
ಬೆಳಗಾವಿ: ಪ್ರಸ್ತುತ ಮಾರುಕಟ್ಟೆಯಲ್ಲಿ ಸಾವಯವ ಬೆಲ್ಲಕ್ಕೆ ಬೇಡಿಕೆ ಬಂದಿದೆ. ಕಳೆದ ವರ್ಷ ಸಾವಯವ ಬೆಲ್ಲದ ದರ ಪ್ರತಿ 10 ಕೆಜಿಗೆ ₹500 ರಿಂದ ₹600 ಇದ್ದರೆ, ಈ ವರ್ಷ ₹700ರಿಂದ ₹800ಕ್ಕೆ ಏರಿಕೆಯಾಗಿದೆ. ಇದು ರೈತರಲ್ಲಿ ಸಂತಸ ಮೂಡಿಸಿದೆ.
‘ಕೊರೊನಾ ನಂತರದ ಕಾಲಘಟ್ಟದಲ್ಲಿ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗಿ ಸಾವಯವ ಬೆಲ್ಲ ಬಳಸಲು ಇಷ್ಟಪಡುತ್ತಿದ್ದಾರೆ. ಪರಿಣಾಮವಾಗಿ ಬೆಲ್ಲ ಖರೀದಿ ಪ್ರಮಾಣವೂ ಹೆಚ್ಚಾಗಿದೆ. ಹೀಗಾಗಿ ಜಿಲ್ಲೆಯ ಮೋದಗಾ, ಮಾವಿನಕಟ್ಟಿ, ಹೊನ್ನಿಹಾಳ ಮತ್ತಿತರ ಗ್ರಾಮಗಳಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಕಬ್ಬು ಬೆಳೆದು ಬೆಲ್ಲ ತಯಾರಿಸುವವರ ಸಂಖ್ಯೆಯೂ ಹೆಚ್ಚಿದೆ’ ಎಂದು ತಾಲ್ಲೂಕಿನ ಮೋದಗಾ ಗ್ರಾಮದ ಆಲೆಮನೆ ಮಾಲೀಕ ಅಪ್ಪಯ್ಯ ಅಷ್ಟೇಕರ ತಿಳಿಸಿದರು.
‘3 ಎಕರೆಯಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಕಬ್ಬು ಬೆಳೆದಿದ್ದು, ಪ್ರತಿ ಎಕರೆಗೆ 40 ಟನ್ ಇಳುವರಿ ಬಂದಿದೆ. ಅದರಿಂದ ಸಾವಯವ ಬೆಲ್ಲ ತಯಾರಿಸಿ ಬೈಲಹೊಂಗಲದ ಅಂಗಡಿಯಲ್ಲಿ ಮಾರುತ್ತಿದ್ದೇನೆ. ಮೂರು ವರ್ಷಗಳ ಹಿಂದೆ 60 ಕ್ವಿಂಟಲ್ ಮಾರಿದ್ದೆ. ಕಳೆದ ವರ್ಷ 100 ಕ್ವಿಂಟಲ್ ಮಾರಾಟವಾಗಿತ್ತು. ಈ ವರ್ಷ 120 ಕ್ವಿಂಟಲ್ ಮಾರುವ ಗುರಿ ಇದೆ’ ಎಂದು ಮಾವಿನಕಟ್ಟಿಯ ರೈತ ಬಸವರಾಜ ಪಾಟೀಲ ಹೇಳಿದರು.
‘ಸ್ಥಳೀಯರಷ್ಟೇ ಅಲ್ಲದೇ, ಬೆಂಗಳೂರು, ಮೈಸೂರು ಮತ್ತು ಕೇರಳದ ಗ್ರಾಹಕರು ನನ್ನಿಂದ ಬೆಲ್ಲ ಖರೀದಿಸುತ್ತಾರೆ’ ಎನ್ನುತ್ತಾ, ಮಾರುಕಟ್ಟೆ ವಿಸ್ತರಿಸಿರುವುದನ್ನೂ ಅವರು ಸಂತಸದಿಂದ ವಿವರಿಸಿದರು.
‘ಈಗ ಸಾವಯವ ಬೆಲ್ಲಕ್ಕೆ, ಅದರಲ್ಲೂ ಪುಡಿ ಬೆಲ್ಲಕ್ಕೆ ಬೇಡಿಕೆ ಹೆಚ್ಚಿದೆ. ಸಮೀಪದಲ್ಲಿ ಆಲೆಮನೆ ಹೊಂದಿದವರು, ಮಾರುಕಟ್ಟೆ ಅನುಕೂಲತೆ ಇದ್ದವರು ಸಾವಯವ ಬೆಲ್ಲ ತಯಾರಿಸಿದರೆ ಹೆಚ್ಚಿನ ಆದಾಯ ಪಡೆಯಬಹುದು. ಸಕ್ಕರೆ ಕಾರ್ಖಾನೆಗಳ ಮೇಲಿನ ಅವಲಂಬನೆ ತಪ್ಪಿಸಬಹುದು’ ಎಂದು ಯರಗಟ್ಟಿ ತಾಲ್ಲೂಕಿನ ಕಡಬಿಯ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಕೃಷಿ ಮಾಡುತ್ತಿರುವ ಹಾಗೂ ಸಾವಯವ ಬೆಲ್ಲ ತಯಾರಕ ಸಂತೋಷ ಕಿತ್ತೂರ ಹೇಳಿದರು.
ದಶಕಗಳ ಹಿಂದೆ ಮೋದಗಾ ಗ್ರಾಮವೊಂದರಲ್ಲೇ 20ಕ್ಕೂ ಅಧಿಕ ಆಲೆಮನೆ ಇದ್ದವು. ಕಾರ್ಮಿಕರ ಕೊರತೆಯಿಂದ ಈಗ ಮೂರಷ್ಟೇ ಉಳಿದಿವೆ. ಅದರಲ್ಲಿ ಇದೊಂದೇ ಆಲೆಮನೆಯಲ್ಲಿ ಸಾವಯವ ಪದ್ಧತಿ ಯಲ್ಲಿ ಕಬ್ಬು ನುರಿಸಿ, ಬೆಲ್ಲ ತಯಾರಿಸಲಾಗುತ್ತಿದೆ. ಪ್ರತಿವರ್ಷ 3 ರಿಂದ 4 ತಿಂಗಳು ಕಾರ್ಯ ನಿರ್ವಹಿ ಸುವ ಆಲೆಮನೆಯಲ್ಲಿ 50ರಿಂದ 60 ಸಾವಯವ ಕೃಷಿಕರು ಬೆಲ್ಲ ತಯಾರಿಸುತ್ತಾರೆ.
‘ಒಮ್ಮೆ ಕೊಪ್ಪರಿಗೆಯಲ್ಲಿ 1.25 ಟನ್ ಕಬ್ಬು ನುರಿಸಿದರೆ, ಒಂದೂವರೆ ಕ್ವಿಂಟಲ್‌ಗೂ ಹೆಚ್ಚು ಸಾವಯವ ಬೆಲ್ಲ ಸಿದ್ಧವಾಗುತ್ತದೆ. ಕಬ್ಬು ಕಟಾವು, ಸಾರಿಗೆ, ಆಲೆಮನೆಯಲ್ಲಿನ ಕಾರ್ಮಿಕರು, ಇತರೆ ವೆಚ್ಚವೆಲ್ಲ ತೆಗೆದರೂ, 1.25 ಟನ್ ಕಬ್ಬಿಗೆ ₹7 ಸಾವಿರ ಸಿಗುವುದು ಖಾತ್ರಿ’ ಎಂದು 30 ವರ್ಷಗಳಿಂದ ಆಲೆಮನೆ ನಡೆಸುತ್ತಿರುವ ಅಪ್ಪಯ್ಯ ಅಷ್ಟೇಕರ ಹೇಳಿದರು.
‘ನಮ್ಮಲ್ಲಿ ತಯಾರಿಸಿದ ಬೆಲ್ಲ ಖರೀದಿಗೆ ನಿರ್ದಿಷ್ಟ ಗ್ರಾಹಕರಿದ್ದಾರೆ. ಕೆಲ ರೈತರು ಆಲೆಮನೆಗಳಲ್ಲೇ ಬೆಲ್ಲ ಮಾರಿದರೆ, ಇನ್ನೂ ಕೆಲವರು ತಮ್ಮ ಮನೆ ಮತ್ತು ಅಂಗಡಿಗಳಲ್ಲಿ ಮಾರುತ್ತಾರೆ. ರುಚಿ, ಶುದ್ಧತೆ ಕಾರಣಕ್ಕೆ ನಮ್ಮ ಬೆಲ್ಲಕ್ಕೆ ದರ ಹೆಚ್ಚಿದೆ’ ಎಂದರು.
‘ಜಿಲ್ಲೆಯಲ್ಲಿ 3.25 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗುತ್ತದೆ ಇದೆ. ಈ ಪೈಕಿ 10 ಸಾವಿರ ಹೆಕ್ಟೇರ್‌ನಲ್ಲಿ ಸಾವಯವ ಪದ್ಧತಿಯಲ್ಲಿ ಕಬ್ಬು ಬೆಳೆಯುತ್ತಾರೆ. ಕೆಲ ರೈತರು ಈಗಾಗಲೇ ಸಾವಯವ ದೃಢೀಕರಣ ಪ‍್ರಮಾಣಪತ್ರ ಮಾಡಿಸಿದ್ದಾರೆ. ಇನ್ನೂಳಿದವರಿಗೂ ಅಂಥ ಪ್ರಮಾಣಪತ್ರ ಪಡೆಯಲು ಉತ್ತೇಜಿಸುತ್ತಿದ್ದೇವೆ’ ಎಂದು ಕೃಷಿ ಇಲಾಖೆ ಜಂಟಿನಿರ್ದೇಶಕ ಎಚ್.ಡಿ.ಕೋಳೇಕರ ತಿಳಿಸಿದರು.
ರಾಸಾಯನಿಕ ಬಳಸಿ ತಯಾರಿಸಿದ ಬೆಲ್ಲಕ್ಕಿಂತ ಸಾವಯವ ಬೆಲ್ಲ ತುಟ್ಟಿ. ಆದರೆ ಆರೋಗ್ಯ ದೃಷ್ಟಿಯಿಂದ ಎರಡು ವರ್ಷಗಳಿಂದ ಸಾವಯವ ಬೆಲ್ಲವನ್ನೇ ಖರೀದಿಸುತ್ತಿದ್ದೇವೆಅಶೋಕ ಕೆಂಗೇರಿ ಗ್ರಾಹಕ ಹೊನ್ನಿಹಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.