
ಬೈಲಹೊಂಗಲ: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಪೊಲೀಸ್ ಠಾಣೆಗಳಿಗೆ ನೂತನವಾಗಿ ಅಧಿಕಾರವಹಿಸಿ ಕೊಂಡಿರುವ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ನ್ಯಾಯ ಕೇಳಿ ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸಬೇಕು. ಜಿಲ್ಲೆಯಲ್ಲಿ ಜನಸ್ನೇಹಿ ಆಡಳಿತ ನೀಡಲಾಗುವುದು. ತಮಗಾದ ಅನ್ಯಾಯದ ಕುರಿತು ಸಮಸ್ಯೆ ಹೇಳಿಕೊಳ್ಳಲು ಹಾಗೂ ದೂರು ನೀಡಲು ಪೊಲೀಸ್ ಇಲಾಖೆ ಎಲ್ಲ ಕಚೇರಿಗಳಿಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗುವುದು. ಜನರಿಗೆ ಕಾನೂನಿನ ಭಯವಿರಬೇಕೇ ಹೊರತು, ಪೊಲೀಸರ ಭಯವಲ್ಲ. ಅಂಥ ವಾತಾವಾರಣವನ್ನು ಜಿಲ್ಲೆಯಲ್ಲಿ ಸೃಷ್ಟಿಸಲಾಗುವುದು ಎಂದರು.
ಪಟ್ಟಣದ ಡಿವೈಎಸ್ಪಿ ಕಚೇರಿ, ಬೈಲಹೊಂಗಲ ಸಿಪಿಐ ಕಚೇರಿ, ದೊಡವಾಡ ಪೊಲೀಸ್ ಠಾಣೆ, ಮುರಗೋಡ ಪೊಲೀಸ್ ಠಾಣೆ, ನೇಸರಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಡಿವೈಎಸ್ಪಿ ಡಾ.ವೀರಯ್ಯಾ ಹಿರೇಮಠ, ಸಿಪಿಐ ಪ್ರಮೋದಕುಮಾರ ಯಲಿಗಾರ, ಪಿಎಸ್ಐಗಳಾದ ಎಫ್.ವೈ.ಮಲ್ಲೂರ, ಗುರುರಾಜ ಕಲಬುರಗಿ, ಸಿಬ್ಬಂದಿ ಇದ್ದರು.