ADVERTISEMENT

ಸಿಗದ ಜೋಳ, ಉತ್ತರದಲ್ಲಿ ಅಕ್ಕಿಯಷ್ಟೆ ವಿತರಣೆ

ಅಕ್ಕಿ ಕಡಿತಗೊಳಿಸುವ ಸಚಿವರ ಉದ್ದೇಶಕ್ಕೆ ಹಿನ್ನಡೆ

ಎಂ.ಮಹೇಶ
Published 15 ಮೇ 2021, 19:31 IST
Last Updated 15 ಮೇ 2021, 19:31 IST
ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ತೋಪಿನಕಟ್ಟಿಯಲ್ಲಿ ಪಡಿತರ ಚೀಟಿದಾರರು ಅಂತರ ಕಾಯ್ದುಕೊಂಡು ನಿಂತು ಆಹಾರ ಧಾನ್ಯ ಪಡೆದರು
ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ತೋಪಿನಕಟ್ಟಿಯಲ್ಲಿ ಪಡಿತರ ಚೀಟಿದಾರರು ಅಂತರ ಕಾಯ್ದುಕೊಂಡು ನಿಂತು ಆಹಾರ ಧಾನ್ಯ ಪಡೆದರು   

ಬೆಳಗಾವಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಉತ್ತರ ಕರ್ನಾಟಕದ ಪಡಿತರ ಚೀಟಿದಾರರಿಗೆ ಅಕ್ಕಿಯೊಂದಿಗೆ ಜೋಳ ವಿತರಿಸಬೇಕು ಎನ್ನುವ ಸರ್ಕಾರದ ಉದ್ದೇಶಕ್ಕೆ ಹಿನ್ನಡೆಯಾಗಿದೆ. ಬೇಡಿಕೆಯಷ್ಟು ಜೋಳ ಲಭ್ಯವಾಗದೆ ಇರುವುದು ಇದಕ್ಕೆ ಕಾರಣ. ದಕ್ಷಿಣದಲ್ಲಿ ರಾಗಿ ಸಿಕ್ಕಿದ್ದು, ಅಲ್ಲಿ ಬಿ‍ಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ 3 ಕೆ.ಜಿ. ರಾಗಿ ಹಾಗೂ 2 ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ. ಉತ್ತರದಲ್ಲಿ ಐದೂ ಕೆ.ಜಿ. ಅಕ್ಕಿಯನ್ನೇ ನೀಡಲಾಗುತ್ತಿದೆ.

ಅಕ್ಕಿಯೊಂದಿಗೆ ಆಯಾ ಭಾಗದ ಜನರ ಆಹಾರ ಪದ್ಧತಿಯಂತೆ ರಾಗಿ ಮತ್ತು ಜೋಳ ಕೊಡಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನಿರ್ಧರಿಸಿತ್ತು. ದಕ್ಷಿಣದ 12 ಜಿಲ್ಲೆಗಳಲ್ಲಿ ಪಡಿತರ ಚೀಟಿಯ ಪ್ರತಿ ಸದಸ್ಯನಿಗೆ 3 ಕೆ.ಜಿ. ರಾಗಿ ಮತ್ತು 2 ಕೆ.ಜಿ. ಅಕ್ಕಿ ನೀಡಲು ತೀರ್ಮಾನಿಸಿತ್ತು. ಅದರಂತೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿ ಆಗಿದ್ದು, ರಾಗಿ ವಿತರಣೆಯನ್ನು ಏಪ್ರಿಲ್‌ನಿಂದ ಜಾರಿಗೆ ತರಲಾಗಿದೆ.

ಉತ್ತರದ 12 ಜಿಲ್ಲೆಗಳ ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬರಿಗೆ 3 ಕೆ.ಜಿ. ಜೋಳ ಹಾಗೂ 2 ಕೆ.ಜಿ. ಅಕ್ಕಿ ನೀಡಲು ಉದ್ದೇಶಿಸಲಾಗಿತ್ತು. ಸಚಿವ ಉಮೇಶ ಕತ್ತಿ ಇದನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಬಳ್ಳಾರಿ, ರಾಯಚೂರು ಮತ್ತು ಯಾದಗಿರಿಯಲ್ಲಿ ಬೆಂಬಲ ಬೆಲೆಯಲ್ಲಿ ಜೋಳ ಖರೀದಿ ಆಗಿರುವುದರಿಂದ ಅಲ್ಲಿ ಅಕ್ಕಿಯೊಂದಿಗೆ ಜೋಳ ಕೊಡಲಾಗುತ್ತಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಖರೀದಿ ಸಾಧ್ಯವಾಗಿಲ್ಲ:

ಜೋಳಕ್ಕೆ ಕೇಂದ್ರ ಸರ್ಕಾರದಿಂದ ₹ 2,640 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿತ್ತು. ಇದು ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಇದ್ದ ಕಾರಣ ಖರೀದಿ ಸಾಧ್ಯವಾಗಿಲ್ಲ. ಕನಿಷ್ಠ ಬೆಂಬಲ ಬೆಲೆಯನ್ನು ₹ 4,785ಕ್ಕೆ ಹೆಚ್ಚಿಸುವಂತೆ ಇಲಾಖೆಯಿಂದ ಕೇಂದ್ರವನ್ನು ಕೋರಲಾಗಿತ್ತು. ಆದರೆ, ಅದಕ್ಕೆ ಮನ್ನಣೆ ದೊರೆತಿಲ್ಲ. ಪರಿಣಾಮ, ಯೋಜನೆಯಲ್ಲಿ ಪರಿಷ್ಕರಣೆ ಮಾಡಿದ ಸಚಿವರ ತವರಾದ ಬೆಳಗಾವಿ ಸೇರಿದಂತೆ ಉತ್ತರದ ಬಹುತೇಕ ಜಿಲ್ಲೆಗಳಲ್ಲಿ ಜೋಳ ವಿತರಿಸುವುದಕ್ಕೆ ಸಾಧ್ಯವಾಗಿಲ್ಲ.

‘ಜೋಳ ಲಭ್ಯವಾಗದ ಪರಿಣಾಮ ಅಕ್ಕಿಯನ್ನೇ ಕೊಡಲಾಗುತ್ತಿದೆ. ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ 1,752 ನ್ಯಾಯಬೆಲೆ ಅಂಗಡಿಗಳಿವೆ. ಶುಕ್ರವಾರದವರೆಗೆ ಶೇ 98.23ರಷ್ಟು ಎತ್ತುವಳಿ ಆಗಿದ್ದು, 5ನೇ ಸ್ಥಾನದಲ್ಲಿದ್ದೇವೆ. ಶೇ 32.47ರಷ್ಟು ವಿತರಣೆ ಆಗಿದ್ದು, ಇದರಲ್ಲಿ 6ನೇ ಸ್ಥಾನದಲ್ಲಿದ್ದೇವೆ. ಇಲ್ಲಿ ಸರಾಸರಿ ಶೇ 88ರಷ್ಟು ವಿತರಣೆ ಆಗುತ್ತದೆ’ ಎಂದು ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ತಿಳಿಸಿದರು.

ಕೇಂದ್ರದಿಂದಲೂ ನೆರವು

‘ಅಂತ್ಯೋದಯ ಅನ್ನಭಾಗ್ಯ ಯೋಜನೆಯ ಚೀಟಿದಾರರಿಗೆ 35 ಕೆ.ಜಿ ಅಕ್ಕಿ ಜೊತೆಗೆ ಕೋವಿಡ್ ಕಾರಣದಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಲ್ಲಿ ತಲಾ ಸದಸ್ಯನಿಗೆ 5 ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ. ಕುಟುಂಬದಲ್ಲಿ ಎಷ್ಟೇ ಮಂದಿ ಇದ್ದರೂ (ಚೀಟಿಯಲ್ಲಿ ಹೆಸರಿರಬೇಕು) ತಲಾ 5 ಕೆ.ಜಿ. ಅಕ್ಕಿಯನ್ನು ಕೇಂದ್ರ ನೀಡುತ್ತಿದೆ. ಬಿಪಿಎಲ್‌ (ಆದ್ಯತಾ) ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ವ್ಯಕ್ತಿಗೆ ರಾಜ್ಯದಿಂದ 5 ಕೆ.ಜಿ. ಹಾಗೂ ಕೇಂದ್ರದಿಂದ 5 ಕೆ.ಜಿ. ಸೇರಿ 10 ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ (ಜೂನ್‌ನಲ್ಲೂ ಇದು ಮುಂದುವರಿಯಲಿದೆ). 2 ಕೆ.ಜಿ. ಗೋಧಿ ಕೂಡ ನೀಡಲಾಗುತ್ತಿದೆ’ ಎಂದು ಹೇಳಿದರು.

***

ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಜೋಳ ಲಭ್ಯವಾದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 3 ಕೆ.ಜಿ. ಜೋಳ ಮತ್ತು 2 ಕೆ.ಜಿ. ಅಕ್ಕಿಯನ್ನು ನೀಡುವ ಕಾರ್ಯಕ್ರಮ ಜಾರಿಗೊಳಿಸಲಾಗುವುದು. ಜನರಿಗೆ ಪೌಷ್ಟಿಕ ಆಹಾರ ದೊರೆಯಬೇಕು ಎನ್ನುವುದು ನನ್ನ ಉದ್ದೇಶವಾಗಿದೆ

- ಉಮೇಶ ಕತ್ತಿ, ಸಚಿವರು, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.