ADVERTISEMENT

ಮೀಸಲಾತಿಗೆ ಆಗ್ರಹಿಸಿ ಸೆ.24ರಂದು ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌: ಎ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 11:47 IST
Last Updated 22 ಸೆಪ್ಟೆಂಬರ್ 2021, 11:47 IST
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ   

ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸುವುದಕ್ಕಾಗಿ ಸೆ. 24ರಂದು ಬೆಳಿಗ್ಗೆ 10.30ಕ್ಕೆ ನಗರದ ಗಾಂಧಿ ಭವನದಲ್ಲಿ ‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌’ ಆಯೋಜಿಸಲಾಗಿದೆ’ ಎಂದು ಸಮಾಜದ ಮತ್ತು ಕಾಂಗ್ರೆಸ್ ಮುಖಂಡ ಎ.ಬಿ. ಪಾಟೀಲ ತಿಳಿಸಿದರು.

‘ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಾಯತ್ ನಡೆಯಲಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು ಹಾಗೂ ಸಮಾಜದ ನೂರಾರು ಮಂದಿ ಪಾಲ್ಗೊಳ್ಳುವರು. ಸರ್ಕಾರದ ಗಮನಸೆಳೆಯುವುದಕ್ಕಾಗಿ ಕೈಗೊಂಡಿರುವ 4ನೇ ಹಂತದ ಚಳವಳಿ ಇದಾಗಿದೆ’ ಎಂದು ಹೇಳಿದರು.

‘ಅಂದು ಬೆಳಿಗ್ಗೆ ಆರ್‌ಟಿಒ ಸಮೀಪದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆ ಆರಂಭವಾಗಲಿದೆ. ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸ್ವಾಮೀಜಿ ಅವರನ್ನು ಮೆರವಣಿಗೆಯಲ್ಲಿ ಬರ ಮಾಡಿಕೊಳ್ಳಲಾಗುವುದು’ ಎಂದರು.

‘ಪ್ರವರ್ಗ 3ಬಿಯಲ್ಲಿರುವ ನಮ್ಮ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಬಹುತೇಕರು ಕೃಷಿಯನ್ನೇ ಅವಲಂಬಿಸಿದ್ದಾರೆ. ಆದ್ದರಿಂದ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ಅವಕಾಶಕ್ಕಾಗಿ ಮೀಸಲಾತಿ ಅಗತ್ಯವಾಗಿದೆ. ಸಿಗುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ. ಹಕ್ಕೊತ್ತಾಯ ಮಂಡಿಸಿರುವ ನಾವು, ಬೇಡಿಕೆ ಈಡೇರುವವರೆಗೂ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಸಲಿದ್ದೇವೆ. ಮುರುಗೇಶ ನಿರಾಣಿ ಸೇರಿದಂತೆ ಸರ್ಕಾರದ ಭಾಗವಾಗಿರುವ ನಮ್ಮ ಸಮಾಜದ ಸಚಿವರು ಕೂಡ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ’ ಎಂದು ತಿಳಿಸಿದರು.

ವಕೀಲ ದಿನೇಶ ಪಾಟೀಲ ಮಾತನಾಡಿ, ‘ಪ್ರವರ್ಗ 2ಗೆ ಸೇರಿಸುವಂತೆ ರಾಜ್ಯ ಸರ್ಕಾರವನ್ನು ಹಾಗೂ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಆರು ತಿಂಗಳಲ್ಲಿ ಮೀಸಲಾತಿ ನೀಡಲಾಗುವುದು ಎಂದು ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಮಂಡಲ ಅಧಿವೇಶನದಲ್ಲಿ ಭರವಸೆ ನೀಡಿದ್ದರು. ಆ ಗಡುವು ಸೆ.15ರಂದು ಮುಗಿದಿದೆ. ಹೀಗಾಗಿ, ಹೋರಾಟ ಪುನರಾರಂಭಿಸಿದ್ದೇವೆ’ ಎಂದರು.

‘ಸರ್ಕಾರದ ನಡೆಯಿಂದಾಗಿ ಸಮಾಜದವರಿಗೆ ತೀವ್ರ ನಿರಾಸೆಯಾಗಿದೆ. ಇದೇ ರೀತಿ ವಿರೋಧಾಭಾಸವನ್ನು ಮುಂದುವರಿಸಿದರೆ ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಹೆಚ್ಚಿನ ಕ್ರಮ‌ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಆರಂಭಗೊಂಡಿರುವ ಪಂಚಾಯತ್‌ ರಾಜ್ಯದಾದ್ಯಂತ ನಡೆದು, ಅ.1ರಂದು ಬೆಂಗಳೂರು ತಲುಪಲಿದೆ. ಪಕ್ಷಾತೀತವಾದ ಹೋರಾಟವಿದು’ ಎಂದರು.

ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಪಾಟೀಲ, ಮುಖಂಡರಾದ ರುದ್ರಣ್ಣ ಚಂದರಗಿ, ರೋಹಿಣಿ ಪಾಟೀಲ, ಶಂಕರ ಮಾಡಲಗಿ, ನಿಂಗಪ್ಪ ಪಿರೋಜಿ, ಸುರೇಶ ಖಿರಾಯಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.