ADVERTISEMENT

ವಿದ್ಯುತ್‌ ಮಾರ್ಗ ದುರಸ್ತಿಗೆ ‘ಬೆಸ್ಕಾಂ’ ನೆರವು

ಬೆಳಗಾವಿ ಜಿಲ್ಲೆಯಲ್ಲಿ ₹ 90 ಕೋಟಿ ನಷ್ಟ

ಎಂ.ಮಹೇಶ
Published 21 ಆಗಸ್ಟ್ 2019, 13:28 IST
Last Updated 21 ಆಗಸ್ಟ್ 2019, 13:28 IST

ಬೆಳಗಾವಿ: ಜಿಲ್ಲೆಯಲ್ಲಿ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದಾಗಿ ಹಾಳಾಗಿರುವ ವಿದ್ಯುತ್‌ ಮಾರ್ಗಗಳ ದುರಸ್ತಿಗಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ನೆರವಾಗಿದ್ದು, ಅಲ್ಲಿಂದು 100 ಮಂದಿ ಲೈನ್‌ಮನ್‌ ಮೊದಲಾದ ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿದೆ. ಇನ್ನೂ 300 ಮಂದಿಯನ್ನು ನಿಯೋಜಿಸುವುದಾಗಿ ತಿಳಿಸಿದೆ. ಅವರೆಲ್ಲರೂ ಹೆಸ್ಕಾಂ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ, ಪ್ರವಾಹದಿಂದಾಗಿ ಜಿಲ್ಲೆಯಾದ್ಯಂತ ಹೆಸ್ಕಾಂಗೂ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಚಿಕ್ಕೋಡಿ, ಅಥಣಿ, ರಾಮದುರ್ಗ, ಸವದತ್ತಿ, ರಾಯಬಾಗ, ಖಾನಾಪುರ ತಾಲ್ಲೂಕುಗಳಲ್ಲಿ ಅತಿ ಹೆಚ್ಚಿನ ಹಾನಿಯಾಗಿದೆ. 17,790 ವಿದ್ಯುತ್ ಕಂಬಗಳು, 4,294 ಟ್ರಾನ್ಸ್‌ಫಾರ್ಮರ್‌ಗಳು (ಪರಿವರ್ತಕಗಳು), 14,033 ಕಿ.ಮೀ.ಗಳಷ್ಟು ಕಂಡಕ್ಟರ್‌ಗಳು ಹಾಳಾಗಿವೆ. ವಿವಿಧೆಡೆ 11 ವಿದ್ಯುತ್‌ ಉಪ ಕೇಂದ್ರಗಳು ಜಲವೃತವಾಗಿದ್ದವು. ಕೆಲವೆಡೆ ನೀರು ನುಗ್ಗಿದ್ದರಿಂದ ಅವುಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಟ್ರಾನ್ಸ್‌ಫಾರ್ಮರ್‌ಗಳಿಗೆ ನೀರಿನೊಂದಿಗೆ ಕೆಸರು ಕೂಡ ತುಂಬಿಕೊಂಡಿದ್ದ ಉದಾಹರಣೆಗಳೂ ಇದ್ದವು.

ಹಲವು ತೊಂದರೆ:ಕಂಬಗಳು ಬಿದ್ದಿದ್ದು, ವಿದ್ಯುತ್‌ ಮಾರ್ಗಗಳು ಹಾಳಾಗಿದ್ದು ಹಾಗೂ ಉಪಕೇಂದ್ರಗಳು ಸ್ಥಗಿತಗೊಂಡಿದ್ದರಿಂದ ಒಟ್ಟು 315 ಹಳ್ಳಿಗಳಲ್ಲಿ ವಿದ್ಯುತ್ ಪೂರೈಕೆ ಇರಲಿಲ್ಲ. ಇದರಿಂದಾಗಿ, ಜನರು ಕತ್ತಲಲ್ಲಿದ್ದರು. ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಮೊದಲಾದ ತೊಂದರೆಗಳು ಎದುರಾಗಿದ್ದವು. ಮಳೆಯ ಪ್ರಮಾಣದ ಕಡಿಮೆಯಾದ ನಂತರ ಆರಂಭಿಸಲಾದ ದುರಸ್ತಿ ಕಾರ್ಯದಲ್ಲಿ ಈವರೆಗೆ 297 ಹಳ್ಳಿಗಳಲ್ಲಿ ವಿದ್ಯುತ್‌ ಪೂರೈಕೆ ಆರಂಭವಾಗಿದೆ.

ADVERTISEMENT

‘14 ಹಳ್ಳಿಗಳಿಗೆ ಬುಧವಾರ ರಾತ್ರಿ ವಿದ್ಯುತ್‌ ಸರಬರಾಜು ಆರಂಭವಾಗಲಿದೆ. ಉಳಿದ 4 ಹಳ್ಳಿಗಳಲ್ಲಿ 2–3 ದಿನಗಳಲ್ಲಿ ಸರಿಯಾಗಲಿದೆ. ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ವಿದ್ಯುತ್‌ ಮಾರ್ಗಗಳು ಮುಳುಗಿದ್ದರಿಂದ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಒಟ್ಟು ₹ 90 ಕೋಟಿ ನಷ್ಟ ಸಂಭವಿಸಿದೆ. ನೀರು ಸಂಪೂರ್ಣವಾಗಿ ಇಳಿದ ಕಡೆಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಬೆಸ್ಕಾಂ ಸಿಬ್ಬಂದಿಯೂ ಕೈಜೋಡಿಸಿರುವುದರಿಂದ ಕಾರ್ಯಾಚರಣೆ ಮತ್ತಷ್ಟು ಚುರುಕಾಗಲಿದೆ’ ಎಂದು ಹೆಸ್ಕಾಂ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಗಿರಿಧರ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅಧಿಕಾರಿಗಳ ನಿಯೋಜನೆ:‘ದುರಸ್ತಿ ಕಾರ್ಯದ ಮೇಲುಸ್ತುವಾರಿಗಾಗಿ 50 ಎಇ, ಎಇಇ, ಜೆಇಗಳನ್ನು ನಿಯೋಜಿಸಲಾಗಿದೆ. 2–3 ಹಳ್ಳಿಗಳಿಗೊಂದು ಸೆಕ್ಟರ್‌ ಮಾಡಿಕೊಂಡು ಆದ್ಯತೆ ಮೇರೆಗೆ ಕ್ರಮ ವಹಿಸಲಾಗುತ್ತಿದೆ. ಕೇಂದ್ರ ಕಚೇರಿಯಿಂದ ಅಗತ್ಯ ಸಾಮಗ್ರಿಗಳ ಖರೀದಿ ಪ್ರಕ್ರಿಯೆಯೂ ನಡೆದಿದೆ. 200 ಕಿ.ಮೀ.ಗಾಗುವಷ್ಟು ಕಂಡಕ್ಟರ್‌ಗಳು ಈಗಾಗಲೇ ಪೂರೈಕೆಯಾಗಿವೆ. ನಮ್ಮಲ್ಲಿ 100 ಕಿ.ಮೀ.ನಷ್ಟು ಕಂಡಕ್ಟರ್‌ಗಳಿದ್ದವು’ ಎಂದು ಮಾಹಿತಿ ನೀಡಿದರು.

‘ಮೊದಲಿಗೆ ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಬಳಿಕ ಹಳ್ಳಿಗಳಿಗೆ ವಿದ್ಯುತ್‌ ಸರಬರಾಜಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ನೀರಾವರಿ ಪಂಪ್‌ಸೆಟ್‌ಗಳಿಗೆ ನಂತರದ ಆದ್ಯತೆ ನೀಡಲಾಗುವುದು. ಜಿಲ್ಲೆಯಾದ್ಯಂತ ವಿದ್ಯುತ್ ಮಾರ್ಗಗಳನ್ನು ಸಹಜ ಸ್ಥಿತಿಗೆ ತರಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹಕರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.