ADVERTISEMENT

ಅಂಕಲಿ | ‘ಬದುಕು ಭವ್ಯಗೊಳಿಸಿದ ಪ್ರಭಾಕರ ಕೋರೆ’

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ 78ನೇ ಜನ್ಮ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 2:55 IST
Last Updated 2 ಆಗಸ್ಟ್ 2025, 2:55 IST
ಚಿಕ್ಕೋಡಿ ತಾಲ್ಲೂಕಿನ ಅಂಕಲಿಯಲ್ಲಿ ಶುಕ್ರವಾರ ಪ್ರಭಾಕರ ಕೋರೆ ಅವರ 78ನೇ ಜನ್ಮ ದಿನಾಚರಣೆ ಅಂಗವಾಗಿ, ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಸಂಸದ ಜಗದೀಶ ಶೆಟ್ಟರ್‌ ಸಸಿಗೆ ನೀರೆರೆದು ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು
ಚಿಕ್ಕೋಡಿ ತಾಲ್ಲೂಕಿನ ಅಂಕಲಿಯಲ್ಲಿ ಶುಕ್ರವಾರ ಪ್ರಭಾಕರ ಕೋರೆ ಅವರ 78ನೇ ಜನ್ಮ ದಿನಾಚರಣೆ ಅಂಗವಾಗಿ, ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಸಂಸದ ಜಗದೀಶ ಶೆಟ್ಟರ್‌ ಸಸಿಗೆ ನೀರೆರೆದು ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು   

ಅಂಕಲಿ (ಚಿಕ್ಕೋಡಿ ತಾ.): ‘ಪ್ರಭಾಕರ ಕೋರೆ ಅವರು ಸಮಾಜಮುಖಿಯಾಗಿ ಬದುಕನ್ನು ಭವ್ಯತೆಗೆ ಏರಿಸಿಕೊಂಡವರು’ ಎಂದು ಕೊಪ್ಪಳ ಗವಿಸಿದ್ಧೇಶ್ವರಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಚಿಕ್ಕೋಡಿಯ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ, ಬಾವನ ಸವದತ್ತಿಯ ಶಿವಶಕ್ತಿ ಶುಗರ್ಸ್‌ ಲಿಮಿಡೆಟ್, ಯಡ್ರಾಂವದ ಹರ್ಮ್ ಡಿಸ್ಟಿಲರಿ ಪ್ರಾವೈಟ್ ಲಿಮಿಡೆಟ್, ಅಂಕಲಿಯ ಡಾ.ಪ್ರಭಾಕರ ಕೋರೆ ಕೋ ಆಪ್‌ರೇಟಿವ್ ಕ್ರೆಡಿಟ್ ಸೊಸೈಟಿ, ಬೆಳಗಾವಿಯ ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ, ಅಂಕಲಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಭಾಕರ ಕೋರೆ ಅವರ 78ನೇ ಜನ್ಮ ದಿನಾಚರಣೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

‘ಪ್ರಕೃತಿಯ ಪ್ರತಿಯೊಂದರಲ್ಲಿಯೂ ನಿತ್ಯೋತ್ಸವವಿದೆ. ಮನುಷ್ಯನ ಬದುಕಿನಲ್ಲಿಯೂ ನಿತ್ಯೋತ್ಸವ ಇರಬೇಕು. ದೇವರು ಕೊಟ್ಟ ಈ ಬದುಕನ್ನು ಹಸನಾಗಿಸಬೇಕು. ದೇವರು ಕೊಟ್ಟದ್ದನ್ನು ನಾವು ಸ್ವೀಕರಿಸಿ ಸಮಾಜಕ್ಕೆ ಸರ್ವೋತ್ತಮವಾದುದನ್ನು ನೀಡಬೇಕು. ಕೋರೆ ಅವರು ಬದುಕಿನುದ್ದಕ್ಕೂ ಸಮಾಜಕ್ಕೆ ಉತ್ತಮವಾದುದನ್ನೇ ಕೊಟ್ಟಿದ್ದಾರೆ’ ಎಂದರು.

ADVERTISEMENT

ಕೊಲ್ಜಾಪುರ ಜೈನ ಮಠದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ‘ಕೆಎಲ್‌ಇ ಕಾರ್ಯಾಧ್ಯಕ್ಷರಾಗಿ 41 ವರ್ಷದಲ್ಲಿ 310ಕ್ಕೂ ಅಧಿಕ ಅಂಗಸಂಸ್ಥೆಗಳನ್ನು ಬೆಳೆಸಿದ್ದು ಅಚ್ಚರಿ’ ಎಂದರು.

ಸನ್ಮಾನ ಸ್ವೀಕರಿಸಿದ ಮಾತನಾಡಿದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ‘ಜನ್ಮ ಕೊಟ್ಟ ಊರಿನ ಋಣ, ತಂದೆ– ತಾಯಿಯ ಋಣ ಸದಾ ಸ್ಮರಿಸುತ್ತೇನೆ. ನಮ್ಮ ತಂದೆ ಮರಾಠಿ ಶಾಲೆ ಪ್ರಾರಂಭಿಸಿದರು. ನಮ್ಮ ಕುಟುಂಬದಲ್ಲಿ ನಾನು ಕನ್ನಡ ಕಲಿತ ಮೊದಲಿಗ. ಶಿಕ್ಷಣದಲ್ಲಿ ಫೇಲಾದರೂ ನಾನು ಮುಂದುವರೆಸಿದೆ. ನಾವು ಯಾವಾಗಲೂ ಎಲ್ಲ ಭಾಷೆಗಳನ್ನು ಪ್ರೀತಿಸುವವರು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಮಾತನಾಡಿ, ‘ಶಿಕ್ಷಣದಲ್ಲಿ ಫೇಲಾದ ವ್ಯಕ್ತಿ ಕೆಎಲ್‌ಇ ಸಂಸ್ಥೆಯನ್ನು ಉತ್ತುಂಗಕ್ಕೆ ಒಯ್ದರು. ಇದು ಅವರಲ್ಲಿನ ಕರ್ತವ್ಯನಿಷ್ಠೆ ತೋರಿಸುತ್ತದೆ’ ಎಂದರು.

ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಶಾಸಕರಾದ ಭರಮಗೌಡ (ರಾಜು) ಕಾಗೆ, ಗಣೇಶ ಹುಕ್ಕೇರಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆ ಕೋ ಆಫ್‌ರೇಟಿವ್ ಕ್ರೇಡಿಟ್ ಸೊಸೈಟಿಯಿಂದ ₹5 ಲಕ್ಷ ನೆರವನ್ನು ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಅರ್ಪಿಸಿದರು. ಪ್ರಭಾಕರ ಕೋರೆ ಹಾಗೂ ಆಶಾ ಕೋರೆ ದಂಪತಿಯನ್ನು ವಿವಿಧ ಸಂಸ್ಥೆಗಳಿಂದ ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಜನ್ಮದಿನಾಚರಣೆ ಸಮಿತಿಯ ಅಧ್ಯಕ್ಷ ಬಿ.ಆರ್.ಪಾಟೀಲ, ಮಲ್ಲಿಕಾರ್ಜುನ ಕೋರೆ, ಭರತೇಶ ಬನವಣೆ, ಸುರೇಶ ಪಾಟೀಲ, ಶಂಕರಣ್ಣ ಮುನವಳ್ಳಿ, ಜಯಾನಂದ ಮುನವಳ್ಳಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕರ್ನಲ್ ಡಾ.ಎಂ. ದಯಾನಂದ, ಡಾ.ವಿ.ಡಿ.ಪಾಟೀಲ, ಡಾ.ನಿರಂಜನಾ ಮಹಾಂತಶೆಟ್ಟಿ, ಡಾ.ಪ್ರೀತಿ ದೊಡವಾಡ ಇದ್ದರು. ಮಹೇಶ ಗುರನಗೌಡರ, ಗಂಗಾ ಅರಭಾವಿ ನಿರೂಪಿಸಿದರು. ಡಿ.ಎಸ್.ಕರೋಶಿ ವಂದಿಸಿದರು.

ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಶುಕ್ರವಾರ ಪ್ರಭಾಕರ ಕೋರೆ ಹಾಗೂ ಆಶಾ ಕೋರೆ ದಂಪತಿಯನ್ನು ವಿವಿಧ ಸಂಘ– ಸಂಸ್ಥೆಗಳ ಸಹಯೋಗದೊಂದಿಗೆ ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಶಾಸಕರಾದ ಗಣೇಶ ಹುಕ್ಕೇರಿ ರಾಜು ಕಾಗೆ ಮುಖಂಡ ಮಹಾಂತೇಶ ಕವಟಗಿಮಠ ಇತರರು ಪಾಲ್ಗೊಂಡರು
ದಕ್ಷಿಣ ಕರ್ನಾಟಕದಲ್ಲಿ ಮೈಸೂರು ಮಹಾರಾಜರು ಹೆಚ್ಚು ಸರ್ಕಾರಿ ಶಾಲೆ ಆರಂಭಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಕೊರತೆ ನೀಗಿಸಿದ್ದು ಕೆಎಲ್‌ಇ ಸಂಸ್ಥೆ
ಸಂಸದ ಜಗದೀಶ ಶೆಟ್ಟರ್‌ ಸಂಸದ ಬೆಳಗಾವಿ
ಪ್ರಭಾಕರ ಕೋರೆ ಅವರಲ್ಲಿ ಪ್ರೀತಿ– ವಾತ್ಸಲ್ಯವಿದೆ. ಜೀವನದಲ್ಲಿ ಹೋರಾಟ ಇದೆ. ಸಮಾಜದ ಬಗ್ಗೆ ಕಳಕಳಿ ಇದೆ. ವಯಸ್ಸಾದರು ಕೂಡ ಸಮಾಜ ಸೇವೆಯ ಪರಿ ಶ್ಲಾಘನೀಯ
ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಜೈನ ಮಠ ಕೊಲ್ಜಾಪುರ

ಆರೋಗ್ಯ ತಪಾಸಣೆ ಜಂಗೀ ಕುಸ್ತಿ ಅಂಕಲಿಯಲ್ಲಿ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಿಂದ ಉಚಿತ ತಪಾಸಣೆ ಜರುಗಿತು. 8800 ಜನ ಪ್ರಯೋಜನ ಪಡೆದರು. 800 ಜನರಿಗೆ ಶಸ್ತ್ರ ಚಿಕಿತ್ಸೆಗೆ ಸೂಚಿಸಲಾಗಿದೆ. 320ಕ್ಕೂ ಅಧಿಕ ರಕ್ತದಾನಿಗಳು ರಕ್ತದಾನ ಮಾಡಿದರು. ರಾಷ್ಟ್ರ ಮಟ್ಟದ ಜಂಗಿ ನಿಖಾಲಿ ಕುಸ್ತಿ ಆಯೋಜಿಸಲಾಗಿತ್ತು. 78 ಕುಸ್ತಿ ಪಟುಗಳು ಕಸರತ್ತು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.