ADVERTISEMENT

ಪಂಜಾಬ್‌ ಅಕ್ಕಿ ಕ್ಯಾನ್ಸರ್ ಗುಳಿಗೆ ಕೊಟ್ಟಂತೆ: ಉಮೇಶ್‌ ಕತ್ತಿ

ಅಧಿಕಾರಿಗಳ ಸಭೆಯಲ್ಲಿ ಸಚಿವ ಉಮೇಶ ಕತ್ತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 11:38 IST
Last Updated 6 ಫೆಬ್ರುವರಿ 2021, 11:38 IST
ಉಮೇಶ ಕತ್ತಿ
ಉಮೇಶ ಕತ್ತಿ   

ಬೆಳಗಾವಿ: ‘ಪಡಿತರ ವ್ಯವಸ್ಥೆಯಲ್ಲಿ, ಪಂಜಾಬ್‌ನಿಂದ ಅಕ್ಕಿ ತರಿಸಿಕೊಡುವುದು ಜನರಿಗೆ ಕ್ಯಾನ್ಸರ್ ಗುಳಿಗೆ ಕೊಟ್ಟಂತೆ’ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಮ್ಮ ರಾಜ್ಯದಲ್ಲೇ ಖರೀದಿಸಬಾರದೇಕೆ? 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತೇವೆ. ಕ್ವಿಂಟಲ್‌ಗೆ ₹ 1,800 ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸೋಣ. ಅಕ್ಕಿ ಮಾಡಿಸಲು ಬೇಕಾಗುವ ಖರ್ಚನ್ನು ಇಲಾಖೆಯಿಂದ ಕೊಡುತ್ತೇವೆ. ಏಪ್ರಿಲ್‌ ನಂತರ ನಮ್ಮ ರಾಜ್ಯದ ಅಕ್ಕಿಯೇ ಜನರಿಗೆ ವಿತರಣೆ ಆಗುವಂತೆ ಮಾಡಲಾಗುವುದು. ಇದರಿಂದ ರೈತರಿಗೂ ಅನುಕೂಲ ಮತ್ತು ಜನರ ಆರೋಗ್ಯ ಕಾಪಾಡಿದಂತೆಯೂ ಆಗುತ್ತದೆ’ ಎಂದು ತಿಳಿಸಿದರು.

ADVERTISEMENT

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪಡಿತರ ವ್ಯವಸ್ಥೆಯಲ್ಲಿ ಏಪ್ರಿಲ್‌ನಿಂದ ಸಮಗ್ರ ಬದಲಾವಣೆ ತರುತ್ತೇವೆ. ಮಾರ್ಚ್‌ ಅಂತ್ಯದೊಳಗೆ, ಅಕ್ರಮ ಪಡಿತರ ಚೀಟಿಗಳನ್ನು ರದ್ದುಗೊಳಿಸಬೇಕು ಹಾಗೂ ಅರ್ಹರಿಗೆ ಹೊಸದಾಗಿ ಚೀಟಿಗಳ ವಿತರಣೆ ಕ್ರಮ ಕೈಗೊಳ್ಳಬೇಕು. ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗದಂತೆ ನೋಡಿಕೊಳ್ಳಬೇಕು. ಅಕ್ಕಿ ಜೊತೆಗೆ ರಾಗಿ, ಜೋಳ, ಗೋಧಿ ಅಥವಾ ಏನು ಬೇಕು ಎನ್ನುವ ಬಗ್ಗೆ ಜನರಿಂದ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

‘ಆಯಾ ಭಾಗದ ಜನರ ಕೋರಿಕೆಯಂತೆ ಅಕ್ಕಿಯೊಂದಿಗೆ ಗೋಧಿ, ಜೋಳ, ತೊಗರಿ ಬೇಳೆ ಅಥವಾ ರಾಗಿಯನ್ನು ಏಪ್ರಿಲ್‌ನಿಂದ ನೀಡಲಾಗುವುದು. ಉಜ್ವಲ ಯೋಜನೆಯಲ್ಲಿ ಬಡವರಿಗೆ ಅಡುಗೆ ಅನಿಲ ಸಿಲಿಂಡರ್ ಕೊಡುತ್ತಿದ್ದೇವೆ. ಹೀಗಾಗಿ, ಸೀಮೆಎಣ್ಣೆ ವಿತರಣೆ ಮುಂದುವರಿಸಬೇಕೇ, ಬೇಡವೇ ಎಂಬ ಬಗ್ಗೆ ದೆಹಲಿಯಲ್ಲಿ ಸಂಬಂಧಿಸಿದ ಸಚಿವರ ಭೇಟಿ ನಂತರ ನಿರ್ಧರಿಸಲಾಗುವುದು. ಏಪ್ರಿಲ್‌ವರೆಗೆ ಯಥಾಸ್ಥಿತಿ ಇರಲಿದೆ. ಅಡುಗೆ ಎಣ್ಣೆ ವಿತರಣೆ ಬಗ್ಗೆಯೂ ಪರಿಶೀಲಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಉಳ್ಳವರು ಅಡುಗೆ ಅನಿಲ ಸಿಲಿಂಡರ್‌ ಸಬ್ಸಿಡಿ ಬಿಟ್ಟುಕೊಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಯಾನ ಆರಂಭಿಸಿದ್ದರು. ಅದೇ ರೀತಿ ಶ್ರೀಮಂತರು ಬಿಪಿಎಲ್ ಪಡಿತರ ಚೀಟಿ ವಾಪಸ್‌ ಮಾಡುವಂತೆ ಸಚಿವರು ಜನರನ್ನು ಕೋರಬಹುದು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ನಾನು ಮುಂದೆ ಚುನಾವಣೆಯಲ್ಲಿ ನಿಲ್ಲಬೇಕು. ನಾನೇಕೆ ಹೇಳಲಿ? ಅಧಿಕಾರಿಗಳಿಗೆ ಏನಾಗಿದೆ? ಅವರೇ ಕ್ರಮ ವಹಿಸಲಿ. ನಾನು 5 ವರ್ಷಗಳಿಗೊಮ್ಮೆ ಪರೀಕ್ಷೆಗೆ ಹೋಗುವವನು’ ಎಂದಾಗ ಸಭೆಯಲ್ಲಿ ನಗುವಿನ ಅಲೆ ಎದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.