ADVERTISEMENT

ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಸ್ಥಾನದಿಂದ ದೂರ ಉಳಿದ ಪ್ರಭಾಕರ ಕೋರೆ

ಎಲ್ಲ 15 ಆಡಳಿತ ಮಂಡಳಿ ಸದಸ್ಯರ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 5:58 IST
Last Updated 23 ಜನವರಿ 2026, 5:58 IST
   

ಬೆಳಗಾವಿ: ಕಳೆದ 42 ವರ್ಷಗಳಿಂದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ದಾಖಲೆ ಆಡಳಿತ ನಡೆಸಿದ, ‘ಅಷ್ಟಮಋಷಿ’ ಎಂದು ಸಂಸ್ಥೆಯವರೇ ಹೆಮ್ಮೆಯಿಂದ ಕರೆದ ಪ್ರಭಾಕರ ಕೋರೆ ಅವರು ಏಕಾಏಕಿ ಕಾರ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಗುರುವಾರ ನಡೆದ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಅವರನ್ನು ಬಿಟ್ಟು, ಉಳಿದ 14 ಮಂದಿಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಫೆ.7ರಂದು ಹುಬ್ಬಳ್ಳಿಯಲ್ಲಿ, ಫೆ.8ರಂದು ಬೆಳಗಾವಿಯಲ್ಲಿ ಮತದಾನ ನಿಗದಿಯಾಗಿತ್ತು. ಶುಕ್ರವಾರ (ಜ.23) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಈ ಹಿಂದೆ ಇದ್ದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ ಸದಸ್ಯರಷ್ಟೇ ಮತ್ತೂ ನಾಮ‍ಪತ್ರ ಸಲ್ಲಿಸಿದರು. ಪ್ರಭಾಕರ ಕೋರೆ ಅವರು ಮಾತ್ರ ನಾಮಪತ್ರ ಸಲ್ಲಿಸಲು ನಿರಾಕರಿಸಿದರು. ಇದರಿಂದಾಗಿ ಎಲ್ಲರೂ ಅವರೋಧ ಆಯ್ಕೆಯಾಗಿದ್ದು, ಮುಂದೆ ನಡೆಯಬೇಕಿದ್ದ ಮತದಾನವನ್ನು ರದ್ದು ಮಾಡಲಾಗಿದೆ ಎಂದು ಸಂಸ್ಥೆಯ ಚುನಾವಣಾಧಿಕಾರಿ ಎಸ್.ಎಸ್.ಜಲಾಲಪುರೆ ತಿಳಿಸಿದ್ದಾರೆ.

ಪದಾಧಿಕಾರಿಗಳು: ಮಹಾಂತೇಶ ಕೌಜಲಗಿ (ಅಧ್ಯಕ್ಷ), ಬಸವರಾಜ ಶಿವಲಿಂಗಪ್ಪ ತಟವಟಿ (ಉಪಾಧ್ಯಕ್ಷ), ಅಮಿತ ಪ್ರಭಾಕರ ಕೋರೆ, ಪ್ರವೀಣ ಅಶೋಕ ಬಾಗೇವಾಡಿ, ಪ್ರೀತಿ ಕರಣ ದೊಡವಾಡ– ಕೋರೆ, ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ, ಮಲ್ಲಿಕಾರ್ಜುನ ಚನಬಸಪ್ಪ ಕೊಳ್ಳಿ, ವಿಜಯ ಶ್ರೀಶೈಲಪ್ಪ ಮೆಟಗುಡ್, ಜಯಾನಂದ ಊರ್ಫ್ ರಾಜು ಮಹಾದೇವಪ್ಪ ಮುನವಳ್ಳಿ, ಮಂಜುನಾಥ ಶಂಕರಪ್ಪ ಮುನವಳ್ಳಿ, ಬಸವರಾಜ ರುದ್ರಗೌಡ ಪಾಟೀಲ, ವಿಶ್ವನಾಥ ಈರನಗೌಡ ಪಾಟೀಲ, ಯಲ್ಲನಗೌಡ ಶಿವಮೊಗ್ಗೆಪ್ಪ ಪಾಟೀಲ, ಅನೀಲ ವಿಜಯಬಸಪ್ಪ ಪಟ್ಟೇದ (ಆಡಳಿತ ಮಂಡಳಿ ಸದಸ್ಯರು).

ADVERTISEMENT

ಸಾಧನೆಯ ಉತ್ತುಂಗದಲ್ಲಿ ಪ್ರಭಾಕರ ಕೋರೆ: 

1984ರ ಮೇ 16ರಂದು ಪ್ರಭಾಕರ ಕೋರೆ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ನೊಗ ಹೊತ್ತರು. ಆಗ ಅವರಿಗೆ ಕೇವಲ 38 ವರ್ಷ ವಯಸ್ಸು. ದೊಡ್ಡ ಸಂಸ್ಥೆಯೊಂದನ್ನು ಯುವಕನ ಹೆಗಲಿಗೆ ನೀಡಲಾಗಿತ್ತು. ಪ್ರಭಾಕರ ಕೋರೆ ಅವರಲ್ಲಿದ್ದ ನಾಯಕತ್ವ ಗುಣಗಳೇ ಇದಕ್ಕೆ ಕಾರಣವಾಗಿದ್ದವು. ಸಂಸ್ಥೆಯ ನಿರ್ದೇಶಕರು, ಸದಸ್ಯರು, ಶಿಕ್ಷಣ ಪ್ರೇಮಿಗಳು ಇಟ್ಟುಕೊಂಡ ನಿರೀಕ್ಷೆಗಿಂತ ಹೆಚ್ಚಾಗಿ ಅವರು ಸಂಸ್ಥೆ ಬೆಳೆಸಿದರು.

1984ರಿಂದ 2024ರ ಕಾಲಘಟ್ಟವನ್ನು ‘ಕೆಎಲ್‍ಇ ಸಂಸ್ಥೆಯ ಸುವರ್ಣ ಯುಗ’ ಎಂದೇ ಸದಸ್ಯರು ಪರಿಗಣಿಸುತ್ತಾರೆ. 1984ರಲ್ಲಿ 38 ಅಂಗಸಂಸ್ಥೆಗಳು ಇದ್ದವು. ಈಗ ಅವುಗಳ ಸಂಖ್ಯೆ 310. ಆಗ ₹9 ಕೋಟಿ ವಾರ್ಷಿಕ ಬಜೆಟ್‌ ರೂಪಿಸಲಾಗುತ್ತಿತ್ತು. ಈಗ ₹3,000 ಕೋಟಿ ದಾಟಿದೆ. ಶಿಕ್ಷಣ ಸಂಸ್ಥೆಯನ್ನು ಆರ್ಥಿಕವಾಗಿಯೂ ಇಷ್ಟೊಂದು ಬಲಾಢ್ಯ ಮಾಡಿದ್ದು ಕೋರೆ ಅವರಲ್ಲಿನ ಜಾಣ್ಮೆಗೆ ಕನ್ನಡಿ.

ಕೆಎಲ್ಇ ಸಂಸ್ಥೆಯಲ್ಲಿ 1.25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು, 16 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ವೈದ್ಯಕೀಯ ಕಾಲೇಜುಗಳು, ಎಂಜಿನಿಯರಿಂಗ್‌ ಕಾಲೇಜುಗಳು ಮಾತ್ರವಲ್ಲದೇ ಸ್ವಾಯತ್ತ ವಿಶ್ವವಿದ್ಯಾನಿಲಯದ ಮಾನ್ಯತೆಯನ್ನೇ ಕೊಡಿಸಿದ್ದಾರೆ.

ಶೈಕ್ಷಣಿ ಕ್ಷೇತ್ರದಲ್ಲಿನ ಕೋರೆ ಅವರ ಸೇವೆ ಪರಿಗಣಿಸಿ ಅಮೆರಿಕದ ಥಾಮಸ್ ಜಾಫರ್‌ಸನ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್‌ ನೀಡಿದೆ. ಪ್ರಭಾಕರ ಕೋರೆ ಈ ಗೌರವ ಪಡೆದ ಮೊದಲ ಕನ್ನಡಿಗ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳೂ ಅವರನ್ನು ಅರಸಿ ಬಂದಿವೆ.

ಕರ್ನಾಟಕ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಅವರ ಮನೆಬಾಗಿಲಿಗೇ ಬಂದು ನೀಡಿ ಗೌರವಿಸಿದೆ. 2008ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ 2013ರಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಗಳು ಅವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದವು. ನ್ಯೂಯಾರ್ಕ್‌ನ ವೀರಶೈವ ಸಮಾಜ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಿತು. 2015ರಲ್ಲಿ ಮಲೇಶಿಯಾದ ಯು.ಎಸ್.ಎಂ. ವಿ.ವಿ. ಗೌರವ ಡಾಕ್ಟರೇಟ್‌ ನೀಡಿತು. 2013ರಲ್ಲಿ ಭಾರತದ ಕೈಗಾರಿಕಾ ದಿಗ್ಗಜ ಶ್ರೀ ರತನ್ ಟಾಟಾ ಅವರು ಹುಬ್ಬಳ್ಳಿಯಲ್ಲಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು.

ಸಿಂಹಪಾಲು: ಒಂದು ಕಾಲಕ್ಕೆ ಬೆಳಗಾವಿಯಲ್ಲಿ ಜಿ.ಎ. ಹೈಸ್ಕೂಲು, ಲಿಂಗರಾಜ ಕಾಲೇಜು, ಆರ್.ಎಲ್.ಸೈನ್ಸ್ ಕಾಲೇಜು, ಜೆಎನ್ ಮೆಡಿಕಲ್ ಕಾಲೇಜುಗಳಿಗೆ ಮಾತ್ರ ಸೀಮಿತವಾಗಿತ್ತು. ಇಂದು ಇದೇ ನಗರದಲ್ಲಿ ಕೆಎಲ್‌ಇ ಸಂಸ್ಥೆ ಕಳೆದ 40 ವರ್ಷಗಳಲ್ಲಿ 50 ಅಂಗಸಂಸ್ಥೆಗಳನ್ನು ಹೊಂದಿದೆ. ಉತ್ತರ ಕರ್ನಾಟಕದಲ್ಲಿ ಕನ್ನಡಿಗರ ಭದ್ರಕೋಟೆ ಎನಿಸಿದೆ. ಸಂಸ್ಥೆಯ ಮೂಲಕ ಬೆಳಗಾವಿ ಹೆಸರೂ ವಿಶ್ವಮಟ್ಟದಲ್ಲಿ ಬೆಳಗುತ್ತಿದೆ.

ಶಿಕ್ಷಣ, ಸಾಹತ್ಯ, ಸಂಸ್ಕೃತಿ, ಉದ್ಯೋಗ, ಸಹಕಾರ ಇಷ್ಟಕ್ಕೇ ಡಾ.ಕೋರೆ ಅವರು ತೃಪ್ತರಾಗಲಿಲ್ಲ. ಅವರ ಮನಸ್ಸು ಮತ್ತೂ ತುಡಿಯುತ್ತಿತ್ತು. ರೈತರಿಗಾಗಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿದರು. ಅದರ ಪರಿಣಾಮ ಬೃಹದ್ದಾದ ಕೃಷಿ ವಿಜ್ಞಾನ ಕೇಂದ್ರವನ್ನೂ ನಿರ್ಮಿಸಿದರು. ಅದು ರೈತರ ಬದುಕಿಗೆ, ಅವರ ಮಕ್ಕಳ ಬದುಕಿಗೆ ಆಶಾಕಿರಣವಾಗಿ ಬೆಳೆದಿದೆ.

ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ, ವಿದೇಶಗಳಲ್ಲೂ ಶಾಲೆ– ಕಾಲೇಜು ಆರಂಭಿಸಿದ್ದಾರೆ. ಅತ್ಯಾಧುನಿಕ ಸೌಲಭ್ಯ ಹೊಂದಿದ ಬೃಹತ್ ಆಸ್ಪತ್ರೆಗಳು ಹಾಗೂ ಸಂಶೋಧನಾ ಸಂಸ್ಥೆಗಳು ಕ್ರಿಯಾಶೀಲವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.