ADVERTISEMENT

ಬಹುತ್ವದ ಭಾರತ ಛಿದ್ರ ಮಾಡುವ ಹುನ್ನಾರ: ಕೇಂದ್ರದ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ

‘ಗಾಂಧಿ ಭಾರತ’ ಸಮಾವೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ ಪ್ರಿಯಾಂಕಾ ವಾದ್ರಾ

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 14:31 IST
Last Updated 21 ಜನವರಿ 2025, 14:31 IST
<div class="paragraphs"><p>‘ಗಾಂಧಿ ಭಾರತ’ ಸಮಾವೇಶದಲ್ಲಿ&nbsp;ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿದರು.</p></div>

‘ಗಾಂಧಿ ಭಾರತ’ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿದರು.

   

ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೆಳಗಾವಿ: ‘ಮಹಾತ್ಮ ಗಾಂಧಿ ಅವರು ಸತ್ಯ– ಅಂಹಿಸೆಯ ಮೂಲಕ ಸ್ವಾತಂತ್ರ್ಯ ಗಳಿಸಿದರು. ಸತ್ಯ– ಅಂಹಿಸೆ ತಳಹದಿಯಲ್ಲೇ ಅಂಬೇಡ್ಕರ್ ಸಂವಿಧಾನ ರಚಿಸಿದರು. ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಸಂವಿಧಾನ ಬದಲಿಸುವ ಹುನ್ನಾರ ನಡೆಸಿದೆ’ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಗಾಂಧಿ ಭಾರತ’ ಅಂಗವಾಗಿ ಎಐಸಿಸಿ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಜೈ ಬಾಪು, ಜೈ ಭೀಮ್‌, ಜೈ ಸಂವಿಧಾನ’ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಭಾರತ ಬಹುತ್ವದ ದೇಶ. ಎಲ್ಲರನ್ನೂ ಒಗ್ಗಟ್ಟಿನಿಂದ ಕರೆದೊಯ್ಯವುದು ನಮ್ಮೆಲ್ಲರ ಉದ್ದೇಶ. ಇದು ಸಾಧ್ಯವಾಗುವುದು ಸಂವಿಧಾನದ ಮೂಲಕ ಮಾತ್ರ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ವರ್ಷವೇ ಸಂವಿಧಾನ ಪರಾಮರ್ಶೆಗೆ ಮುಂದಾಯಿತು. ಬಡವರು, ರೈತರು, ಕಾರ್ಮಿಕರು, ಮಹಿಳೆಯರ ಕೈಯಲ್ಲಿರುವ ಏಕಮಾತ್ರ ಅಸ್ತ್ರ ಸಂವಿಧಾನ. ಅದನ್ನೇ ಬದಲಿಸಿ ಬಿಟ್ಟರೆ ಇಡೀ ದೇಶವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಬಹುದು ಎಂಬುದು ಅವರ ಉ‍ಪಾಯ’ ಎಂದೂ ಕಿಡಿಕಾರಿದರು.

‘ಸ್ವಾತಂತ್ರ್ಯದ ಬಳಿಕ ಸಾಕಷ್ಟು ಸರ್ಕಾರಗಳು ಬಂದಿವೆ. ಎಲ್ಲ ಪಕ್ಷಗಳೂ ಆಡಳಿತ ಮಾಡಿವೆ. ಅದರೆ, ಸಂಸತ್ತಿನಲ್ಲಿಯೇ ನಿಂತು ಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ ಕೀರ್ತಿ ಗೃಹಮಂತ್ರಿ ಅಮಿತ್‌ ಶಾ ಅವರಿಗೆ ಸಲ್ಲುತ್ತದೆ. ಆರ್‌ಎಸ್‌ಎಸ್‌ ತತ್ವಗಳು ಗಾಂಧಿ– ಅಂಬೇಡ್ಕರ್‌ ತತ್ವಗಳಿಗೆ ವಿರುದ್ಧವಾಗಿವೆ. ಇದೇ ಕಾರಣಕ್ಕೆ ಬಿಜೆಪಿ ಯಾವಾಗಲೂ ಸಂವಿಧಾನ ಹಾಗೂ ಅಂಬೇಡ್ಕರ್‌ ಅವರಿಗೆ ಅವಮಾನ ಮಾಡುತ್ತದೆ’ ಎಂದರು.

‘ರಾಹುಲ್‌ ಗಾಂಧಿ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಸಮಾವೇಶಕ್ಕೆ ಬಂದಿಲ್ಲ. ಆದರೆ, ಅವರು ಯಾವತ್ತೂ ಸಂವಿಧಾನ ರಕ್ಷಣೆಗೆ ನಿಂತ ಯೋಧ. ರಾಹುಲ್‌ ಅವರನ್ನು ಕಂಡರೆ ಕೇಂದ್ರ ಸರ್ಕಾರ ಭಯದಿಂದ ನಡುಗುತ್ತದೆ. ಅವರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಸಂಸತ್ ಅಧಿವೇಶನಗಳನ್ನೇ ರದ್ದು ಮಾಡುತ್ತಾರೆ. ಅವರ ಮೇಲೆ ಹತ್ತಾರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ’ ಎಂದು ಆರೋಪಿಸಿದರು.

‘ನಮ್ಮವರು ದೇಶಕ್ಕಾಗಿ ಹೋರಾಡಿ ಪ್ರಾಣ ಬಿಟ್ಟರು. ಜೈಲಿನಲ್ಲಿ ಇದ್ದುಕೊಂಡು ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದುಕೊಡಲಿಲ್ಲ. ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ನಾವು ಸಂವಿಧಾನ ರಕ್ಷಣೆಗೆ ಪ್ರಾಣ ಬಿಡಲೂ ಸಿದ್ಧ’ ಎಂದೂ ಹೇಳಿದರು.

‘ಸಂವಿಧಾನ ಕೇವಲ ಪುಸ್ತಕ ಅಲ್ಲ. ನಿಮ್ಮ ರಕ್ಷಾ ಕವಚ. ಈ ವೇದಿಕೆಯಿಂದಲೇ ನೀವು ಸಂಕಲ್ಪ ಮಾಡಿ; ಸಂವಿಧಾನ ರಕ್ಷಣೆಗೆ ನಾವೆಲ್ಲ ಪ್ರಾಣ ಬಿಡಲೂ ಸಿದ್ಧ ಎಂದು ನಿರ್ಧರಿಸಿ ಮುನ್ನುಗ್ಗಿ. 2024ರ ಲೋಕಸಭೆ ಚುನಾವಣೆಯಲ್ಲಿ ದೇಶದ ಜನ ಬಿಜೆಪಿ– ಆರ್‌ಎಸ್‌ಎಸ್‌ ವಿರುದ್ಧ ಮತ ಹಾಕಿ ಬುದ್ಧಿ ಕಲಿಸಿದರು. ಇದರಿಂದ ಬೆಚ್ಚಿಬಿದ್ದ ಪ್ರಧಾನಿ ಮೋದಿ ಸಂವಿಧಾನ ಪುಸ್ತಕಕ್ಕೆ ತಲೆಬಾಗಿ ನಮಸ್ಕಾರ ಮಾಡಿ ಸಂಸತ್‌ ಪ್ರವೇಶಿಸಿದರು. ನಿಮ್ಮ ಸಾಮರ್ಥ್ಯ ಏನೆಂದು ಅರಿಯಲು ಈ ಒಂದೇ ಉದಾಹರಣ ಸಾಕು’ ಎಂದರು.

‘ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿ ಹೋರಾಟದಲ್ಲಿ 700 ರೈತರು ಸತ್ತರು. ಆದರೂ ಕಣ್ಣೆತ್ತಿ ನೋಡದ ಮೋದಿ, ಚುನಾವಣೆ ಬರುತ್ತಿದ್ದಂತೆಯೇ ಕಾಯ್ದೆಗಳನ್ನು ಹಿಂ‍ಪಡೆದರು. ಈ ಕುಟಿಲತೆಯನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಕೇವಲ ₹1 ಲಕ್ಷ ಸಾಲಕ್ಕಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಮೋದಿ ಅವರು ಬಂಡವಾಳ ಶಾಹಿಗಳ ₹17 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ’ ಎಂದೂ ಕಿಡಿ ಕಾರಿದರು.

ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡೇ ಪ್ರಿಯಾಂಕ ಪೂರ್ಣ ಭಾಷಣ ಮಾಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ, ರಣದೀಪ್‌ ಸಿಂಗ್‌ ಸುರ್ಜೇವಾಲಾ, ಮುಖ್ಯಮಂತ್ರಿ, ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಹಲವು ನಾಯಕರು ವೇದಿಕೆ ಮೇಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.