈರುಳ್ಳಿ ಆವಕವಾಗುತ್ತದೆ. ಇಲ್ಲಿಂದ ಕರ್ನಾಟಕದ ವಿವಿಧ ನಗರಗಳು ಮತ್ತು ಉತ್ತರ ಭಾರತದ ಮಾರುಕಟ್ಟೆಗೆ ಪೂರೈಕೆಯಾಗುತ್ತದೆ.
‘ಕರ್ನಾಟಕದಲ್ಲಿ ಈರುಳ್ಳಿ ಸುಗ್ಗಿ ಈಗ ಮುಗಿಯುವ ಹಂತಕ್ಕೆ ಬಂದಿದೆ. ಅಕಾಲಿಕ ಮಳೆಯಿಂದ ಬೆಳೆ ಹಾನಿಗೀಡಾಗಿದೆ. ಪ್ರತಿ ವರ್ಷದಂತೆ ಗುಣಮಟ್ಟದ ಫಸಲೂ ಬಂದಿಲ್ಲ. ಆದರೆ, ಬೇಡಿಕೆಯಷ್ಟು ಈರುಳ್ಳಿ ಆವಕ ಆಗದ ಕಾರಣ ರೈತರಿಗೆ ಉತ್ತಮ ದರ ಸಿಗುತ್ತಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಕೆ.ಎಚ್. ಗುರುಪ್ರಸಾದ ‘ಪ್ರಜಾವಾಣಿ’ಗೆ ತಿಳಿಸಿದರು.
‘ಡಿಸೆಂಬರ್ 11ರಂದು ಕ್ವಿಂಟಲ್‌ಗೆ ₹6 ಸಾವಿರ ದರದಲ್ಲಿ ಈರುಳ್ಳಿ ಮಾರಾಟವಾಗಿತ್ತು. ಶನಿವಾರ (ಡಿಸೆಂಬರ್ 14) ಕ್ವಿಂಟಲ್‌ಗೆ ₹4,500 ದರದಲ್ಲಿ ಮಾರಾಟವಾಗಿದೆ. ಗುಣಮಟ್ಟದ ಈರುಳ್ಳಿಯನ್ನು ಕ್ವಿಂಟಲ್‌ಗೆ ₹5 ಸಾವಿರ ದರದಲ್ಲೂ ಕೆಲವು ವ್ಯಾಪಾರಿಗಳು ಖರೀದಿಸಿದ್ದಾರೆ. ದರದಲ್ಲಿ ವ್ಯತ್ಯಾಸವಾಗುತ್ತಿದ್ದರೂ ರೈತರಿಗೆ ಉತ್ತಮ ಆದಾಯ ಸಿಗುತ್ತಿದೆ’ ಎಂದರು.
2023ರ ಡಿಸೆಂಬರ್‌ನಲ್ಲಿ ಬೆಳಗಾವಿ ಎಪಿಎಂಸಿಗೆ 95,193 ಕ್ವಿಂಟಲ್ ಈರುಳ್ಳಿ ಆವಕವಾಗಿತ್ತು. ಈ ವರ್ಷ ಡಿಸೆಂಬರ್ 1ರಿಂದ 14ರವರೆಗೆ 39,182 ಕ್ವಿಂಟಲ್ ಬಂದಿದೆ. ಶನಿವಾರ ಒಂದೇ ದಿನ 8,696 ಕ್ವಿಂಟಲ್ ಆವಕವಾಗಿದೆ.
‘ಈಗ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಿಂದಷ್ಟೇ ಈರುಳ್ಳಿ ಬರುತ್ತಿದೆ. ಆವಕ ಇಳಿಕೆಯಾದ ಕಾರಣ ದರ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ಆವಕ ಶುರುವಾದರೆ, ದರ ಕಡಿಮೆಯಾಗಬಹುದು’ ಎಂದು ವ್ಯಾಪಾರಿ ದೀಪಕ ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.