ADVERTISEMENT

ಬೆಳಗಾವಿ| ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧಕ್ಕೆ ಅ.2ರ ಗುಡುವು

ಕಾರ್ಯಾಚರಣೆ, ದಂಡಕ್ಕೂ ಬಗ್ಗದ ‘ಪ್ಲಾಸ್ಟಿಕ್‌ ಜಾಲ’

ಎಂ.ಮಹೇಶ
Published 29 ಸೆಪ್ಟೆಂಬರ್ 2019, 11:58 IST
Last Updated 29 ಸೆಪ್ಟೆಂಬರ್ 2019, 11:58 IST
ಚಿಕ್ಕೋಡಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪುರಸಭೆ ಅಧಿಕಾರಿಗಳು ಈಚೆಗೆ ಅಂಗಡಿಗೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಂಡರು
ಚಿಕ್ಕೋಡಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪುರಸಭೆ ಅಧಿಕಾರಿಗಳು ಈಚೆಗೆ ಅಂಗಡಿಗೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಂಡರು   

ಬೆಳಗಾವಿ: ನಗರ ಮತ್ತು ಜಿಲ್ಲೆಯಾದ್ಯಂತ ಸ್ಥಳೀಯ ಸಂಸ್ಥೆಗಳವರು ‘ನಿಷೇಧಿತ ಗುಣಮಟ್ಟದ ಪ್ಲಾಸ್ಟಿಕ್‌’ ಮಾರುವವರ ವಿರುದ್ಧ ಆಗಾಗ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ಇದರಿಂದ ದೊಡ್ಡ ಮಟ್ಟದ ಸುಧಾರಣೆಯೇನೂ ಆಗಿಲ್ಲ!

‘ಪ್ಲಾಸ್ಟಿಕ್‌ ನಿಷೇಧದ ವಿಷಯದಲ್ಲಿ ಇಲ್ಲಿ ಸಮಾಧಾನಕರವಾದ ಅನುಷ್ಠಾನ ಕಂಡುಬಂದಿಲ್ಲ’ ಎಂದು ಅಸಮಾಧಾನ ವ್ಯಕ್ತ‍ಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕರ್ನಾಟಕ ಸಮಿತಿಯ ಅಧ್ಯಕ್ಷ ನ್ಯಾ.ಸುಭಾಷ್ ಅಡಿ, ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದನ್ನು ಆಧರಿಸಿ ಈಚೆಗೆ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಕೆ.ಜಿ. ಗಟ್ಟಲೆ ಪ್ಲಾಸ್ಟಿಕ್‌ ವಶಕ್ಕೆ ಪಡೆದಿದ್ದಾರೆ.

ಪಾಲಿಕೆ ಅಧಿಕಾರಿಗಳು, ಜುಲೈನಲ್ಲಿ ಕೇವಲ 2 ದಿನಗಳಷ್ಟೇ ನಡೆಸಿದ ಕಾರ್ಯಾಚರಣೆಯಲ್ಲಿ 62 ಅಂಗಡಿಗಳ ಮೇಲೆ ದಾಳಿ ನಡೆಸಿ, 275 ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಂಡು ₹80,800 ದಂಡ ವಿಧಿಸಿದ್ದರು. ಇದೇ ರೀತಿ, ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಟ್ಟಣ ಪಂಚಾಯ್ತಿಗಳ ಮಟ್ಟದಲ್ಲೂ ದಾಳಿ ನಡೆಸಿ ‘ಬಿಸಿ’ ಮುಟ್ಟಿಸಲಾಗುತ್ತಿದೆ. ಆದರೆ, ಸಂಪೂರ್ಣ ಕಡಿವಾಣ ಸಾಧ್ಯವಾಗಿಲ್ಲದಿರುವುದು ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ.

ADVERTISEMENT

ಜಾಗೃತಿ ಮೂಡಿಸುತ್ತಿದ್ದೇವೆ: ‘ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಅಂತ್ಯ ಹಾಡುವಂತೆ ಎನ್‌ಜಿಟಿಯು ಅ.2ರವರೆಗೆ ಡೆಡ್‌ಲೈನ್‌ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ನಿಮ್ಮ ಬಳಿ ಇರುವ ಪ್ಲಾಸ್ಟಿಕ್‌ ನಾಶಪಡಿಸುತ್ತೀರೋ, ಏನು ಮಾಡುತ್ತೀರೋ, ಅವುಗಳು ವಿತರಣೆಯಾಗದಂತೆ ಮಾರುಕಟ್ಟೆಗೆ ಬಾರದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ಶಶಿಧರ ನಾಡಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ಲಾಸ್ಟಿಕ್ ವಸ್ತುಗಳು ಮಣ್ಣಿನೊಂದಿಗೆ ಬೆರೆಯುವುದಿಲ್ಲ. ಜೈವಿಕವಾಗಿ ವಿಘಟನೆ ಆಗುವುದಿಲ್ಲ. ಅದರ ವಿಲೇವಾರಿಯೂ ಕಗ್ಗಂಟಾಗಿದೆ. ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಪರಿಸರ ಹಾಗೂ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತದೆ. ಅಂತಹ ವಸ್ತುಗಳನ್ನು ನಿಷೇಧಿಸಲಾಗಿದೆ. ತಯಾರಿಕೆ, ಮಾರಾಟ, ದಾಸ್ತಾನು, ವಿತರಣೆ, ಸಾಗಣೆ, ಬಳಕೆ ಮಾಡುವಂತಿಲ್ಲ ಎಂದು ತಿಳಿಸಲಾಗುತ್ತಿದೆ. ಬಜಾರ್‌, ಶಾಲಾ–ಕಾಲೇಜುಗಳಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಪಾಲಿಕೆಯಿಂದಲೇ ಬಟ್ಟೆ ಬ್ಯಾಗ್‌ಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಜಗ್ಗದವರಿಗೆ ದಂಡವನ್ನೂ ವಿಧಿಸಲಾಗುತ್ತಿದೆ. ಇಡೀ ಸಮಾಜ ಸಹಕರಿಸಬೇಕಾದ ಸಂಗತಿ ಇದು’ ಎನ್ನುತ್ತಾರೆ ಅವರು.

ಮಾರುತ್ತಿದ್ದೇವೆ:

‘ಮನೆ–ಮನೆಗಳಿಂದ ತ್ಯಾಜ್ಯ ಸಂಗ್ರಹಿಸಿದ ನಂತರ, ಪ್ಲಾಸ್ಟಿಕ್‌ ಅನ್ನು ತುರುಮುರಿಯ ವಿಲೇವಾರಿ ಘಟಕದಲ್ಲಿ ಬೇರ್ಪಡಿಸಲಾಗುತ್ತಿದೆ. ಗಣನೀಯ ಪ್ರಮಾಣದಲ್ಲಿ ಸಂಗ್ರಹವಾದ ಬಳಿಕ ಉಪಯೋಗಕ್ಕೆ ಬಾರದ ರೀತಿಯಲ್ಲಿ ತುಂಡರಿಸಿ ಬಕೆಟ್‌, ಬುಟ್ಟಿ, ಬಿಂದಿಗೆ, ಜಗ್‌ ಮೊದಲಾದವುಗಳನ್ನು ತಯಾರಿಸುವವರಿಗೆ ಮಾರುತ್ತಿದ್ದೇವೆ. ಅಂಗಡಿಗಳಲ್ಲಿ ವಶಪಡಿಸಿಕೊಂಡ ಪ್ಲಾಸ್ಟಿಕ್‌ ಅನ್ನೂ ಇದೇ ರೀತಿ ವಿಲೇವಾರಿ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಅ.2ರ ನಂತರ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಿಮೆಂಟ್‌ ಕಾರ್ಖಾನೆಗಳಿಗೆ, ರಸ್ತೆ ನಿರ್ಮಾಣದ ವೇಳೆ ಬಳಸುವುದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡುವಂತೆ ಸೂಚನೆ ಬಂದಿದೆ’ ಎಂದು ಹೇಳಿದರು.

----

ಅಂಕಿ–ಅಂಶ
20 ಟನ್‌
ಹೋದ ವರ್ಷ ನಗರಪಾಲಿಕೆಯಿಂದ ಮಾರಿದ ಪ್ಲಾಸ್ಟಿಕ್‌
₹ 3 ಲಕ್ಷ
ಮಾರಾಟಗಾರರಿಗೆ ವಿಧಿಸಿದ ದಂಡ
62
ಪಾಲಿಕೆಯಿಂದ ಜುಲೈನಲ್ಲಿ 2 ದಿನಗಳಲ್ಲಿ ದಾಳಿ ನಡೆಸಿದ ಅಂಗಡಿಗಳ ಸಂಖ್ಯೆ
275 ಕೆ.ಜಿ
ಎರಡೇ ದಿನಗಳಲ್ಲಿ ವಶಪಡಿಸಿಕೊಂಡ ಪ್ಲಾಸ್ಟಿಕ್ ಪ್ರಮಾಣ
ಅ.2
ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧಕ್ಕೆ ನೀಡಿರುವ ಗಡುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.