ADVERTISEMENT

ಪ್ರಗತಿಪರರಿಗೆ ಸಮಾಜ ವಿರೋಧಿ, ದೇಶದ್ರೋಹಿ ಪಟ್ಟ: ನಿಜಗುಣಪ್ರಭು ಸ್ವಾಮೀಜಿ

‘ಪ್ರಗತಿಪರ ಚಿಂತಕ ಪ್ರಶಸ್ತಿ’ ಸ್ವೀಕರಿಸಿದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 16:05 IST
Last Updated 27 ಜೂನ್ 2021, 16:05 IST
ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕಿನ ಬೈಲೂರು ನಿಷ್ಕಲ ಮಂಟಪದಲ್ಲಿ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹೆಸರಿನ ‘ಪ್ರಗತಿಪರ ಚಿಂತಕ’ ಪ್ರಶಸ್ತಿಯನ್ನು ನಿಜಗುಣಪ್ರಭು ಸ್ವಾಮೀಜಿಗೆ ಭಾನುವಾರ ಪ್ರದಾನ ಮಾಡಲಾಯಿತು. ಧಾರವಾಡದ ಜಾನಪದ ಸಂಶೋಧನಾ ಕೇಂದ್ರದ ವಿಶ್ವೇಶ್ವರಿ ಹಿರೇಮಠ, ಅಥಣಿಯ ವಿಮೋಚನಾ ಸಂಸ್ಥೆಯ ಬಿ.ಎಲ್. ಪಾಟೀಲ, ಸಾಹಿತಿ ಡಾ.ಬಾಳಣ್ಣ ಶೀಗೆಹಳ್ಳಿ, ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ ಬಸವಲಿಂಗಯ್ಯ ಹಿರೇಮಠ, ಪ್ರೊಬೆಷನರಿ ತಹಶೀಲ್ದಾರ್ ಮಹೇಶ್ ಪತ್ರಿ ಇದ್ದಾರೆಪ್ರಜಾವಾಣಿ ಚಿತ್ರ
ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕಿನ ಬೈಲೂರು ನಿಷ್ಕಲ ಮಂಟಪದಲ್ಲಿ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹೆಸರಿನ ‘ಪ್ರಗತಿಪರ ಚಿಂತಕ’ ಪ್ರಶಸ್ತಿಯನ್ನು ನಿಜಗುಣಪ್ರಭು ಸ್ವಾಮೀಜಿಗೆ ಭಾನುವಾರ ಪ್ರದಾನ ಮಾಡಲಾಯಿತು. ಧಾರವಾಡದ ಜಾನಪದ ಸಂಶೋಧನಾ ಕೇಂದ್ರದ ವಿಶ್ವೇಶ್ವರಿ ಹಿರೇಮಠ, ಅಥಣಿಯ ವಿಮೋಚನಾ ಸಂಸ್ಥೆಯ ಬಿ.ಎಲ್. ಪಾಟೀಲ, ಸಾಹಿತಿ ಡಾ.ಬಾಳಣ್ಣ ಶೀಗೆಹಳ್ಳಿ, ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ ಬಸವಲಿಂಗಯ್ಯ ಹಿರೇಮಠ, ಪ್ರೊಬೆಷನರಿ ತಹಶೀಲ್ದಾರ್ ಮಹೇಶ್ ಪತ್ರಿ ಇದ್ದಾರೆಪ್ರಜಾವಾಣಿ ಚಿತ್ರ   

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ಜಾತಿ ವ್ಯವಸ್ಥೆ ಮತ್ತು ಮೌಢ್ಯ ಆಚರಣೆ ವಿರುದ್ಧ ಮಾತನಾಡಿದರೆ ಅವರಿಗೆ ಸಮಾಜ ವಿರೋಧಿ ಹಾಗೂ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ’ ಎಂದು ಬೈಲೂರು ನಿಷ್ಕಲ ಮಂಟಪ ಮತ್ತು ಮುಂಡರಗಿಯ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಬೈಲೂರು ಗ್ರಾಮದ ನಿಷ್ಕಲ ಮಂಟಪದಲ್ಲಿ ಶರಣ ಸಾಹಿತ್ಯ ಪರಿಷತ್‌ ಬೆಂಗಳೂರು ನಗರ ಘಟಕ ಮತ್ತು ಧಾರವಾಡದ ಜಾನಪದ ಸಂಶೋಧನಾ ಕೇಂದ್ರದ ಸಹಕಾರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಹೆಸರಿನಲ್ಲಿ ಲಂಡನ್‌ನ ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನವು ನೀಡಿದ ‘ಪ್ರಗತಿಪರ ಚಿಂತಕ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

‘ಸಂಕ್ರಮಣ ಕಾಲದಲ್ಲಿ ಪ್ರಗತಿಪರ ವಿಚಾರಪರ ಮಾತನಾಡುವರರು ಇದ್ದಾರೆ. ಸಮಾನತೆ ಸಾರಿದ, ಮೌಢ್ಯ ವಿರೋಧಿಸಿದ ಬಸವಣ್ಣನ ಹಾದಿಯಲ್ಲಿ ಸಾಗಿದ್ದ ಕಲಬುರ್ಗಿ ಅವರನ್ನು ಧರ್ಮಾಂಧ ಕೊಲೆ ಮಾಡಿದ. ಕೊಲೆಗಡುಕರಿಗೆ ಶಿಕ್ಷೆ ಆಗುವುದನ್ನು ನೋಡಬೇಕಿದೆ’ ಎಂದರು.

ADVERTISEMENT

ಸವಾಲಿದು:

‘ಜಾತಿವಾದಿ ಮತ್ತು ಧರ್ಮಾಂಧರ ವಿರುದ್ಧ ಮಾತನಾಡುವವರ ಕೊಲ್ಲಬಹುದು. ಆದರೆ, ಅವರ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ. ಕಲಬುರ್ಗಿ ಹೆಸರಿನಲ್ಲಿರುವ ಪ್ರಶಸ್ತಿ ಸ್ವೀಕರಿಸಲು ನನಗೂ ನೋವಿದೆ. ಆದರೆ, ಇದನ್ನು ಧರ್ಮಾಂಧರಿಗೆ ಹಾಕಿದ ಸವಾಲೆಂದು ಪಡೆಯುತ್ತಿರುವೆ’ ಎಂದು ನುಡಿದರು.

ಪ್ರಶಸ್ತಿ ಪ್ರದಾನ ಮಾಡಿದ ಸಾಹಿತಿ ಡಾ.ಬಾಳಣ್ಣ ಶೀಗೆಹಳ್ಳಿ, ‘ಸಂಶೋಧನೆ, ನಾಟಕ, ಸಂಪದಾನೆ, ಅಲಂಕಾರ, ಹಳೆಗನ್ನಡ, ವ್ಯಾಕರಣ, ಛಂದಸ್ಸು ಸೇರಿದಂತೆ ಹಲವು ಶಾಸ್ತ್ರಗಳಲ್ಲಿ ಕಲಬುರ್ಗಿ ಅವರು ವಿದ್ವತ್ತು ಹೊಂದಿದ್ದರು. ಅವರ ಬೋಧನಾ ವೈಖರಿ ಅದ್ಭುತವಾಗಿತ್ತು. ಓದು ಕೂಡ ಭಾವನಾತ್ಮಕ ನೆಲೆಯ ಆವಿಷ್ಕಾರ ಎನ್ನುವುದನ್ನು ತೋರಿಸಿಕೊಟ್ಟವರು ಪ್ರೊ.ಕಲಬುರ್ಗಿ’ ಎಂದು ಬಣ್ಣಿಸಿದರು.

‘ಕಲಬುರ್ಗಿ ಅವರೂ ಬದುಕಿನುದ್ದಕ್ಕೂ ಅಂಧಶ್ರದ್ಧೆ, ಅಸಮಾನತೆ ವಿರುದ್ಧ ಹೋರಾಡಿದರು. ಅಂತಹ ಶ್ರೇಷ್ಠ ವ್ಯಕ್ತಿತ್ವದ ಅಂಶಗಳು ಬೈಲೂರು ಶ್ರೀಗಳಲ್ಲಿ ಬೆರೆತುಕೊಂಡಿವೆ. ಅವರಿಗೆ ಪ್ರಶಸ್ತಿ ನೀಡಿರುವುದು ಸೂಕ್ತವಾಗಿದೆ’ ಎಂದರು.

ತಲುಪಿಸುವ ಹಂಬಲವಿತ್ತು: ವರ್ಚುವಲ್ ವೇದಿಕೆ ಮೂಲಕ ಮಾತನಾಡಿದ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ‘ಕಲಬುರ್ಗಿಯವರು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಿದರು. ಹಾವೇರಿ ಜಿಲ್ಲೆಯ ಜಾನಪದ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಸಂಸ್ಥೆಗಳಿಗೆ ಮಾರ್ಗದರ್ಶನ ಮಾಡಿದರು’ ಎಂದು ಸ್ಮರಿಸಿದರು.

ವಿಮರ್ಶಕಿ ಎಂ.ಎಸ್. ಆಶಾದೇವಿ ಮಾತನಾಡಿ, ‘ಲಿಂಗಾಯತ ಪೂರ್ಣ ಧರ್ಮವಾಗಿದೆ ಎಂದು ಹೇಳುತ್ತಿದ್ದ ಕಲಬುರ್ಗಿ ಅವರಿಗೆ ಅದರ ತತ್ವ, ಸಿದ್ಧಾಂತವನ್ನು ಎಲ್ಲರಿಗೂ ತಲುಪಿಸುವ ಹಂಬಲವಿತ್ತು’ ಎಂದು ನೆನೆದರು.

ಲಂಡನ್‌ನ ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಮಹಾದೇವಯ್ಯ ವರ್ಚುವಲ್ ವೇದಿಕೆಯಲ್ಲಿ ಮಾತನಾಡಿ, ‘ಕಲಬುರ್ಗಿ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ 4ನೇ ಪ್ರಶಸ್ತಿ ಇದಾಗಿದೆ. ಮುಂದಿನ ವರ್ಷ ಸಾಹಿತಿ ಮರುಳಸಿದ್ದಯ್ಯ ಅವರಿಗೆ ನೀಡಲಾಗುವುದು’ ಎಂದು ಪ್ರಕಟಿಸಿದರು.

ಶರಣ ಸಾಹಿತ್ಯ ಪರಿಷತ್‌ ಬೆಂಗಳೂರು ನಗರ ಘಟಕದ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಆಶಯ ನುಡಿಗಳನ್ನಾಡಿದರು. ಪ್ರೊಬೆಷನರಿ ತಹಶೀಲ್ದಾರ್ ಮಹೇಶ ಪತ್ರಿ, ದಾವಣಗೆರೆಯ ಮುಖಂಡ ಎಚ್‌.ಎಸ್. ಶಿವಶಂಕರ್‌ ಪಾಲ್ಗೊಂಡಿದ್ದರು.

ಬಸಲಿಂಗಯ್ಯ ಹಿರೇಮಠ ಅವರು ಎಂ.ಎಂ. ಕಲಬುರ್ಗಿ ರಚಿಸಿದ ರಂಗಗೀತೆ ಹಾಡಿದರು. ಅಥಣಿ ವಿಮೋಚನಾ ಸಂಸ್ಥೆಯ ಬಿ.ಎಲ್. ಪಾಟೀಲ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.