ADVERTISEMENT

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಿಯೋಗದೊಂದಿಗೆ ಶೀಘ್ರ ರಾಷ್ಟ್ರಪತಿ ಭೇಟಿ: ತಂಗಡಗಿ

'ಕೇರಳದ ನೀತಿಯಿಂದ ಕನ್ನಡಿಗರ ಹಿತಾಸಕ್ತಿಗಳ ಮೇಲೆ ಪರಿಣಾಮ'

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 10:46 IST
Last Updated 9 ಜನವರಿ 2026, 10:46 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

   

ಬೆಳಗಾವಿ: ‘ಕೇರಳ ಸರ್ಕಾರ ಅಂಗೀಕರಿಸಿರುವ ಮಲಯಾಳಂ ಭಾಷಾ ಮಸೂದೆಯು ಗಡಿ ಪ್ರದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಕಾಸರಗೋಡಿನ ಕನ್ನಡಿಗರ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಅದಕ್ಕೆ ಅನುಮೋದನೆ ನೀಡದಂತೆ ಕೋರಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗ ಶೀಘ್ರವೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮಲಯಾಳಂ ಭಾಷಾ ಮಸೂದೆಯು ಕೇರಳದ ಗಡಿ ಪ್ರದೇಶಗಳಲ್ಲಿ ವಾಸಿಸುವ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿದೆ. ಕಾಸರಗೋಡಿನಲ್ಲಿ 7.5 ಲಕ್ಷ ಕನ್ನಡಿಗರಿದ್ದು, 210 ಕನ್ನಡ ಮಾಧ್ಯಮ ಶಾಲೆಗಳಿವೆ. ಸಂವಿಧಾನದ 350ಬಿ ವಿಧಿಯ ನಿಬಂಧನೆಗಳ ಅಡಿ, ಕೇರಳ ಸರ್ಕಾರ ಕಳುಹಿಸಿರುವ ಮಸೂದೆಗೆ ಅನುಮೋದನೆ ನೀಡದಂತೆ ರಾಷ್ಟ್ರಪತಿಗಳನ್ನು ಒತ್ತಾಯಿಸುತ್ತೇವೆ’ ಎಂದರು.

ADVERTISEMENT

‘ಈ ಸಂಬಂಧ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿದ್ದೇವೆ. ಮಲಯಾಳಂ ಭಾಷಾ ಮಸೂದೆಗೆ ಅನುಮೋದನೆ ಕೊಡದಂತೆ ಕೇರಳ ರಾಜ್ಯಪಾಲರನ್ನು ಒತ್ತಾಯಿಸುತ್ತೇವೆ. ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿರುವ ಮಸೂದೆಯ ಕುರಿತು ಕೇರಳ ಮುಖ್ಯಮಂತ್ರಿಗೆ ಪತ್ರ ಬರೆಯುವಂತೆಯೂ ಕೇಳಲಾಗುವುದು. ಈ ನಿಟ್ಟಿನಲ್ಲಿ ಸಂಬಂಧಿತರೊಂದಿಗೆ ಚರ್ಚಿಸಲಾಗುವುದು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವೂ ಮಸೂದೆ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದಿದೆ’ ಎಂದು ಅವರು ಹೇಳಿದರು.

‘ನಾಯಕತ್ವದ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗಿದೆ. ಅದರ ಬಗ್ಗೆ ಯಾವುದೇ ನಿರ್ಧಾರಗಳನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಾಂಗ್ರೆಸ್ ಸರ್ಕಾರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಬಿಜೆಪಿ ನಾಯಕರಿಗೆ ಸರ್ಕಾರದ ಯಶಸ್ಸನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಕಾಂಗ್ರೆಸ್‌ನಲ್ಲಿ ಉತ್ತಮ ವಾತಾವರಣವೇ ಇದ್ದರೂ, ನಾಯಕತ್ವದ ಸಮಸ್ಯೆ ಎತ್ತುತ್ತಿದ್ದಾರೆ’ ಎಂದು ಟೀಕಿಸಿದರು.

‘ಜನಾರ್ದನ ರೆಡ್ಡಿ ಸಚಿವರಿದ್ದಾಗ ಬಳ್ಳಾರಿಯಲ್ಲಿ ಬೇರೆ ಪರಿಸ್ಥಿತಿ ಇತ್ತು. ಈಗ ಬೇರೆ ಇದೆ. ಬಳ್ಳಾರಿ ಘಟನೆ ಬಗ್ಗೆ ತನಿಖೆ ಆಗುತ್ತಿದೆ. ರೆಡ್ಡಿ ಬಳ್ಳಾರಿಯಲ್ಲಿ ಹಸ್ತಕ್ಷೇಪ ಮಾಡುವ ಬದಲು ತಮ್ಮ ವಿಧಾನಸಭಾ ಕ್ಷೇತ್ರ ಗಂಗಾವತಿಯ ಬಗ್ಗೆ ಚಿಂತಿಸಬೇಕು. ನ್ಯಾಷನಲ್ ಹೆರಾಲ್ಡ್ ಪ್ರಕರಣ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡುತ್ತಿರುವುದು ಬಿಜೆಪಿ ನಾಯಕರು ಗಾಂಧಿ ಕುಟುಂಬಕ್ಕೆ ಭಯಪಡುತ್ತಾರೆ ಎಂದು ತೋರಿಸುತ್ತದೆ’ ಎಂದು ಅವರು ಹೇಳಿದರು.

‘ಬಿಜೆಪಿ ಕೇವಲ ದ್ವೇಷದ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್‌ ಜಾರಿಗೆ ತಂದಿದ್ದ ಯೋಜನೆಗಳ ಹೆಸರು ಬದಲಿಸಿರುವುದೇ ಬಿಜೆಪಿಯ ದೊಡ್ಡ ಸಾಧನೆ. ದೊಡ್ಡ ಉದ್ಯಮಿಗಳಿಗೆ ಲಾಭ ಮಾಡುವ ದೃಷ್ಟಿಯಿಂದ ನರೇಗಾ ಯೋಜನೆ ಹೆಸರು ಬದಲಿಸಿದ್ದಾರೆ. ಗಾಂಧಿ ಅವರ ಬಗ್ಗೆ ಬಿಜೆಪಿಗೆ ಎಷ್ಟು ಗೌರವವಿದೆ ಎಂಬುದು ಇದರಿಂದ ತಿಳಿಯುತ್ತದೆ’ ಎಂದರು.