ಚಿಕ್ಕೋಡಿ:‘ಕೇರಳದ ಶಬರಿಮಲೈ ಕ್ಷೇತ್ರಕ್ಕೆ ವರ್ಷಕ್ಕೆ 5 ಕೋಟಿಗೂ ಹೆಚ್ಚು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಭೇಟಿ ನೀಡುತ್ತಾರೆ. ಅಲ್ಲಿನ ಸರ್ಕಾರಕ್ಕೆ ಪ್ರತಿ ವರ್ಷ ₹3 ಸಾವಿರ ಕೋಟಿ ಆದಾಯ ಬರುತ್ತಿದೆ. ಆದರೆ, ಅಲ್ಲಿ ಭಕ್ತರಿಗೆ ಮೂಲಸೌಲಭ್ಯ ಕಲ್ಪಿಸುತ್ತಿಲ್ಲ’ ಎಂದು ಶ್ರೀರಾಮಸೇನೆ ಸಂಘಟನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ ಆರೋಪಿಸಿದರು.
‘ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತಮಿಳುನಾಡು, ಕೇರಳದಿಂದ 1 ಕೋಟಿ ವಾಹನಗಳು ಪ್ರತಿವರ್ಷ ಈ ಕ್ಷೇತ್ರಕ್ಕೆ ಹೋಗುತ್ತವೆ. ಕೇರಳ ಸರ್ಕಾರ ಪ್ರತಿ ವಾಹನದಿಂದ ₹40 ವಸೂಲಿ ಮಾಡುತ್ತದೆ. ಅಲ್ಲಿನ ಸರ್ಕಾರವು ದೇವಸ್ಥಾನ ಸಮಿತಿ ಮೇಲೆ ಒತ್ತಡ ಹೇರಿ, ಸೌಲಭ್ಯ ಕಲ್ಪಿಸುತ್ತಿಲ್ಲ. ಶಬರಿಮಲೈಗೆ ಹೋಗುವ ಭಕ್ತರಿಗೆ ಕರ್ನಾಟಕ ಸರ್ಕಾರವೂ ಸೌಲಭ್ಯ ಕಲ್ಪಿಸಬೇಕು’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಅಯ್ಯಪ್ಪಸ್ವಾಮಿ ಮಾಲಾ ಧಾರಿಗಳಿಂದ ಸಂಗ್ರಹವಾದ ಆದಾಯವನ್ನು ಅವರಿಗೆ ಅನುಕೂಲ ಕಲ್ಪಿಸಲು ವಿನಿಯೋಗಿಸಬೇಕು. ಟೋಲ್ ನಾಕಾಗಳಲ್ಲಿ ಮಾಲಾಧಾರಿಗಳ ವಾಹನಗಳಿಗೆ ಉಚಿತವಾಗಿ ಪ್ರವೇಶ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.