ADVERTISEMENT

‘ದಾನ, ಧರ್ಮದಿಂದ ಪುಣ್ಯ ಪ್ರಾಪ್ತಿ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 14:14 IST
Last Updated 8 ಫೆಬ್ರುವರಿ 2020, 14:14 IST
ಅಥಣಿ ತಾಲ್ಲೂಕಿನ ಕಟಗೇರಿಯಲ್ಲಿ ನಡೆದ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದದಲ್ಲಿ ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ದಾನೇಶ್ವರ ಸ್ವಾಮೀಜಿ ಮಾತನಾಡಿದರು
ಅಥಣಿ ತಾಲ್ಲೂಕಿನ ಕಟಗೇರಿಯಲ್ಲಿ ನಡೆದ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದದಲ್ಲಿ ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ದಾನೇಶ್ವರ ಸ್ವಾಮೀಜಿ ಮಾತನಾಡಿದರು   

ಅಥಣಿ: ‘ಹಣ, ಅಧಿಕಾರವಿದೆ ಎಂದು ಸೊಕ್ಕಿನಿಂದಿರುವುದು ಸರಿಯಲ್ಲ. ಸಿರಿ, ಸಂಪತ್ತು ಇದ್ದಾಗ ದಾನ, ಧರ್ಮ ಮಾಡಿ ಪುಣ್ಯ ಪಡೆದುಕೊಳ್ಳಬೇಕು. ದೇವರಿಗೆ ಬೇಡಿಕೊಂಡ ಹರಕೆಯನ್ನು ತಡ ಮಾಡದೇ ತೀರಿಸುವುದು ಒಳ್ಳೆಯದು. ಪರಮಾತ್ಮ ಮಾಡಿದ ಉಪಕಾರವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ’ ಎಂದು ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ದಾನೇಶ್ವರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಕಟಗೇರಿ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬಂಡಿಗಣಿ ಮಠದಿಂದ ಹಮ್ಮಿಕೊಂಡಿದ್ದ ದೇವಿಯ ನೈವೇದ್ಯ ಹಾಗೂ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದದಲ್ಲಿ ಅವರು ಮಾತನಾಡಿದರು.

‘ಅಧರ್ಮದ ದಾರಿ ಬಿಟ್ಟು ಧರ್ಮದ ದಾರಿಯಲ್ಲಿ ನಡೆದರೆ ಧರ್ಮ ನಮ್ಮನ್ನು ಸದಾ ರಕ್ಷಣೆ ಮಾಡುತ್ತದೆ. ಕಾಯಕದಲ್ಲಿ ದೇವರ ನಾಮಸ್ಮರಣೆ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ದುಷ್ಟರ ಸಂಗ ಮಾಡದೇ ಸಜ್ಜನರ ಸಂಗದಲ್ಲಿ ಜೀವನ ಸಾಗಿಸಿದರೆ ಒಳ್ಳೆಯದು’ ಎಂದು ಸಲಹೆ ನೀಡಿದರು.

ADVERTISEMENT

‘ಬಂಡಿಗಣಿ ಮಠದ ದಾಸೋಹವನ್ನು ಸರ್ವ ದೇವಾದಿಗಳ ಸಹಾಯದಿಂದ ಕೈಲಾಸದ ಬುತ್ತಿಯನ್ನು ತಂದು ನಡೆಸಲಾಗುತ್ತಿದೆ. ಮದ್ಯ ಸೇವಿಸುವುದನ್ನು, ಸುಳ್ಳು ಹೇಳುವುದನ್ನು, ಕಳವು ಮಾಡುವುದನ್ನು ಬಿಟ್ಟರೆ, ಇನ್ನೊಬ್ಬರ ಮನಸ್ಸು ನೋಯಿಸುವುದನ್ನು ಬಿಟ್ಟರೆ ಮಾತ್ರ ಮಠದ ಭಕ್ತರಾಗಲು ಸಾಧ್ಯ. ಮಹಾತ್ಮರ ದರ್ಶನದಿಂದ ಮುಕ್ತಿ ದೊರೆಯುತ್ತದೆ’ ಎಂದರು.

ಮುಖಂಡ ಎಸ್.ಆರ್. ಪಾಟೀಲ ಮಾತನಾಡಿದರು. ತುಕ್ಕಪ್ಪ ಪೂಜೇರಿ, ಶಿವಾನಂದ ಪೂಜೇರಿ, ರಾಜು ಭಂಡಾರಿ, ಎಸ್.ಎಸ್. ಸವದಿ, ಹರಳಯ್ಯ ಅಥಣಿ, ಅಪ್ಪಣ್ಣ ಅವಟಿ, ಮಲಿಕ ಅಥಣಿ ಇದ್ದರು.

ಮಲ್ಲಪ್ಪ ತವನಿದಿ ಸ್ವಾಗತಿಸಿದರು. ಮುರಿಗೆಪ್ಪ ಮಾಲಗಾರ ನಿರೂಪಿಸಿದರು. ಶಿವಾನಂದ ಹಿರೇಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.