ಪಂಢರಪುರ(ಮಹಾರಾಷ್ಟ್ರ): ಭೀಮಾನದಿ ತಟದಲ್ಲಿರುವ ಪುರಾಣ ಪ್ರಸಿದ್ಧ ವಿಠ್ಠಲನ ಸನ್ನಿಧಿಯಲ್ಲಿ ಈಗ ಭಕ್ತಿಯ ಹೊಳೆಯೇ ಹರಿಯುತ್ತಿದೆ. ಆಷಾಢ ಏಕಾದಶಿ ಪ್ರಯುಕ್ತ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣದಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಹರಿದುಬರುತ್ತಿದ್ದಾರೆ. ಈ ತಿಂಗಳ 17ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಉಪಸ್ಥಿತಿಯಲ್ಲಿ ವಿಶೇಷ ಪೂಜೆಗೆ ಭಕ್ತಗಣ ಸಾಕ್ಷಿಯಾಗಲಿದೆ.
‘ಆಷಾಢ ಏಕಾದಶಿಯಂದು ಪಂಢರಪುರದಲ್ಲಿ 15 ಲಕ್ಷಕ್ಕೂ ಅಧಿಕ ಭಕ್ತರು ಸೇರಲಿದ್ದಾರೆ. ಭೀಮಾನದಿಯಲ್ಲಿ ಪವಿತ್ರ ಸ್ನಾನ ಮಾಡಿ ವಿಠ್ಠಲ–ರುಕ್ಮಿಣಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. 24x7 ಮಾದರಿಯಲ್ಲಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದೇವೆ. ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಿದ್ದೇವೆ’ ಎಂದು ವಿಠ್ಠಲ–ರುಕ್ಮಿಣಿ ಮಂದಿರ ಸಮಿತಿಯ ಟ್ರಸ್ಟಿ ಜ್ಞಾನೇಶ್ವರ ಜಳಗಾಂವಕರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ವರ್ಷ ಮಳೆ ಮಧ್ಯೆಯೂ ಲಕ್ಷಾಂತರ ಸಂತರು ಪಂಢರಪುರಕ್ಕೆ ಆಗಮಿಸುತ್ತಿದ್ದಾರೆ. ಕೆಲವರು 300ರಿಂದ 500 ಕಿ.ಮೀ ದೂರದಿಂದ ಪಲ್ಲಕ್ಕಿಗಳನ್ನು ಹೊತ್ತು ಬರುತ್ತಿದ್ದಾರೆ. ಜುಲೈ 16ರ ಸಂಜೆಯ ಹೊತ್ತಿಗೆ ಇಡೀ ಧಾರ್ಮಿಕ ಕ್ಷೇತ್ರ ಜನರಿಂದ ಕಿಕ್ಕಿರಿದು ತುಂಬಲಿದೆ’ ಎಂದು ಸ್ಥಳೀಯ ಮುಖಂಡ ಸೂರ್ಯಕಾಂತ ಭಿಸೆ ಹೇಳಿದರು.
ಹೆದ್ದಾರಿಯುದ್ದಕ್ಕೂ ವಿಠ್ಠಲನ ಗಾನ:
ಪಂಢರಪುರಕ್ಕೆ ಸಂಪರ್ಕ ಕಲ್ಪಿಸುವ ಯಾವುದೇ ರಸ್ತೆಯಲ್ಲಿ ಈಗ ವಿಠ್ಠಲನ ಗುಣಗಾನ ನಡೆದಿದೆ. ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ಸಂತರು, ಮಳೆ–ಬಿಸಿಲು ಯಾವುದನ್ನೂ ಲೆಕ್ಕಿಸದೆ ನಿತ್ಯ 25 ಕಿ.ಮೀ ಹೆಜ್ಜೆ ಹಾಕುತ್ತಿದ್ದಾರೆ. ಕೈಯಲ್ಲಿ ತಂಬೂರಿ, ತಾಳ, ಹೆಗಲಿಗೆ ಡೋಲು ಕಟ್ಟಿಕೊಂಡು ಹಾಡುತ್ತ, ಕುಣಿಯುತ್ತ, ಕಸರತ್ತು ಮಾಡುತ್ತ ಪಾದಯಾತ್ರೆ ಮಾಡುತ್ತಿದ್ದಾರೆ. ಮೀರಜ್–ಸೋಲಾಪುರ ಹೆದ್ದಾರಿಯಲ್ಲಿ ಸಂತರು ಸಾಲು ಸಾಲಾಗಿ ಪಾದಯಾತ್ರೆ ಮೂಲಕ ಹೋಗುತ್ತಿರುವ ದೃಶ್ಯ ಕಣ್ಣಿಗೆ ಬೀಳುತ್ತಿವೆ.
ಪಾದಯಾತ್ರೆ ಮಾಡುವುದೆಂದರೆ ಸುಮ್ಮನೇ ನಡೆದುಕೊಂಡು ಹೋಗುವುದಲ್ಲ. ಅಲ್ಲಿ ಭಕ್ತಿ, ಶ್ರದ್ಧೆಯ ದರ್ಶನವಾಗುತ್ತಿದೆ. ಮಕ್ಕಳು, ಮಹಿಳೆಯರು, ಯುವಕ–ಯುವತಿಯರು ಸೇರಿದಂತೆ ಎಲ್ಲ ವಯೋಮಾನದವರು ಮತ್ತು ಎಲ್ಲ ಸಮುದಾಯದವರು ಕಾಲ್ನಡಿಗೆ ಮೂಲಕ ವಿಠ್ಠಲನ ದರ್ಶನಕ್ಕೆ ಹೋಗುತ್ತಿದ್ದಾರೆ. ಮಾರ್ಗ ಮಧ್ಯೆ ಆಯಾ ಊರಿನ ಭಕ್ತರು ಮಾಡಿದ ಪ್ರಸಾದ ಸ್ವೀಕರಿಸಿ ಕೆಲವು ಸ್ಥಳಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಮತ್ತೆ ನಸುಕಿನಲ್ಲಿ ಎದ್ದು ಹೊರಟರೆ ಸಂಜೆಯವರೆಗೂ ಹೆಜ್ಜೆ ಮೇಲೆ ಹೆಜ್ಜೆಗಳು ಸಾಗುತ್ತಿವೆ. ಭಜನೆ, ಕೀರ್ತನೆ, ಪಗಟೆ ಆಟ, ಕುಣಿತ, ಹಾಡು, ಸಂಗೀತ ಎಲ್ಲವೂ ಯಾತ್ರಿಕರಿಗೆ ದೇಹಕ್ಕೆ ದಣಿವಾಗದಂತೆ ನಡೆಯುವುದಕ್ಕೆ ಸ್ಫೂರ್ತಿ ತುಂಬುತ್ತಿವೆ.
ಪಾದರಕ್ಷೆ ಧರಿಸಿ ಯಾತ್ರೆಯಲ್ಲಿ ಪಾಲ್ಗೊಳ್ಳುವವರು ಕಡಿಮೆ. ಬರಿಗಾಲಲ್ಲಿ ನಡೆಯುವವರು, ಮರಗಾಲು ಕಟ್ಟಿಕೊಂಡವರು ಇದ್ದಾರೆ. ಸಂತರ ಮುಂದೆ ಅಲಂಕೃತ ವಾಹನಗಳು ಮತ್ತು ಅದರ ಹಿಂದೆ ಸಿಂಗರಿಸಿದ ಎತ್ತಿನ ಜೋಡಿಗಳೂ ಸಾಗುತ್ತಿವೆ. ಸುಡು ಬಿಸಿಲಲ್ಲೂ ಉತ್ಸಾಹದಿಂದ ಹೆಜ್ಜೆಹಾಕುವ ಸಂತರಿಗೆ ಕೆಲವು ಗಣ್ಯರು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ವಾರಕರಿಗಳು ಮುಂದೆ ಹೋಗುತ್ತಿದ್ದರೆ, ಅವರ ಹಿಂದೆ ಕುಡಿಯುವ ನೀರಿನ ಟ್ಯಾಂಕರ್‌ಗಳು ಬರುತ್ತಿವೆ.
ಕೈಯಲ್ಲಿ ತಂಬೂರಿ, ತಾಳ, ಹೆಗಲಿಗೆ ಡೋಲು ಕಟ್ಟಿಕೊಂಡು ಹಾಡುತ್ತ, ಕುಣಿಯುತ್ತ ಪಾದಯಾತ್ರೆ ಮಾಡುತ್ತಿದ್ದಾರೆ. ಮೀರಜ್–ಸೋಲಾಪುರ ಹೆದ್ದಾರಿಯಲ್ಲಿ ಸಂತರು ಸಾಲು ಸಾಲಾಗಿ ಪಾದಯಾತ್ರೆ ಮೂಲಕ ಹೋಗುತ್ತಿರುವ ದೃಶ್ಯಗಳು ಕಣ್ಣಿಗೆ ಬೀಳುತ್ತಿವೆ.
‘14 ವರ್ಷಗಳಿಂದ ಹೋಗುತ್ತಿದ್ದೇವೆ’
‘14 ವರ್ಷಗಳಿಂದ ಪಾದಯಾತ್ರೆ ಮೂಲಕ ಪಂಢರಪುರಕ್ಕೆ ಹೋಗುತ್ತಿದ್ದೇವೆ. ನಮ್ಮ ತಂಡದಲ್ಲಿ 250 ಜನರಿದ್ದಾರೆ. 8 ದಿನಗಳಲ್ಲಿ 210 ಕಿ.ಮೀ ದೂರ ಕ್ರಮಿಸಿ ಜುಲೈ 15ರಂದು ವಿಠ್ಠಲನ ಕ್ಷೇತ್ರಕ್ಕೆ ಹೋಗುತ್ತಿದ್ದೇವೆ. 16ರಂದು ಇಡೀ ಊರಿನ ಪ್ರದಕ್ಷಿಣೆ ಹಾಕುತ್ತೇವೆ. ಆಷಾಢ ಏಕಾದಶಿಯಂದು ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದು ದ್ವಾದಶಿಯಂದು ನಮ್ಮೂರಿಗೆ ಮರಳುತ್ತೇವೆ’ ಎಂದು ಚಿಕ್ಕೋಡಿ ತಾಲ್ಲೂಕಿನ ಡೋಣವಾಡದ ಸಂತರಾದ ರಾಚಪ್ಪ ಬಾಗಿ ಶಂಕರ ಕಿವಡ ಕಲ್ಮೇಶ ಕಿವಡ ತಿಳಿಸಿದರು. ‘ನಾನು ಸಾಗುವ ಮಾರ್ಗದುದ್ದಕ್ಕೂ ವಿಠ್ಠಲನ ಭಕ್ತರು ಪ್ರಸಾದ ವ್ಯವಸ್ಥೆ ಮಾಡುತ್ತಾರೆ. ವಸತಿಗೆ ಸ್ಥಳ ನೀಡುತ್ತಾರೆ. ಈ ಬಾರಿ ಮಳೆಯಲ್ಲೇ ಹೆಜ್ಜೆಹಾಕಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.