ADVERTISEMENT

ಪಂಚಾಯಿತಿಗಳಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ವಿಳಂಬ ಸಲ್ಲ: ಮಹಾಂತೇಶ ಕವಟಗಿಮಠ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 11:00 IST
Last Updated 17 ಡಿಸೆಂಬರ್ 2025, 11:00 IST
<div class="paragraphs"><p>ಮಹಾಂತೇಶ ಕವಟಗಿಮಠ</p></div>

ಮಹಾಂತೇಶ ಕವಟಗಿಮಠ

   

ಬೆಳಗಾವಿ: ‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಅವಧಿ ಮುಗಿದ ನಂತರ, ತೆರವಾದ ಸ್ಥಾನಕ್ಕೆ ಮತ್ತೆ ಚುನಾವಣೆಗೆ ವಿಳಂಬ ಮಾಡಬಾರದು. ನಿರ್ದಿಷ್ಟ ಅವಧಿಯಲ್ಲೇ ಚುನಾವಣೆ ನಡೆಸಲು ರಾಜ್ಯ ಸರ್ಕಾರ ವಿಶೇಷ ಕಾನೂನು ಜಾರಿಗೆ ತರಬೇಕು’ ಎಂದ ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಒತ್ತಾಯಿಸಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಪಂಚಾಯತ್‌ರಾಜ್‌ ಕಾಯ್ದೆಗೆ ತಿದ್ದುಪಡಿ ತಂದು, ಎಲ್ಲ ಅಧಿಕಾರವನ್ನು ರಾಜ್ಯ ಸರ್ಕಾರ ತನ್ನ ಹಿಡಿತದಲ್ಲಿ ಇರಿಸಿಕೊಂಡಿದೆ. ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆದಿಲ್ಲ. ಮೀಸಲಾತಿ ವಿಚಾರವಾಗಿ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ಮಧ್ಯೆ ತಿಕ್ಕಾಟ ನಡೆಯುತ್ತಲೇ ಇದೆ’ ಎಂದು ದೂರಿದರು.

ADVERTISEMENT

‘ರಾಜ್ಯದ 31 ಜಿಲ್ಲೆಗಳ 1,130 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮತ್ತು 239 ತಾಲ್ಲೂಕುಗಳ 3,671 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿಯನ್ನು ಸರ್ಕಾರ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಿದೆ. ಆದರೆ, ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಈ ಪ್ರಕ್ರಿಯೆ ವಿಳಂಬವಾಗುತ್ತಿದೆ’ ಎಂದು ದೂರಿದರು.

‘ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರು ಜನರಿಗೆ ಬೇಗ ಸ್ಪಂದಿಸುವವರು. ಆದರೆ, ಜಿ.ಪಂ ಮತ್ತು ತಾ.ಪಂನಲ್ಲಿ ಈಗ ಜನಪ್ರತಿನಿಧಿಗಳೇ ಇಲ್ಲ. ಇದರಿಂದ ಅಭಿವೃದ್ಧಿ ಕೆಲಸಕ್ಕೆ ಪೆಟ್ಟು ಬಿದ್ದಿದ್ದು, ಜನರ ಸಮಸ್ಯೆ ಆಲಿಸಲು ಸದಸ್ಯರೇ ಇಲ್ಲದಂತಾಗಿದೆ’ ಎಂದು ಆರೋಪಿಸಿದರು.

‘ಜಿ.ಪಂ ಹಾಗೂ ತಾ.ಪಂ ಚುನಾವಣೆಗಳನ್ನು ನಡೆಸುವ ಮೂಲಕ ರಾಜ್ಯ ಸರ್ಕಾರವು ಅಧಿಕಾರ ವಿಕೇಂದ್ರಿಕರಣಕ್ಕೆ ಒತ್ತು ನೀಡಬೇಕಿತ್ತು. ಆದರೆ, ಚುನಾವಣೆ ನಡೆಸದೆ ದಿನದೂಡುತ್ತಿದೆ. ದೇಶದಲ್ಲೇ ಅಧಿಕಾರ ವಿಕೇಂದ್ರಿಕರಣಕ್ಕೆ ಮಾದರಿಯಾಗಿರುವ ಕರ್ನಾಟಕದ ಹೆಸರಿಗೆ ಅಪಕೀರ್ತಿ ಬಾರದಂತೆ ಈಗ ನಡೆದುಕೊಳ್ಳಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ’ ಎಂದರು.

‘2026ರ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುವುದಾಗಿ ಸರ್ಕಾರ ತಿಳಿಸಿದೆ. ಕೊಟ್ಟ ಮಾತಿನಂತೆ ಚುನಾವಣೆ ನಡೆಸಿ, ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಬೇಕಿದೆ’ ಎಂದು ಆಗ್ರಹಿಸಿದರು.

‘ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರವಧಿಯೂ ಇದೇ ಡಿಸೆಂಬರ್‌ ಅಂತ್ಯಕ್ಕೆ ಮುಗಿಯಲಿದೆ. ತೆರವಾದ ಆ ಸ್ಥಾನಗಳಿಗೆ ಚುನಾವಣೆ ನಡೆಸಲು ಸರ್ಕಾರ ಕೈಗೊಂಡ ಕ್ರಮಗಳು ಏನು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಕುರತು ಸರ್ಕಾರ ಸ್ಪಷ್ಟನೆ ನೀಡಬೇಕು’ ಎಂದೂ ಆಗ್ರಹಿಸಿದರು.

‘ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಗದಿತ ಅವಧಿಯಲ್ಲಿ ನಡೆಯದ ಕಾರಣ ಕೇಂದ್ರದ ₹1,300 ಕೋಟಿ ಅನುದಾನ ಕಡಿತಗೊಂಡಿದೆ. ಹಾಗಾಗಿ ನಮ್ಮ ನಿಯೋಗದೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಭೇಟಿಯಾಗಿ, ತ್ವರಿತವಾಗಿ ಚುನಾವಣೆ ನಡೆಸುವಂತೆ ಮನವಿ ಮಾಡುತ್ತೇವೆ’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪುರ, ಶಿವಾಜಿ ಸುಂಠಕರ, ಮಹೇಶ ಭಾತೆ, ರಮೇಶ ಪರವಿನಾಯ್ಕರ ಇತರರಿದ್ದರು.

‍‘ಪ್ರತ್ಯೇಕ ರಾಜ್ಯದ ಹೋರಾಟ ಅನಿವಾರ್ಯ’

‘ರಾಜ್ಯ ಸರ್ಕಾರವು ಪ್ರಾದೇಶಿಕ ಅಸಮತೋಲನ ನಿವಾರಿಸಬೇಕು. ಇಲ್ಲದಿದ್ದರೆ ಪ್ರತ್ಯೇಕ ರಾಜ್ಯದ ಹೋರಾಟ ಅನಿವಾರ್ಯವಾಗುತ್ತದೆ’ ಎಂದು ಮಹಾಂತೇಶ ಕವಟಗಿಮಠ ಎಚ್ಚರಿಕೆ ಕೊಟ್ಟರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಅಖಂಡ ಕರ್ನಾಟಕದ ಪರಿಕಲ್ಪನೆ ಬಯಸಿದವರು. ಆದರೆ, ಇಂದು ಬೆಂಗಳೂರು ಮತ್ತು ಮೈಸೂರು ಕೇಂದ್ರೀಕೃತವಾಗಿ ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿದೆ. ಈ ತಾರತಮ್ಯ ನಿವಾರಿಸಬೇಕು’ ಎಂದು ಆಗ್ರಹಿಸಿದರು.

‘ಉತ್ತರ ಕರ್ನಾಟಕದ ಜನರಿಗೆ ಸರ್ಕಾರ ಸುಳ್ಳು ಹೇಳಿ ಮೋಸ ಮಾಡಬಾರದು. ಇಲ್ಲದಿದ್ದರೆ ದಿ.ಉಮೇಶ ಕತ್ತಿ ಮಾತನಾಡಿದ ರೀತಿಯಲ್ಲೇ  ಹೋರಾಟ ಮಾಡಬೇಕಾಗುತ್ತದೆ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.