ADVERTISEMENT

ಪಂಢರಪುರದಲ್ಲಿ ಕಾರ್ತಿಕ ಏಕಾದಶಿ: ಏಕನಾಥ ಶಿಂಧೆ ದಂಪತಿಯಿಂದ ಸರ್ಕಾರಿ ಮಹಾಪೂಜಾ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 12:38 IST
Last Updated 2 ನವೆಂಬರ್ 2025, 12:38 IST
   

ಪಂಢರಪುರ(ಸೋಲಾಪುರ): ಕಾರ್ತಿಕ ಏಕಾದಶಿ ಯಾತ್ರೆ ಅಂಗವಾಗಿ ಪಂಢರಪುರದಲ್ಲಿ ಭಾನುವಾರ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಲಕ್ಷಾಂತರ ಭಕ್ತರು ವಿಠಲ–ರುಕ್ಮಿಣಿಯ ದರ್ಶನ ಪಡೆದು ಪುನೀತರಾದರು.  

ವಾರಕಾರಿಗಳ ತಾಳ, ಮೃದಂಗಗಳ ನೀನಾದ ಹಾಗೂ ಹರಿನಾಮಗಳ ಜಯಘೋಷ ಚಂದ್ರಭಾಗ ತೀರದಲ್ಲಿ ಪ್ರತಿಧ್ವನಿಸಿತು.

ಭಾನುವಾರ ಮುಂಜಾನೆ 2.30ಕ್ಕೆ ವಿಠ್ಠಲ-ರುಕ್ಮಿಣಿಯರಿಗೆ ಸರ್ಕಾರಿ ಮಹಾಪೂಜೆಯನ್ನು ಉಪಮುಖ್ಯಮಂತ್ರಿ ಏಕನಾಥ ಶಿಂಧೆ, ಪತ್ನಿ ಲತಾ ಅವರೊಂದಿಗೆ ಹಾಗೂ ವಾರಕರಿ ದಂಪತಿ ನಾಂದೇಡ ಮೂಲದ ರಾಮರಾವ್‌ ವಾಲೆಗಾವಕರ ಮತ್ತು ಸುಶೀಲಾಬಾಯಿ, ದೇವಸ್ಥಾನ ಸಮಿತಿಯ ಸಹ ಅಧ್ಯಕ್ಷ ಗಹಿನಿನಾಥ ಔಸೆಕರ್ ಮಹಾರಾಜ ದಂಪತಿ, ಮೊಹೋಳ ತಾಲ್ಲೂಕಿನ ಪಾಪರಿ ಹಾಗೂ ದೇವಡಿ ಶಾಲಾ ವಿದ್ಯಾರ್ಥಿಗಳಾದ ಮಾನಸಿ ಮಾಳಿ ಹಾಗೂ ಆರ್ಯ ಥೋರಾತ ಮೂಲಕ ನೆರವೇರಿಸಿದರು.

ADVERTISEMENT

ಶ್ರೀವಿಠ್ಠಲ-ರುಕ್ಮಿಣಿಯ ಮಹಾಪೂಜೆ ನೆರವೇರಿಸಿ ಮಾತನಾಡಿದ  ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ, ಭಕ್ತರಿಗೆ ಕಡಿಮೆ ಸಮಯದಲ್ಲಿ ಹಾಗೂ ಉತ್ತಮ ಸೌಲಭ್ಯಗಳಲ್ಲಿ ದರ್ಶನ ದೊರಕಲೆಂದು ತಿರುಪತಿಯ ಮಾದರಿಯಲ್ಲಿ ದರ್ಶನ ಮಂದಿರ ನಿರ್ಮಿಸಲು ರಾಜ್ಯ ಸರ್ಕಾರ ₹130 ಕೋಟಿ ಮೊತ್ತದ ಯೋಜನೆಗೆ ಅನುಮೋದಿಸಿದೆ. ದರ್ಶನ ಮಂದಿರ ಕಾಮಗಾರಿ ವೇಗವಾಗಿ ನಡೆಯಬೇಕು ಎಂದರು.

ರಾಜ್ಯ ಸಾರಿಗೆ ನಿಗಮದಿಂದ ವಾರಕರಿಗೆ ವರ್ಷಪೂರ್ತಿ ಉಚಿತ ಬಸ್ ಪಾಸ್ ನೀಡಲಾಗುತ್ತಿತ್ತು. ಈಗ ಅದು ಶಾಶ್ವತವಾಗಿ ನೀಡಲಾಗುವುದು. ದೇವಸ್ಥಾನ ಸಮಿತಿ ಮತ್ತು ಎಂಟಿಡಿಸಿ ನಡುವಿನ ಜಮೀನು ಒಪ್ಪಂದವನ್ನು 30 ವರ್ಷಗಳವರೆಗೆ ವಿಸ್ತರಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಸರ್ವೇ ನಂ. 161ರ ಜಮೀನು ಸಂಬಂಧಿಸಿದ ಪ್ರಸ್ತಾವ ಮುಂದಿನ ತಿಂಗಳಲ್ಲಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗುವುದು ಎಂದರು.

ಚಂದ್ರಭಾಗಾ ಸೇರಿದಂತೆ ರಾಜ್ಯದ ಎಲ್ಲಾ ನದಿಗಳನ್ನು ಮಾಲಿನ್ಯಮುಕ್ತಗೊಳಿಸಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ. ಈ ವರ್ಷದ ಕಾರ್ತಿಕ ವಾರಿಗೆ ಹೆಚ್ಚುವರಿ ₹5 ಕೋಟಿ ನಿಧಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ದೇವಸ್ಥಾನ ಸಮಿತಿಯ 2026ರ ದಿನಚರಿಯನ್ನು ಬಿಡುಗಡೆ ಮಾಡಲಾಯಿತು.

ಅಧ್ಯಕ್ಷ ಗಹಿನಿನಾಥ ಮಹಾರಾಜ ಔಸೆಕರ, ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಶೆಲ್ಕೆ, ಗ್ರಾಮ ವಿಕಾಸ ಹಾಗೂ ಉಸ್ತುವಾರಿ ಸಚಿವ ಜಯಕುಮಾರ ಗೊರೆ, ಗೃಹ ಸಚಿವ ಯೋಗೇಶ ಕದಮ್‌, ಉದ್ಯೋಗ ಖಾತ್ರಿ ಯೋಜನೆ ಸಚಿವ ಭರತ ಗೊಗಾವಲೆ, ಸಂಸದ ಶ್ರೀಕಾಂತ ಶಿಂಧೆ, ಜಿಲ್ಲಾಧಿಕಾರಿ ಕುಮಾರ್ ಆಶೀರ್ವಾದ, ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಲದೀಪ ಜಂಗಮ, ಪೊಲೀಸ್ ವರಿಷ್ಠಾಧಿಕಾರಿ ಅತುಲ ಕುಲಕರ್ಣಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.