ADVERTISEMENT

ಬೆಳಗಾವಿ | ಇದೇನು ಫುಟ್‌ಪಾತೋ, ಪಾರ್ಕಿಂಗ್‌ ಮೈದಾನವೋ?

ಪಾದಚಾರಿಗಳ ಸಂಚಾರಕ್ಕೆ ತೊಂದರೆ, ಕೆಲವೆಡೆ ವ್ಯಾಪಾರಿಗಳಿಂದ ಫುಟ್‌ಪಾ‌ತ್‌ ಅತಿಕ್ರಮಣ

ಇಮಾಮ್‌ಹುಸೇನ್‌ ಗೂಡುನವರ
Published 12 ಮೇ 2025, 4:26 IST
Last Updated 12 ಮೇ 2025, 4:26 IST
ಬೆಳಗಾವಿಯ ಎಸ್‌ಪಿ ಕಚೇರಿಯಿಂದ ಧರ್ಮನಾಥ ಭವನಕ್ಕೆ ಸಾಗುವ ಮಾರ್ಗದ ಫುಟ್‌ಪಾತ್‌ ಮೇಲೆ ಖಾಸಗಿ ಬಸ್‌, ಲಾರಿ ನಿಲುಗಡೆಯಾಗಿರುವುದು   ಪ್ರಜಾವಾಣಿ ಚಿತ್ರಗಳು: ಏಕನಾಥ ಅಗಸಿಮನಿ
ಬೆಳಗಾವಿಯ ಎಸ್‌ಪಿ ಕಚೇರಿಯಿಂದ ಧರ್ಮನಾಥ ಭವನಕ್ಕೆ ಸಾಗುವ ಮಾರ್ಗದ ಫುಟ್‌ಪಾತ್‌ ಮೇಲೆ ಖಾಸಗಿ ಬಸ್‌, ಲಾರಿ ನಿಲುಗಡೆಯಾಗಿರುವುದು   ಪ್ರಜಾವಾಣಿ ಚಿತ್ರಗಳು: ಏಕನಾಥ ಅಗಸಿಮನಿ   

ಬೆಳಗಾವಿ: ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ನೆರವಾಗಲೆಂದು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ವತಿಯಿಂದ ನಗರದ ವಿವಿಧೆಡೆ ನಿರ್ಮಿಸಿದ ಪಾದಚಾರಿ ಮಾರ್ಗಗಳು ಈಗ ವಾಹನ ನಿಲುಗಡೆ ತಾಣಗಳಾಗಿ ಮಾರ್ಪಟ್ಟಿವೆ.

ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಿಂದ ಧರ್ಮನಾಥ ಭವನ ಮಾರ್ಗವಾಗಿ ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯ ಕೆಳಸೇತುವೆವರೆಗೆ ಸಾಗಿದರೆ, ರಸ್ತೆಯ ಎರಡೂ ಬದಿ ಫುಟ್‌ಪಾತ್‌ನಲ್ಲಿ ಸಾಲು ಸಾಲಾಗಿ ವಾಹನ ನಿಲ್ಲಿಸಿರುವುದು ಕಂಡುಬರುತ್ತದೆ. ದ್ವಿಚಕ್ರ ವಾಹನ, ಕಾರುಗಳಷ್ಟೇ ಅಲ್ಲ; ಖಾಸಗಿ ಬಸ್‌ಗಳನ್ನೂ ನಿರಾತಂಕವಾಗಿ ನಿಲ್ಲಿಸಲಾಗುತ್ತಿದೆ.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತಕ್ಕೆ ಸಾಗುವ ಮಾರ್ಗ, ಧರ್ಮನಾಥ ಭವನದಿಂದ ನೆಹರು ನಗರದ ಮಾರ್ಗ, ಸುಭಾಷ ನಗರದ ಮರಾಠ ಮಂಡಳ ಕಾಲೇಜು ಎದುರಿನ ಮಾರ್ಗ, ಕಾಲೇಜು ರಸ್ತೆ, ಶಿವಬಸವ ನಗರದ ಕೆಪಿಟಿಸಿಎಲ್‌ ರಸ್ತೆ ಮತ್ತು ಟಿಳಕವಾಡಿಯ ಮಹಾತ್ಮ ಗಾಂಧಿ ರಸ್ತೆ ಮತ್ತಿತರ ಮಾರ್ಗಗಳಲ್ಲೂ ಇದಕ್ಕಿಂತ ಪರಿಸ್ಥಿತಿ ಭಿನ್ನವಿಲ್ಲ.

ADVERTISEMENT

ಆತಂಕದಲ್ಲೇ ಸಂಚಾರ:

ಕಳೆದೊಂದು ದಶಕದಲ್ಲಿ ಬೆಳಗಾವಿ ಮಹಾನಗರದಲ್ಲಿ ವಾಹನಗಳ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಸವಾರರೂ ವೇಗವಾಗಿ ವಾಹನ ಓಡಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿವೆ. ಇದರಿಂದ ಪಾದಚಾರಿಗಳಿಗೆ ತೊಂದರೆ ಆಗಬಾರದು. ಅವರು ಸುರಕ್ಷಿತವಾಗಿ ನಡೆದುಕೊಂಡು ಹೋಗಲೆಂದು ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗಿದೆ. ಆದರೆ, ಈಗ ಅವುಗಳೆಲ್ಲ ಅತಿಕ್ರಮಣವಾದ ಕಾರಣ, ಪಾದಚಾರಿಗಳು ರಸ್ತೆಯಲ್ಲೇ ಆತಂಕದಿಂದ ಹೆಜ್ಜೆ ಹಾಕುತ್ತಿರುವುದು ಕಂಡುಬರುತ್ತಿದೆ. ಜತೆಗೆ ಸಂಚಾರ ಸಮಸ್ಯೆಯೂ ತಲೆದೋರುತ್ತಿದೆ.

ವ್ಯಾಪಾರಕ್ಕೆ ಬಳಕೆ

ಬೆಳಗಾವಿಯ ವಿವಿಧ ರಸ್ತೆಗಳಲ್ಲಿ ನಿರ್ಮಿಸಿದ ಪಾದಚಾರಿ ಮಾರ್ಗಗಳನ್ನು ತರಕಾರಿ ಹಣ್ಣು–ಹಂಪಲು ಪಾತ್ರೆಗಳು ಮತ್ತಿತರ ವಸ್ತುಗಳ ಮಾರಾಟಕ್ಕೆ ಬಳಕೆ ಮಾಡಲಾಗುತ್ತಿದೆ. ಫುಟ್‌ಪಾತ್‌ ಮೇಲೆಯೇ ಕುರ್ಚಿಗಳು ಮೇಜುಗಳನ್ನು ಇರಿಸಿ ಕೆಲವರು ವ್ಯಾಪಾರ ಮಾಡುತ್ತಿದ್ದಾರೆ.  ಕೆಲವು ಕಂಪನಿಯವರು ತಮ್ಮ ಜಾಹೀರಾತು ಫಲಕಗಳನ್ನು ಇರಿಸಿ ನಗರದ ಮುಖ್ಯ ರಸ್ತೆಗಳಲ್ಲಿನ ಫುಟ್‌ಪಾತ್‌ ಅತಿಕ್ರಮಿಸಿಕೊಂಡಿದ್ದಾರೆ. ಆದರೆ ಪಾಲಿಕೆ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರು ಕ್ರಮ ವಹಿಸದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಅತಿಕ್ರಮಣ ತೆರವು ವೇಗ ಪಡೆಯಲಿ: ಸಾರ್ವಜನಿಕರ ಒತ್ತಾಯ

ಬೆಳಗಾವಿಯ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿಕೊಂಡಿದ್ದ ಅಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರು ಇತ್ತೀಚೆಗೆ ತೆರವುಗೊಳಿಸಿದ್ದಾರೆ. ಪರವಾನಗಿ ಇಲ್ಲದೆ ವ್ಯಾಪಾರ ನಡೆಸುತ್ತಿರುವ ಅಂಗಡಿಕಾರರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ‘ಪಾಲಿಕೆ ಸಿಬ್ಬಂದಿ ಮತ್ತು ಸಂಚಾರ ಪೊಲೀಸರು ಆಗೊಮ್ಮೆ ಈಗೊಮ್ಮೆ ಅತಿಕ್ರಮಣ ತೆರವುಗೊಳಿಸಿದರೆ ಸಾಲದು. ಈ ಪ್ರಕ್ರಿಯೆಗೆ ವೇಗ ನೀಡಿ ಎಲ್ಲ ಪಾದಚಾರಿ ಮಾರ್ಗಗಳನ್ನು ಪಾದಚಾರಿಗಳ ಸಂಚಾರಕ್ಕೆ ಮುಕ್ತಗೊಳಿಸಬೇಕು’ ಎಂಬುದು ಸಾರ್ವಜನಿಕರ ಒತ್ತಾಯ.

ಯಾರು ಏನಂತಾರೆ...?

ಬೆಳಗಾವಿಯ ಕೆಲವು ಫುಟ್‌ಪಾತ್‌ಗಳ ಮೇಲಿನ ಅತಿಕ್ರಮಣ ಈಚೆಗೆ ತೆರವುಗೊಳಿಸಿದ್ದೇವೆ. ಈಗ ಮತ್ತೆ ಕಾರ್ಯಾಚರಣೆ ಚುರುಕುಗೊಳಿಸುತ್ತೇವೆ. ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿ ವಾಹನ ನಿಲುಗಡೆಗೆ ಬಳಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ

– ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ನಗರ ಪೊಲೀಸ್‌ ಕಮಿಷನರ್‌

ನಗರದ ವಿವಿಧ ರಸ್ತೆಗಳಲ್ಲಿನ ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡವರ ವಿರುದ್ಧ ಕ್ರಮ ಜರುಗಿಸುತ್ತಿದ್ದೇವೆ. ಯಾರೇ ನಿಯಮ ಉಲ್ಲಂಘಿಸಿದರೂ ಶಿಸ್ತು ಕ್ರಮ ವಹಿಸುತ್ತೇವೆ 

– ಬಿ.ಶುಭ, ಆಯುಕ್ತೆ, ಮಹಾನಗರ ಪಾಲಿಕೆ

ನಗರ ವಿವಿಧ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿಕೊಂಡವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಜರುಗಿಸಬೇಕು. ಪಾದಚಾರಿ ಮಾರ್ಗದಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸುವ ವಾಹನಗಳನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದು, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು

– ವೀರೇಂದ್ರ ಗೊಬರಿ, ಸ್ಥಳೀಯ

ಬೆಳಗಾವಿಯ ಎಸ್‌ಪಿ ಕಚೇರಿಯಿಂದ ಧರ್ಮನಾಥ ಭವನಕ್ಕೆ ಸಾಗುವ ಮಾರ್ಗದ ಫುಟ್‌ಪಾತ್‌ ಮೇಲೆ ಖಾಸಗಿ ಬಸ್‌ಗಳು ನಿಂತಿರುವುದು 

ಧರ್ಮನಾಥ ಭವನದಿಂದ ನೆಹರು ನಗರಕ್ಕೆ ಸಾಗುವ ಪಾದಚಾರಿ ಮಾರ್ಗದಲ್ಲಿ ಖಾಸಗಿ ವಾಹನಗಳು ನಿಲುಗಡೆಯಾಗಿರುವುದು

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತ ಮಾರ್ಗದಲ್ಲಿನ ಪಾದಚಾರಿ ಮಾರ್ಗದಲ್ಲಿ ನಿಂತಿರುವ ಕಾರುಗಳು

ಧರ್ಮನಾಥ ಭವನ ಮುಂಭಾಗದ ಫುಟ್‌ಪಾತ್‌ ಅನ್ನು ಖಾಸಗಿ ವಾಹನಗಳು ಅತಿಕ್ರಮಿಸಿಕೊಂಡಿರುವುದು 

ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.