ADVERTISEMENT

ಬೆಳಗಾವಿ | ಸಾವಯವದಲ್ಲಿ ಖುಷಿ ಕಂಡ ಸಹೋದರರು

ಖಾನಡೌಡ್ರ ಅವರಿಂದ ಯಶಸ್ಸಿ ಸಮಗ್ರ ಬೇಸಾಯ

ಬಾಲಶೇಖರ ಬಂದಿ
Published 14 ಏಪ್ರಿಲ್ 2022, 19:30 IST
Last Updated 14 ಏಪ್ರಿಲ್ 2022, 19:30 IST
ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಮಲ್ಲಿಕಾರ್ಜುನ ಮತ್ತು ರಮೇಶ ಖಾನಗೌಡ್ರ ಸಾವಯವ ಬೇಸಾಯಕ್ಕಾಗಿ ಗೋಕೃಪಾಮೃತ ತಯಾರಿಸುತ್ತಿದ್ದಾರೆ
ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಮಲ್ಲಿಕಾರ್ಜುನ ಮತ್ತು ರಮೇಶ ಖಾನಗೌಡ್ರ ಸಾವಯವ ಬೇಸಾಯಕ್ಕಾಗಿ ಗೋಕೃಪಾಮೃತ ತಯಾರಿಸುತ್ತಿದ್ದಾರೆ   

ಮೂಡಲಗಿ (ಬೆಳಗಾವಿ ಜಿಲ್ಲೆ): ‘ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆ ಬಿಟ್ಟು ಆರು ವರ್ಷ ಆತ್ರೀ. ಪಕ್ಕಾ ಸಾವಯವ ಕೃಷಿ ಮಾಡ್ತಿದ್ದೀವ್ರಿ. ಖರ್ಚು ಕಡಿಮೆಯಾಗಿ ಲಾಭ ಹೆಚ್ಚು ಬರತೈತ್ರೀ’ ಎಂದು ತಾಲ್ಲೂಕಿನ ಕಲ್ಲೋಳಿಯ ಯುವ ರೈತರಾದ ರಮೇಶ ಬಸಪ್ಪ ಖಾನಗೌಡ್ರ ಮತ್ತು ಮಲ್ಲಿಕಾರ್ಜುನ ಖಾನಗೌಡ್ರ ಹೆಮ್ಮೆಯಿಂದ ಬೀಗುತ್ತಾರೆ.

ಅವರು 10 ಎಕರೆ ಭೂಮಿಯಲ್ಲಿ ಕಬ್ಬು, ಅರಿಸಿನ, ಗೋವಿನ ಜೋಳ, ವಿವಿಧ ತರಕಾರಿಗಳನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ. ಹೈನುಗಾರಿಕೆ, ಕೋಳಿ, ಮೀನು, ಜೇನು ಸಾಕಣೆ ಮೂಲಕ ಸಮಗ್ರ ಬೇಸಾಯ ಮಾಡುತ್ತಿದ್ದಾರೆ.

‘ಆ ಬ್ಯಾರೆಲ್‌ನಲ್ಲಿ ಎರೆಹುಳುಗಳ ಕಷಾಯ ಐತ್ರೀ. ಅಲ್ಲಿ ಘನ ಜೀವಾಮೃತ ಐತ್ರೀ. ಇನ್ನೊಂದು ಡ್ರಮ್‌ನಲ್ಲಿ ಬೇವಿನ ಎಲೆ ಕಷಾಯ ಐತ್ರೀ. ಇದು 1,600 ಲೀಟರ್‌ನ ಜೀವಾಮೃತ ಟ್ಯಾಂಕ್‌ ರೀ. ಇಲ್ಲಿ ಎರೆಗೊಬ್ಬರ ಘಟಕ ಐತ್ರೀ’ ಎಂದು ತಿಳಿಸಿದ ರಮೇಶ ಎರೆಹುಳ ತೊಟ್ಟಿಯಲ್ಲಿದ್ದ ಎರೆಹುಳುಗಳನ್ನು ಕೈಯಲ್ಲಿಡಿದು ತೋರಿಸಿದರು.

ADVERTISEMENT

ಈ ಸಹೋದರರು ತೋಟದ ಒಂದು ಬದಿಯಲ್ಲಿ ಸಾವಯವ ಕೃಷಿಗೆ ಬೇಕಾದ ಜೈವಿಕ ಗೊಬ್ಬರ, ಕೀಟನಾಶಕ ಸಿದ್ಧಪಡಿಸುವ ತೊಟ್ಟಿ ಮಾಡಿದ್ದಾರೆ. ತೋಟದಲ್ಲಿ ಸಾವಯವ ಉದ್ಯಮದ ಘಟಕವನ್ನೇ ಸೃಷ್ಟಿಸಿದ್ದಾರೆ. ತೋಟವು ಸಾವಯವದ ಪಾಠಶಾಲೆ ಎನ್ನುವಂತಾಗಿದೆ. ಅರಭಾವಿಯ ತೋಟಗಾರಿಕೆ ಕಾಲೇಜು, ಕೃಷಿ ಇಲಾಖೆ, ಐಸಿಐಸಿಐ ಪ್ರತಿಷ್ಠಾನ, ತುಕ್ಕಾನಟ್ಟಿಯ ಕೃಷಿ ವಿಜ್ಞಾನ ಕೇಂದ್ರದವರು ಪ್ರಾತ್ಯಕ್ಷತೆ ತಾಣವನ್ನಾಗಿಸಿಕೊಂಡಿದ್ದಾರೆ.

ಉತ್ತಮ ಇಳುವರಿ:4 ಎಕರೆ ಕಬ್ಬು, 3 ಎಕರೆ ಅರಿಸಿನ ಬೆಳೆದಿದ್ದಾರೆ. ಎಕರೆಗೆ 50ರಿಂದ 60 ಟನ್‌ ಇಳುವರಿ ಪಡೆದಿದ್ದಾರೆ. ಅರಿಸಿನ ಬೆಳೆಯಲ್ಲಿ ಎಕರೆಗೆ 30ರಿಂದ 35 ಕ್ವಿಂಟಲ್‌ ಇಳುವರಿ ಪಡೆದಿದ್ದಾರೆ. ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ, ಸ್ಟೀಟ್‌ಕಾರ್ನ್‌ ಹೀಗೆ... ಮಿಶ್ರ ಬೇಸಾಯ ಮಾಡುತ್ತಿದ್ದಾರೆ.

‘ಸಾವಯವ ಪ್ರಾರಂಭದ 2 ವರ್ಷ ಇಳುವರಿ ಕಡಿಮೆ ಆತ್ರೀ. ಹಂಗಂತ ದೈರ್ಯಗುಂದದೆ ಪ್ರಯತ್ನ, ಪರಿಶ್ರಮಪಟ್ಟಿದ್ದರ ಫಲವಾಗಿ ಈಗ ಇಳುವರಿ ಅಧಿಕ ಆಗೈತ್ರೀ’ ಎನ್ನುತ್ತಾರೆ ಖಾನಗೌಡ್ರ ಸಹೋದರರು. ಅರಿಸಿನಕ್ಕೆ ಕ್ವಿಂಟಲ್‌ಗೆ ₹ 10ಸಾವಿರ ಬೆಲೆ ಸಿಕ್ಕಿದೆ. ಒಂದು ಎಕರೆ ಬೆಳೆಯನ್ನು ಅರಿಸಿನ ಪುಡಿ ಮಾಡಿ ಪಾಕೆಟ್‌ ಮಾಡಿ ಮಾರುತ್ತಿದ್ದಾರೆ. ‘ಅಪ್ಪಟ ಸಾವಯವ ಅರಿಸಿನ ಪುಡಿಯಾಗಿದ್ದರಿಂದ ಸಾಕಷ್ಟು ಬೇಡಿಕೆ ಇದೆ. ಜನರು ತೋಟಕ್ಕೆ ಬಂದು ಖರೀದಿಸುತ್ತಾರೆ. ಮಾರಾಟ ಸುಲಭವಾಗಿದೆ’ ಎನ್ನುತ್ತಾರೆ ರಮೇಶ ಅವರು.

ಹೈನುಗಾರಿಕೆ:8 ಎಮ್ಮೆಗಳು, 3 ದೇಸಿ ಹಸುಗಳನ್ನು ಸಾಕಿದ್ದಾರೆ. ಅವುಗಳಿಗೆ ವ್ಯವಸ್ಥಿತವಾದ ಶೆಡ್‌ ನಿರ್ಮಿಸಿ ಅವುಗಳ ಸೆಗಣಿ ಮತ್ತು ಗಂಜಲ ಎಲ್ಲವನ್ನೂ ಶೇಖರಿಸಿ ಪ್ರಮಾಣಬದ್ಧವಾಗಿ ಕೃಷಿಗೆ ಬಳಿಸಿಕೊಳ್ಳುತ್ತಾರೆ. 80ಕ್ಕೂ ಅಧಿಕ ಕೋಳಿಗಳನ್ನು ಪ್ರತ್ಯೇಕ ಶೆಡ್‌ನಲ್ಲಿ ಸಾಕುತ್ತಿದ್ದಾರೆ. ತೋಟದ ಬಾವಿ ಮತ್ತು ಪ್ಲಾಸ್ಟಿಕ್‌ ತೊಟ್ಟಿಗಳಲ್ಲಿ ಮೀನು ಕೂಡ ಸಾಕುತ್ತಿದ್ದಾರೆ.

ಬಿ.ಎ. ಪದವೀಧರ ರಮೇಶ ಖಾಸಗಿ ಕಂಪನಿ ಕೆಲಸ ಬಿಟ್ಟು ಕೃಷಿಗಿಳಿದಿದ್ದಾರೆ. ಬೆಳಿಗ್ಗೆ 5ಕ್ಕೆ ಕೃಷಿ ಕಾಯಕದ ದಿನಚರಿ ಪ್ರಾರಂಭಿಸುತ್ತಾರೆ. ವಿವಿಧ ಕೆಲಸಗಳಲ್ಲಿ ಕುಟುಂಬದ ಸದಸ್ಯರೆಲ್ಲರೂ ತೊಡಗುತ್ತಾರೆ. ಮನೆಗೆ ಬೇಕಾದ ತರಕಾರಿ ಬೆಳೆದುಕೊಳ್ಳುತ್ತಾರೆ.

ಕೃಷಿ ಇಲಾಖೆಯ ತಾಲ್ಲೂಕು ಮಟ್ಟದ ‘ಆತ್ಮ’ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ. ವಿವಿಧ ಸಂಘ–ಸಂಸ್ಥೆಯವರು ಪ್ರಶಸ್ತಿ–ಸನ್ಮಾನ ನೀಡಿ ಗೌರವಿಸಿದ್ದಾರೆ. ‘ತಾಯಿ ಬಾಳವ್ವ, ಅಣ್ಣ ಸತೀಶ ಖಾನಗೌಡ್ರ, ಮಾವ ಬಸವರಾಜ ಕಡಾಡಿ ಪ್ರೇರಣೆಯಾಗಿದ್ದಾರೆ’ ಎಂದು ರಮೇಶ ಹೇಳಿದರು.

ಸಂಪರ್ಕಕ್ಕೆ ಮೊ.ಸಂಖ್ಯೆ: 8880849242.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.